Advertisement

Women’s T20: ದಾಖಲೆ ಮೊತ್ತ… ಭಾರತಕ್ಕೆ ಟಿ20 ಸರಣಿ

09:13 AM Dec 20, 2024 | Team Udayavani |

ನವಿ ಮುಂಬಯಿ: ವನಿತಾ ಟಿ20 ಪಂದ್ಯದಲ್ಲಿ ತನ್ನ ಸರ್ವಾಧಿಕ ಮೊತ್ತ ದಾಖಲಿಸಿದ ಭಾರತ, 3ನೇ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ 60 ರನ್ನುಗಳ ಸೋಲುಣಿಸಿ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.

Advertisement

ಭಾರತ 4 ವಿಕೆಟಿಗೆ 217 ರನ್‌ ಪೇರಿಸಿತು. ಇದು ಭಾರತದ ಅತ್ಯಧಿಕ ಟಿ20 ಸ್ಕೋರ್‌ ಆಗಿದೆ. ಇದೇ ವರ್ಷ ಯುಎಇ ವಿರುದ್ಧ ದಂಬುಲದಲ್ಲಿ 5ಕ್ಕೆ 201 ರನ್‌ ಗಳಿಸಿದ್ದು ಈವರೆಗಿನ ದಾಖಲೆ ಆಗಿತ್ತು. ಜವಾಬು ನೀಡಿದ ವೆಸ್ಟ್‌ ಇಂಡೀಸ್‌ 9 ವಿಕೆಟಿಗೆ 157 ರನ್‌ ಮಾಡಿ ಶರಣಾಯಿತು.

ರಿಚಾ, ಮಂಧನಾ ದಾಖಲೆ
ಭಾರತದ ಸರದಿಯಲ್ಲಿ ಸ್ಮತಿ ಮಂಧನಾ ಮತ್ತು ರಿಚಾ ಘೋಷ್‌ ಅರ್ಧ ಶತಕ ಬಾರಿಸಿ ಮಿಂಚಿದರು. ಇವರಲ್ಲಿ ರಿಚಾ ಅವರ 50 ರನ್‌ ಕೇವಲ 18 ಎಸೆತಗಳಿಂದ ಬಂತು. ಇದು ಭಾರತೀಯ ಆಟಗಾರ್ತಿಯೊಬ್ಬರ ಅತೀ ವೇಗದ ಹಾಗೂ ವಿಶ್ವದ 4ನೇ ಅತೀ ವೇಗದ ಅರ್ಧ ಶತಕವಾಗಿದೆ. ರಿಚಾ 21 ಎಸೆತಗಳಿಂದ 54 ರನ್‌ ಬಾರಿಸಿದರು. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 3 ಫೋರ್‌.

47 ಎಸೆತಗಳಿಂದ 77 ರನ್‌ ಬಾರಿಸಿದ ಸ್ಮತಿ ಮಂಧನಾ ಭಾರತದ ಟಾಪ್‌ ಸ್ಕೋರರ್‌ (13 ಬೌಂಡರಿ, 1 ಸಿಕ್ಸರ್‌). ಇದು ಟಿ20ಯಲ್ಲಿ ಮಂಧನಾ ಅವರ 30ನೇ 50 ಪ್ಲಸ್‌ ಗಳಿಕೆಯಾಗಿದೆ. ಇದೊಂದು ದಾಖಲೆ ಎನಿಸಿತು. ಸುಝಿ ಬೇಟ್ಸ್‌ ಅವರ ದಾಖಲೆ ಪತನಗೊಂಡಿತು (29). ಕೌರ್‌ ಗೈರಲ್ಲಿ ಮತ್ತೆ ಮಂಧನಾ ತಂಡವನ್ನು ಮುನ್ನಡೆಸಿದರು.

ಜೆಮಿಮಾ ರೋಡ್ರಿಗಸ್‌ (39) ಮತ್ತು ರಾಘವಿ ಬಿಷ್ಟ್ (ಅಜೇಯ 31) ಭಾರತದ ಮತ್ತಿಬ್ಬರು ಪ್ರಮುಖ ಸ್ಕೋರರ್.

Advertisement

ಚೇಸಿಂಗ್‌ ವೇಳೆ ಮಧ್ಯಮ ಕ್ರಮಾಂಕದ ಆಟಗಾರ್ತಿ ಶಿನೆಲ್‌ ಹೆನ್ರಿ ಬಿರುಸಿನ ಆಟವಾಡಿ ಕೇವಲ 16 ಎಸೆತಗಳಿಂದ 43 ರನ್‌ ಸಿಡಿಸಿದರು (3 ಬೌಂಡರಿ, 4 ಸಿಕ್ಸರ್‌). ಡಿಯಾಂಡ್ರಾ ಡಾಟಿನ್‌ 25, ನಾಯಕಿ ಹ್ಯಾಲಿ ಮ್ಯಾಥ್ಯೂಸ್‌ 22 ರನ್‌ ಮಾಡಿದರು. 29 ರನ್ನಿಗೆ 4 ವಿಕೆಟ್‌ ಉರುಳಿಸಿದ ರಾಧಾ ಯಾದವ್‌ ಭಾರತದ ಅತ್ಯಂತ ಯಶಸ್ವಿ ಬೌಲರ್‌.

Advertisement

Udayavani is now on Telegram. Click here to join our channel and stay updated with the latest news.

Next