Advertisement

ರಾಜಿ ಸಂಧಾನದಿಂದ ಸಮಸ್ಯೆ ಬಗೆ ಹರಿಸಿಕೊಳ್ಳಿ

04:54 PM Nov 10, 2017 | Team Udayavani |

ಮಾಗಡಿ: ರಾಜಿ ಸಂಧಾನದ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಸಂಬಂಧಗಳು, ಹಣ, ಸಮಯ ಎಲ್ಲವೂ ಉಳಿಯುತ್ತದೆ. ನೆಮ್ಮದಿ ಜೀವನಕ್ಕೆ ನಾಂದಿಯಾಗುತ್ತದೆ ಎಂದು ಜೆಎಂಎಫ್ಸಿ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಕೆ.ಮಹದೇವ್‌ ಹೇಳಿದರು.

Advertisement

ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಸಭಾಂಗದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ತಾಲೂಕು ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮತ್ತು ಬಾಲ ನ್ಯಾಯ ಮತ್ತು ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರು ದಿನನಿತ್ಯದ ಕಾನೂನು ಅರಿವು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೆತ್ತ ಮಕ್ಕಳನ್ನು ಶಾಲೆಗಳಿಗೆ ಸೇರಿಸಿ ವಿದ್ಯಾಭ್ಯಾಸ ಕೊಡಿಸುವುದು ಪೋಷಕರ ಕರ್ತವ್ಯ. ಓದಿನ ಸಮಯದಲ್ಲಿ ದುಡಿಮೆಗೆ ಕಳಿಸುವುದು ಕಾನೂನು ಅಪರಾಧವಾಗುತ್ತದೆ. 16 ವರ್ಷದೊಳಗಿನ ಬಾಲ್ಯದ ಮಕ್ಕಳು ಮಾಡುವ ಕೃತ್ಯಗಳಿಗೆ ಅಪರಾಧಿ ಎಂದು ಬಿಂಬಿಸಬಾರದು.

ಕಾನೂನು ಸಂಘರ್ಷಿತ ವ್ಯಕ್ತಿ ಎನ್ನಬೇಕು. ಸಣ್ಣಪುಟ್ಟ ವ್ಯಾಜ್ಯಗಳಿಗೆ ನ್ಯಾಯಾಲಯಕ್ಕೆ ಅಲೆಯವುದು ಬೇಡ. ಅಗತ್ಯವೆನಿಸಿದರೆ ಪ್ರಾಧಿಕಾರದಿಂದ ಸಲಹೆ, ನೆರವು ಸಹ ಪಡೆದುಕೊಂಡು ಪ್ರಕರಣ ಇತ್ಯಾರ್ಥ ಪಡಿಸಿಕೊಳ್ಳುವ ಅವಕಾಶ ಪ್ರಾಧಿಕಾರ ಕಲ್ಪಿಸುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಸಮಸ್ಯೆಗಳ ಹೆಚ್ಚಳದಿಂದ ಆತಂಕ: ಅಪರ ಸಿವಿಲ್‌ ನ್ಯಾಯಾಧೀಶ ಮಹಾವೀರ್‌ ಕರೆಣ್ಣ ಮಾತನಾಡಿ, ನಾಗಲೋಟದ ಆಧುನಿಕ ಜಗತ್ತಿನಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿರುವುದು ಆತಂಕದ ಬೆಳವಣಿಗೆ. ಪೋಷಕರು ತಮ್ಮ ಮಕ್ಕಳನ್ನು ಸರಿಯಾಗಿ ಪೋಷಣೆ ಮಾಡಬೇಕು. ಉತ್ತಮವಾದ ಮಾರ್ಗದರ್ಶನ ನೀಡಿದರೆ ನಾಗರಿಕ ಸಮಾಜದಲ್ಲಿ ಸಂಘರ್ಷಕ್ಕೆ ಇಳಿಯುವುದಿಲ್ಲ. ದೇಶದ ಸಂಪತ್ತಾಗಿ ರೂಪಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಮಾದರಿಯಾಗಿ ನಿಲ್ಲುತ್ತಾರೆ ಎಂದರು.

Advertisement

ಮಕ್ಕಳು, ಮಹಿಳೆಯರ ರಕ್ಷಣೆಗೆ ಕ್ರಮ ಕೈಗೊಳ್ಳಿ: ಸಿಡಿಪಿಒ ಮೇಲ್ವಿಚಾರಕಿ ಮಂಜುಳಾದೇವಿ ಮಾತನಾಡಿ, ಸರ್ಕಾರದ ಮಹತ್ವಕಾಂಕ್ಷೆಯ ಮಾತೃಭೂಮಿ ಯೋಜನೆ ಬಡವರು, ಅಪೌಷ್ಟಿಕತೆಯಿಂದ ನರಳುತ್ತಿರುವ ಗರ್ಭಿಣಿಯರಿಗೆ ಬಾಣಂತಿಯರಿಗೆ ಉತ್ತಮ ಯೋಜನೆಯಾಗಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಆರೋಗ್ಯವಂತ ಮಗುವಿಗೆ ಜನನದ ಜೊತೆಗೆ ಆರೋಗ್ಯವಂತ ಸಮಾಜ ನಿರ್ಮಿಸಬೇಕಿದೆ.

ಇತ್ತೀಚಿಗೆ ಬಿûಾಟನೆಗೋ ಅಥವಾ ವೇಶ್ಯವಾಟಿಕೆಗೂ ಮಗು ಮತ್ತು ಮಹಿಳೆಯರನ್ನು ಅಪಹರಿಸಿ ಮಾರಾಟ ಮಾಡುವ ಜಾಲ ಇರುವುದು ದೇಶಕ್ಕೆ ಮಾರಕ. ಇಂಥ ಅನಾಹುತ ತಡೆಯಲು ಜನತೆ ಜಾಗೃತರಾಗಬೇಕು. ಕಾನೂನು ನೆರವು ಪಡೆದು ಮುದ್ಧ ಮಗು ಮತ್ತು ಮಹಿಳೆಯರನ್ನು ರಕ್ಷಿಸಬೇಕು. ಆರೋಪಿಗಳನ್ನು ಕಾನೂನಡಿ ಶಿಕ್ಷೆಗೆ ಒಳಪಡಿಸಬೇಕಿದೆ ಎಂದು ಜಾಗೃತಿ ಮೂಡಿಸಿದರು. ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ದೇವರಾಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಪರ ಸಿವಿಲ್‌ ನ್ಯಾಯಾಧೀಶರಾದ ಜೆ.ಲತಾ, ಎಚ್‌.ಸಿ.ರೇಖಾ, ಸಹಾಯಕ ಸರ್ಕಾರಿ ಅಭಿಯೋಜಕಿ ಎನ್‌.ಶಾರದ, ವಕೀಲ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ನಾಗೇಶ್‌, ಜಂಟೀ ಕಾರ್ಯದರ್ಶಿ ಎಚ್‌.ನಾರಾಯಣಸ್ವಾಮಿ, ವಕೀಲರಾದ ಡಿ.ಎಚ್‌.ಮಲ್ಲಿಕಾರ್ಜುನಯ್ಯ, ಶಿಲ್ಪಶ್ರೀ, ಜಿ.ಪಾಪಣ್ಣ, ನರಸಿಂಹಮೂರ್ತಿ, ಚಕ್ರಬಸವಯ್ಯ, ಲಕ್ಷ್ಮೀಪ್ರಸಾದ್‌, ಹೇಮಲತಾ, ಎಸ್‌.ಎನ್‌. ರವಿಕಲಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next