Advertisement

“Worry’ಯೇ ಗುರು!

06:00 AM Aug 28, 2018 | |

ಪ್ರಷರ್‌ ಕುಕ್ಕರ್‌ ಒಳಗೆ ಹಾಕಿದ ತರಕಾರಿಗಳು ಪಕ್ವವಾಗುತ್ತವೆ. ಆದರೆ, ಮನಸ್ಸನ್ನು ಪ್ರಷರ್‌ ಕುಕ್ಕರ್‌ ಮಾಡಿಕೊಂಡರೆ ಪಕ್ವವಾಗುವುದಕ್ಕೆ ಬದಲಾಗಿ ಸ್ಫೋಟಗೊಳ್ಳಬಹುದು. ಎಂಥ ಸಮಸ್ಯೆ ಇದ್ದರೂ ಬದುಕಿಗಿಂತ ಯಾವುದೂ ದೊಡ್ಡದಲ್ಲ. ಅದನ್ನು ಎದುರಿಸಲು ಕಲಿಯಬೇಕು…

Advertisement

ಜೀವನ, ಹೂವಿನ ಹಾಸಿಗೆ ಅಲ್ಲ. ಇಂದಿನಂತೆ ನಾಳೆ ಇರೋದಿಲ್ಲ. ಗಟ್ಟಿ ಗುಂಡಿಗೆಯಿದ್ದವರನ್ನೂ ಪರಿಸ್ಥಿತಿ ಅಲುಗಾಡಿಸಿಬಿಡಬಹುದು. ಅದುವೇ ಜೀವನ. ಇಂದು ಸಾಧಕರ ಸಾಲಿನಲ್ಲಿ ನಿಂತಿರುವವರೆಲ್ಲರೂ ಅಂಥಾ ಪರಿಸ್ಥಿತಿಗಳನ್ನು ಎದುರಿಸಿ ಬಂದವರೇ. ಅದಕ್ಕಿಂತ ದೊಡ್ಡ ಪಾಠ ಬೇರಿಲ್ಲ. ಹೀಗಾಗಿ ಎಂಥ ಕಠಿಣ ಪರಿಸ್ಥಿತಿಯಲ್ಲೂ ಧನಾತ್ಮಕವಾಗಿರೋದನ್ನು ಅಭ್ಯಾಸ ಮಾಡಿಕೊಂಡುಬಿಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಕಠಿಣ ಪರಿಸ್ಥಿತಿಯನ್ನು ನಿಭಾಯಿಸೋದು ಹೇಳಿದಷ್ಟು ಈಝೀನಾ? ಕಡುಕಷ್ಟವಂತೂ ಅಲ್ಲ!

ಪ್ರಾಬ್ಲಿಂ ಬಂದಾಗ ಪಲಾಯನ ಬೇಡ…
ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವುದರಿಂದ ಮತ್ತು ಉತ್ತಮ ಚಿಂತನೆ, ವಿಚಾರಗಳಿಗೆ ಮನಸ್ಸನ್ನು ತೆರೆಯುವ ಮೂಲಕ, ಜೀವನದಲ್ಲಿ ಕಷ್ಟಕರ ಸನ್ನಿವೇಶಗಳನ್ನು ದಾಟಬಹುದು. ಇದಕ್ಕೆ ಸ್ನೇಹಿತರು, ಬಂಧು- ಬಳಗದ ನೆರವನ್ನೂ ಪಡೆದುಕೊಳ್ಳಬಹುದು. ಅದು ಬಿಟ್ಟು ಸಮಸ್ಯೆಗಳೇ ಇಲ್ಲ ಎಂದು ನಮಗೆ ನಾವೇ ಹೇಳಿಕೊಳ್ಳುವುದು, ಪಲಾಯನ ಮಾಡುವುದು ಪರಿಹಾರ ಅಲ್ಲ. ಇದರಿಂದ ಸಮಸ್ಯೆ ಇನ್ನಷ್ಟು ಗಂಭೀರ ರೂಪ ತಳೆದು ಸಂಕೀರ್ಣವಾಗಬಹುದು. ಸವಾಲನ್ನು ಎದುರಿಸಲು ಮನಸ್ಸು ಮಾಡುವುದರಿಂದಲೇ ಅರ್ಧ ಸಮಸ್ಯೆ ಕಳೆದಂತೆ. 

ಮನಸ್ಸು, ಪ್ರಷರ್‌ ಕುಕ್ಕರ್‌ ಅಲ್ಲ…
ಪ್ರಷರ್‌ ಕುಕ್ಕರ್‌ ಒಳಗೆ ಹಾಕಿದ ತರಕಾರಿಗಳು ಪಕ್ವವಾಗುತ್ತವೆ. ಆದರೆ, ಮನಸ್ಸನ್ನು ಪ್ರಷರ್‌ ಕುಕ್ಕರ್‌ ಮಾಡಿಕೊಂಡರೆ ಪಕ್ವವಾಗುವುದಕ್ಕೆ ಬದಲಾಗಿ ಸ್ಫೋಟಗೊಳ್ಳಬಹುದು. ಒತ್ತಡ ನಿವಾರಣೆ ಇಂದು ಪ್ರತಿಯೊಬ್ಬರ ಅಗತ್ಯ. ಒಳಗಿರುವುದನ್ನು ಆಪ್ತರ ಬಳಿ ಹಂಚಿಕೊಳ್ಳುವುದರಿಂದ ಮನಸ್ಸು ಹಗುರಾಗಿ ಪ್ರಷರ್‌ ಕುಕ್ಕರ್‌ ಆಗುವುದರಿಂದ ತಪ್ಪಿಸಿಕೊಳ್ಳುತ್ತದೆ. ಒತ್ತಡ ನಿವಾರಣೆಗೆ ಹಲವಾರು ಮಾರ್ಗಗಳಿವೆ. ಒಂದೊಳ್ಳೆ ಹಾಡು ಕೇಳುವುದರಿಂದ, ಸಂಜೆ ವಾಕ್‌ ಮಾಡುವುದರಿಂದ, ನಾಯಿ ಮರಿಯನ್ನು ಮುದ್ದಾಡುವುದರಿಂದ, ಹೆಂಚಿನ ಮೇಲೆ ಬೀಳುವ ಮಳೆಯನ್ನು ನೋಡುವುದರಿಂದ… ಹೀಗೆಲ್ಲಾ ಒತ್ತಡ ಕಡಿಮೆ ಮಾಡಿಕೊಳ್ಳಬಹುದು. ಚಿಕ್ಕಪುಟ್ಟ ಸಂಗತಿಗಳು ಯಾವುವೂ ನಿಜಕ್ಕೂ ಚಿಕ್ಕಪುಟ್ಟ ಸಂಗತಿಗಳಲ್ಲ ಅನ್ನೋದು ಅರ್ಥವಾಗೋದು ಆವಾಗಲೇ. ಬಿಝಿ ಬದುಕಿನ ನಡುವೆ ಒಂದು ಬ್ರೇಕ್‌ ತೆಗೆದುಕೊಳ್ಳುವುದನ್ನು ಅಭ್ಯಸಿಸಬೇಕು.

ದೈಹಿಕ ಶಿಸ್ತಿರಲಿ…
ಊಟ- ತಿಂಡಿ ಬಿಡುವುದು, ಮೂರು ಹೊತ್ತೂ ಚಿಂತಿಸುತ್ತಿರುವುದು, ದುಶ್ಚಟದ ದಾಸರಾಗೋದು, ಹೀಗೆಲ್ಲಾ ಮಾಡುವುದರಿಂದ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅದರಿಂದ ಬೇರೆ ಇನ್ನೊಂದಿಷ್ಟು ಸಮಸ್ಯೆಗಳು ಉದ್ಭವವಾಗಿಬಿಡಬಹುದು. ಸಮಸ್ಯೆಗಳು ಅನಿಶ್ಚಿತ. ಇಂದಿರುತ್ತೆ, ನಾಳೆ ಹೋಗುತ್ತೆ. ಆದರೆ, ಆರೋಗ್ಯ? ಸರಿಯಾದ ಸಮಯಕ್ಕೆ ಆಹಾರ ಸೇವನೆ, ನಿದ್ರೆ, ಜತೆಗೆ ಯೋಗ, ಧ್ಯಾನ, ಜಾಗಿಂಗ್‌, ಜಿಮ್‌ ಮಾಡುವುದರಿಂದ ಮನಸ್ಸು ಮತ್ತು ದೇಹದಲ್ಲಿ ಹೊಸ ಚೈತನ್ಯ ತುಂಬುತ್ತೆ. ಜೀವನದಲ್ಲಿ ಏನೇ ಬರಲಿ ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ. 

Advertisement

ಮಗುವಾಗಿ…
ನಮ್ಮನ್ನು ಪ್ರೀತಿಸುವವರಿಂದ ನಮ್ಮ ಬದುಕನ್ನು ತುಂಬಿಸಿಕೊಳ್ಳಬೇಕು. ಅವರ ಸಾಂಗತ್ಯದಲ್ಲೇ ಇರುವುದರಿಂದ ಹಲವಾರು ಪ್ರಯೋಜನಗಳಿವೆ. ನೀವು ಎಂದೂ ದುಃಖಿಯಾಗಿರುವುದಿಲ್ಲ. ನೀವು ಸಪ್ಪೆ ಮುಖ ಮಾಡಿದ ಕೂಡಲೇ ನಿಮ್ಮನ್ನು ಹಸನ್ಮುಖರನ್ನಾಗಿಸಲು ಅವರು ಪ್ರಯತ್ನಿಸುತ್ತಾರೆ. ಧನಾತ್ಮಕ ಆಲೋಚನೆಗಳನ್ನು ನಿಮ್ಮಲ್ಲಿ ತುಂಬಿ ಹುರುಪು ನೀಡುತ್ತಾರೆ. ನಮಗೆಲ್ಲರಿಗೆ ಮುಖ್ಯವಾಗಿ ಬೇಕಿರುವುದೇ ಅದು  - ಜೀವನೋತ್ಸಾಹ. ಈ ಜೀವನೋತ್ಸಾಹ ಎಂದ ಕೂಡಲೆ ನೆನಪಿಗೆ ಬರುವುದು ಮಗುವಿನ ಮುಖ. ಅದರಲ್ಲಿರುವುದರ ಸ್ವಲ್ಪ ಭಾಗ ಜೀವನೋತ್ಸಾಹವಾದರೂ ನಮ್ಮಲ್ಲಿದ್ದುಬಿಟ್ಟಿದ್ದರೆ ಬೆಟ್ಟದಂಥ ಕಷ್ಟಗಳೂ ಹುಲ್ಲಿನ ಕಟ್ಟುಗಳಾಗುತ್ತಿದ್ದವು. ನಮ್ಮೊಳಗಿನ ಮಗು ಹೊರಬರೋದಿಕ್ಕೆ ಅವಕಾಶ ಮಾಡಿಕೊಡಿ. ಕೆಲವೊಮ್ಮೆ ಮಕ್ಕಳ ಹಾಗೆ ವರ್ತಿಸೋದೂ ಮನಸಿಗೆ ಸಾಕಷ್ಟು ಮುದ ನೀಡುತ್ತೆ.

ಮತ್ತೂಬ್ಬರಿಗೆ ಹೆಗಲಾಗಿ…
ಇನ್ನೊಬ್ಬರ ಕಷ್ಟಕ್ಕೆ ಜೊತೆಯಾಗುವುದಿದೆಯಲ್ಲ, ಅದಕ್ಕಿಂತ ಖುಷಿ ಕೊಡುವ ಸಂಗತಿ ಬೇರೊಂದಿಲ್ಲ. ಮತ್ತೂಬ್ಬರ ಖುಷಿಯಲ್ಲಿ ನಮ್ಮ ನೋವು ಮರೆಯಾಗುತ್ತೆ. ಸಹಾಯ ಮಾಡಲು ನಾವು ಒಳ್ಳೆಯ ಮೂಡ್‌ನ‌ಲ್ಲಿರಬೇಕೆಂದಿಲ್ಲ. ಕಷ್ಟಗಳು ಯಾರನ್ನೂ ಕೇಳಿಕೊಂಡು ಬರುವುದಿಲ್ಲ. ಅದು ಬಂದಾಗ ನೆರವು ನೀಡುವುದರಿಂದ ಆಪ್ತರ ನಡುವಿನ ಬಾಂಧವ್ಯ ಹೆಚ್ಚುತ್ತದೆ. ಇನ್ನು ನಮ್ಮ ನಿಯಂತ್ರಣದಲ್ಲಿಲ್ಲದ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕೇ ಹೋಗಬಾರದು. ಬದಲಾವಣೆ ಜತೆ ನಿಧಾನವಾಗಿಯಾದರೂ ಹೊಂದಿಕೊಳ್ಳೋದು ನಿಜವಾದ ಜೀವನ. ಕಷ್ಟಕರ ಸನ್ನಿವೇಶಗಳಲ್ಲಿಯೇ ಸಂಬಂಧಗಳ ಪರೀಕ್ಷೆಯಾಗೋದು. ನಿಜವಾದ ಸ್ನೇಹಿತ, ನಿಜವಾದ ನೆಂಟರು ಯಾರು ಎಂಬುದೆಲ್ಲ ಆಗಲೇ ಸ್ಪಷ್ಟವಾಗುತ್ತದೆ. ಏನೇ ಆದರೂ ಖುಷಿಯಾಗಿರುವ ಪ್ರಯತ್ನ ಮುಂದುವರಿಯುತ್ತಿರಲಿ. 

ಶುಭಾಶಯ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next