Advertisement

ಟಿ20 ವಿಶ್ವಕಪ್‌ ಯುಎಇಗೆ ಸ್ಥಳಾಂತರ ಖಚಿತ : ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ

11:15 PM Jun 28, 2021 | Team Udayavani |

ಹೊಸದಿಲ್ಲಿ : ಭಾರತದಲ್ಲಿ ಮುಂದಿನ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲು ಉದ್ದೇಶಿಸ ಲಾಗಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಕೋವಿಡ್‌ ರೋಗ ಹಿನ್ನೆಲೆಯಲ್ಲಿ ಮತ್ತು ಆಟಗಾರರ ಆರೋಗ್ಯ ಸುರಕ್ಷತೆಯ ಕಾರಣಗಳಿಗಾಗಿ ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಖಚಿತಪಡಿಸಿದ್ದಾರೆ.

Advertisement

ಬೃಹತ್‌ ಮಟ್ಟದ ಈ ಕೂಟವನ್ನು ಯುಎಇಗೆ ಸ್ಥಳಾಂತರಿಸಬಹುದೆಂದು ನಾವು ಅಧಿಕೃತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ಗೆ ತಿಳಿಸಿದ್ದೇವೆ ಎಂದು ಗಂಗೂಲಿ ಹೇಳಿದರು. ಈ ಮೂಲಕ ಕೂಟ ನಡೆಯುವ ಬಗ್ಗೆ ಕಳೆದ ಕೆಲವು ವಾರಗಳಿಂದ ಇದ್ದ ಸಂಶಯ ದೂರವಾಗಿದೆ. ಕೊರೊನಾದಿಂದಾಗಿ ಭಾರತದಲ್ಲಿ ನಡೆಯುತ್ತಿದ್ದ ಐಪಿಎಲ್‌ ಕೂಟವನ್ನು ಕೂಡ ಯುಎಇಗೆ ಸ್ಥಳಾಂತರಗೊಳಿಸಲಾಗಿದ್ದು ಸೆಪ್ಟಂಬರ್‌-ಅಕ್ಟೋಬರ್‌ನಲ್ಲಿ ಎರಡನೇ ಹಂತ ನಡೆಯಲಿದೆ.

ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಆದರೂ ಆಟಗಾರರ ಮತ್ತು ಅಭಿಮಾನಿಗಳ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ಕೂಟವನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಕೂಟ ಯುಎಇಯಲ್ಲಿ ನಡೆಯಲಿದ್ದರೂ ಬಿಸಿಸಿಐ ಆತಿಥ್ಯ ವಹಿಸಲಿದೆ ಎಂದು ಗಂಗೂಲಿ ಸ್ಪಷ್ಟಪಡಿಸಿದರು.

ಅ. 17ರಿಂದ ಆರಂಭ?
ವಿಶ್ವಕಪ್‌ ಕೂಟ ಅ. 17ರಿಂದ ಆರಂಭಗೊಳ್ಳುವುದು ಅಂತಿಮವಾಯಿತೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ ನಾವು ಕೆಲವು ದಿನಗಳಲ್ಲಿ ವೇಳಾಪಟ್ಟಿ ವಿವರಗಳನ್ನು ಅಂತಿಮಗೊಳಿಸಲಿದ್ದೇವೆ. ಅ. 17ರಂದು ಆರಂಭಗೊಳ್ಳುವ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎಂದು ಗಂಗೂಲಿ ಹೇಳಿದರು.

ಕೋವಿಡ್‌ ಸೋಂಕು ಮತ್ತು ಸಂಭಾವ್ಯ ಮೂರನೇ ಅಲೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಶ್ವಕಪ್‌ ಕೂಟವನ್ನು ಆಯೋಜಿಸುವುದು ಕಷ್ಟವೆಂದು ತಿಳಿದು ಐಸಿಸಿಯು ಈ ತಿಂಗಳ ಆರಂಭದಲ್ಲಿಯೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾಲ್ಕು ವಾರಗಳ ಗಡುವನ್ನು ಬಿಸಿಸಿಐಗೆ ನೀಡಿತ್ತು. ಕಳೆದ ಕೆಲವು ದಿನಗಳಿಂದ ಗಂಭೀರ ಚರ್ಚೆಯಲ್ಲಿ ತೊಡಗಿದ್ದ ಬಿಸಿಸಿಐ ಸದಸ್ಯರು ಅಂತಿಮವಾಗಿ ಕೂಟ ಸ್ಥಳಾಂತರಿಸಲು ನಿಶ್ಚಯಿಸಿದರು.

Advertisement

16 ರಾಷ್ಟ್ರಗಳು ಭಾಗವಹಿಸಲಿರುವ ಈ ಕೂಟವು ಭಾರತದ 9 ವಿವಿಧ ನಗರಗಳಲ್ಲಿ ನಡೆಯಬೇಕಾಗಿತ್ತು. ಆದರೆ ಕೋವಿಡ್‌ ರೋಗದ ತೀವ್ರತೆಯಿಂದಾಗಿ ಐಸಿಸಿ ಈಗಾಗಲೇ ವಿಶ್ವಕಪ್‌ ಕೂಟವನ್ನು ಗಲ್ಫ್ ರಾಷ್ಟ್ರಗಳಲ್ಲಿ ಆಯೋಜಿಸಲು ಸಿದ್ಧತೆ ಆರಂಭಿಸಿತ್ತು.ಕೂಟದ ಅರ್ಹತಾ ಸುತ್ತಿನ ಪಂದ್ಯಗಳು ಮಸ್ಕತ್‌ನಲ್ಲಿ ನಡೆಯಲಿದೆ. ಇದರ ಜತೆ ಅಕ್ಟೋಬರ್‌ 15ರ ವರೆಗೆ ಐಪಿಎಲ್‌ನ ಇನ್ನುಳಿದ 31 ಪಂದ್ಯಗಳು ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next