ಯಜಮಾನರು ಭಯದಿಂದ ಓಡಿ ಬಂದಿದ್ದರು. ಅವರಿಗೆ ಭಯ ಆದದ್ದು ಅಡುಗೆ ಕೋಣೆಯಲ್ಲಿ ಏನಾಯಿತೋ ಎಂದಲ್ಲ, ಅಡುಗೆ ಕೋಣೆಯ ಅವತಾರ ನೋಡಿ! ಇದನ್ನು ಸ್ವತ್ಛ ಮಾಡುವುದರೊಳಗೆ ಮೇಡಂ
ಬಂದರೆ ಏನು ಗತಿ ಅಂತ ಥರಥರ ನಡುಗಿದ್ದರು. ಸ್ವತ್ಛ ಮಾಡಲು ಎಲ್ಲಿಂದ ಪ್ರಾರಂಭಿಸುವುದು ಎಂದು ತಿಳಿಯದೆ ಕಂಗಾಲಾಗಿ ಲುಂಗಿ ಎತ್ತಿಕಟ್ಟಿ ಯುದ್ಧಕ್ಕೆ ಸನ್ನದ್ಧರಾದರು…
ಆವಾಗಿನಿಂದ ಕೂಗ್ತಾನೆ ಇದ್ದೀನಿ. ಪೇಪರ್ ಹಿಡಿದು ಕುಳಿತ ಯಜ ಮಾನ್ರಿಗೆ ಕೇಳಿಸ್ತಾನೆ ಇಲ್ಲ. ನಮ್ ಯಜ ಮಾನಿ ಶಾಂತಮ್ಮ ಮಾರ್ಕೆಟಿಗೆ ಹೋಗ ಬೇಕಿದ್ದರೆ ಹೇಳಿದ್ದು ನನಗಂತೂ ಕೇಳಿತ್ತು. ಎರಡು ವಿಸಿಲ್ ಆದ್ಮೇಲೆ ಸಿಮ್ಮಲ್ಲಿ 15 ನಿಮಿಷ ಇಡಿ ಅಂತ. ಆದರೆ ಅವರಿಗೆ ಅರ್ಥ ಆಯೊ¤à ಇಲ್ವೋ ಗೊತ್ತಿಲ್ಲ. ಹೂಂ ಅಂದಿದ್ದು ಕೇಳಿಸಿತ್ತು. ಆಗಲೇ ಮನದಲ್ಲಿ ಭಯ ಮೂಡಿತ್ತು. ಈಗ ಅದು ನಿಜ ಆಗ್ತಾ ಇದೆ…
ಇದು ಮೊದಲನೇ ಸಲ ಏನೂ ಅಲ್ಲ. ಶಾಂತಮ್ಮ ಬೇಳೆನೋ, ಅನ್ನಕ್ಕೋ ಇಟ್ಟು ಯಜಮಾನರಿಗೆ ಹೇಳಿ ಹೊರಗಡೆ ಹೋಗುವುದು. ಶಾಂತಮ್ಮ “ರೀ…’ ಅಂದ್ರೆ ಸಾಕು, ಮನೆಯ ಯಾವ ಮೂಲೆಯಲ್ಲಿದ್ದರೂ ಯಜಮಾನ್ರಿಗೆ ಕೇಳಿÕ ಅಡುಗೆ ಕೋಣೆಗೆ ಓಡೋಡಿ ಬರ್ತಾರೆ. ಆದರೆ ನಾನು ಎಷ್ಟು ಕೂಗಿಕೊಂಡರೂ ಬರೋದೇ ಇಲ್ಲ. ಆವತ್ತೂ ಆಗಿದ್ದಿಷ್ಟೇ: ಶಾಂತಮ್ಮ ಬೇಳೆ ಬೇಯಲು ಇಟ್ಟು ಶಾಪಿಂಗ್ಗೆ ಹೊರಟಿದ್ರು. “ಮೂರು ಸೀಟಿ ಆದ್ರೆ ಸ್ಟವ್ ಆಫ್ ಮಾಡಿ’ ಎಂದು ಯಜಮಾನ್ರಿಗೆ ಆರ್ಡರ್ ಮಾಡಿ ಹೋಗಿದ್ದರು. ಮೂರು ಸಲ ಅಲ್ಲ, ಹತ್ತು ಬಾರಿ ಕೂಗಿದರೂ ಯಜಮಾನ್ರಿಗೆ ಕೇಳಲೇ ಇಲ್ಲ. ಕೊನೆಗೆ ಕೋಪ ತಡೆಯಲಾರದೆ ಜ್ವಾಲಾಮುಖೀಯಾಗಿ ಸಿಡಿದೇ ಬಿಟ್ಟೆ ನೋಡಿ. ಬಾಂಬ್ ಸಿಡಿದಂಥ ಶಬ್ದಕ್ಕೆ ಯಜಮಾನರು ಬೆಚ್ಚಿಬಿದ್ದಿದ್ದರು. ನನಗಂತೂ ಒಳಗೊಳಗೆ ನಗು, ಜೊತೆಗೆ ಸಂಕಟವೂ ಕೂಡಾ… ಯಜಮಾನರು ಬೆಚ್ಚಿ ಬೀಳಲು ಮೇಡಂ ಕೂಗುವ “ಏನ್ರೀ…’ ಎಂಬ ಶಬ್ದ ಸಾಕು. ಆದರೆ ನಾನು ಒಡಲಾಳವನ್ನೇ ಹೊರ ಕಕ್ಕಬೇಕಾಯಿತು ನೋಡಿ.
ಆಮೇಲಿನ ಕಥೆ ಕೇಳಿ. ಯಜಮಾನರು ಭಯದಿಂದ ಓಡಿ ಬಂದಿದ್ದರು. ಅವರಿಗೆ ಭಯ ಆದದ್ದು ಅಡುಗೆ ಕೋಣೆಯಲ್ಲಿ ಏನಾಯಿತೋ ಎಂದಲ್ಲ, ಅಡುಗೆ ಕೋಣೆಯ ಅವತಾರ ನೋಡಿ! ಇದನ್ನು ಸ್ವತ್ಛ ಮಾಡುವುದರೊಳಗೆ ಮೇಡಂ ಬಂದರೆ ಏನು ಗತಿ ಅಂತ ಥರಥರ ನಡುಗಿ ಬೆಚ್ಚಿಬಿದ್ದಿದ್ದರು. ಸ್ವತ್ಛ ಮಾಡಲು ಎಲ್ಲಿಂದ ಪ್ರಾರಂಭಿಸುವುದು ಎಂದು ತಿಳಿಯದೆ ಕಂಗಾಲಾಗಿ ಲುಂಗಿ ಎತ್ತಿಕಟ್ಟಿ ಯುದ್ಧಕ್ಕೆ ಸನ್ನದ್ಧರಾದರು. ನಾನೇನು ಅಷ್ಟು ಸುಲಭದಲ್ಲಿ ಬಿಡುತ್ತೇನೆಯೇ ಅವರನ್ನು… ನನ್ನ ಒಡಲಿನಿಂದ ಹೊರಬಂದ ಬೇಳೆ ಎಲ್ಲೆಡೆ ಹರಡಿತ್ತು. ಗ್ಯಾಸ್ ಸ್ಟವ್, ಸ್ಲಾಬಿನ ಮೇಲಷ್ಟೇ ಅಲ್ಲ ಮಿಕ್ಸಿ, ಫ್ರಿಜ್, ಡಬ್ಬ, ಪಾತ್ರೆಗಳ ಮೇಲೆಲ್ಲಾ ಬೇಳೆಯ ಚೂರುಗಳು ಚಿತ್ತಾರ ಮೂಡಿ ಸಿತ್ತು. ಅದೆಷ್ಟು ಒರೆಸಿದರೂ, ತೊಳೆದರೂ ಶಾಂತಮ್ಮನಿಗೆ ಗೊತ್ತಾಗದೆ ಇರುತ್ತದೆಯೇ? ಮನೆಗೆ ಬಂದ ಶಾಂತಮ್ಮನಿಗೆ ವಿಷಯ ತಿಳಿದು “ನಿಮಗೆ ಜವಾಬ್ದಾರಿಯೇ ಇಲ್ಲ’ ಎಂದು ಯಜಮಾನರ ಮೇಲೆ ಕೂಗಾಡಿದ್ದರು. ನೋವಾದರೂ ಒಳಗೊಳಗೇ ನಕ್ಕಿದ್ದೆ ನಾನು.
ಇನ್ನೊಂದು ಬಾರಿ ಅನ್ನಕ್ಕಿಟ್ಟ ಮೇಡಂ ಪಕ್ಕದ ಮನೆಗೆ ಅರಶಿನ ಕುಂಕುಮಕ್ಕೆಂದು ಹೋಗಿದ್ದರು. ಹೋದದ್ದೇನೋ ಅರಶಿನ ಕುಂಕುಮ ಕ್ಕೆಂದು. ಆದರೆ ಅದಕ್ಕಿಂತಲೂ ಮುಖ್ಯ ಕಾರ್ಯ ಮಾತನಾಡುವುದು ಇರುತ್ತದೆ ಅಲ್ವಾ? ಅದನ್ನೇನು ಬೇಗ ಮುಗಿಸಿ ಬರಲಾರರು ಎಂದು ತಿಳಿದೇ ಯಜಮಾನರಿಗೆ ಹೇಳಿದ್ದರು; ನಾಲ್ಕು ಸೀಟಿ ಹೊಡೆದರೆ ಆಫ್ ಮಾಡಿ ಎಂದು. ನಾನು ಸೀಟಿ ಹೊಡೆಯುತ್ತಲೇ ಇದ್ದೆ. ಮಾತನಾಡದಿದ್ದರೆ ಪಕ್ಕದ ಮನೆಗೆ ಹೋದ ಮೇಡಂಗೂ ನನ್ನ ಸೀಟಿ ಕೇಳಿಸುತ್ತಿತ್ತೋ ಏನೋ… ಆದರೆ ಅವರು ಮಾತನಾಡುವುದರಲ್ಲಿ ಮಗ್ನರಾಗಿದ್ದಾರಲ್ಲ, ಹಾಗಾಗಿ ಅವರಿಗೆ ಗೊತ್ತಾಗಲಿಲ್ಲ. ಇತ್ತ ಫೋನ್ನಲ್ಲಿ ಹರಟುತ್ತಿದ್ದ ಯಜಮಾನರಿಗಂತೂ ನನ್ನ ಕೂಗು ಕೇಳಲೇ ಇಲ್ಲ. ನಾನಾದರೂ ಏನು ಮಾಡಲಿ? ಒಂದಷ್ಟು ಬಾರಿ ಕೂಗಿ ಸುಮ್ಮನಾದೆ. ಪಕ್ಕದ ಮನೆಗೆ ಹೋಗಿದ್ದ ಶಾಂತಮ್ಮನಿಗೆ ಸುಟ್ಟ ವಾಸನೆ ಬರಲಾರಂಭಿಸಿತಂತೆ. ಇದು ನಮ್ಮ ಮನೆಯಿಂದಲೇ ಎಂದು ಅರಿವಾಗಿ ಓಡೋಡಿ ಬರುವಷ್ಟರಲ್ಲಿ ಅನ್ನವೆಲ್ಲ ತಳ ಹಿಡಿದುಬಿಟ್ಟಿತ್ತು. ಶಾಂತಮ್ಮ ಬೈಯುವುದು ಕೇಳುತ್ತಿತ್ತು: “ನಿಮಗೆ ಕಿವಿಯಂತೂ ಕೇಳುವುದಿಲ್ಲ ಎಂದು ಗೊತ್ತಿತ್ತು. ಆದರೆ ಮೂಗು ಕೂಡ ಕೆಲಸ ಮಾಡುವುದಿಲ್ಲ’ ಎಂದು ಈಗ ಗೊತ್ತಾಯ್ತು.
ಓ ಬಾಗಿಲು ಶಬ್ದ ಆಯ್ತು, ಇರಿ. ಶಾಂತಮ್ಮನೇ ಬಂದ ಹಾಗೆ ಅನ್ನಿಸ್ತಾ ಇದೆ. ಬಹುಶಃ ಅರ್ಧದಾರಿ ಹೋದಾಗ ಹಿಂದೆ ಆದ ಅವಾಂತರ ನೆನಪಿಗೆ ಬಂದಿರಬೇಕು. ಅದಕ್ಕೇ ವಾಪಸ್ ಬಂದಿದ್ದಾರೆ. ಇರಿ, ಆಮೇಲೆ ಮಾತಾಡ್ತೀನಿ ನಿಮ್ ಜೊತೆ…
–ಅಶ್ವಿನಿ ಸುನಿಲ್, ಗುಂಟೂರು