Advertisement

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

01:29 AM Nov 15, 2024 | Team Udayavani |

ಮಂಗಳೂರು: ಭಾರತ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್‌. ರಾಹುಲ್‌ ಅವರು ಮತ್ತೂಮ್ಮೆ ತಮ್ಮ ತುಳು ಪ್ರೇಮವನ್ನು ಮೆರೆದಿದ್ದಾರೆ. “ಕುಡ್ಲದ ಜನಕ್ಲೆನ ಪ್ರೀತಿ, ವಿಶ್ವಾಸ ಎನ್ನ ಈ ಸಾಧನೆಗ್‌ ಕಾರಣ’ (ಮಂಗಳೂರಿನ ಜನರ ಪ್ರೀತಿ, ವಿಶ್ವಾಸ ನನ್ನ ಈ ಸಾಧನೆಗೆ ಕಾರಣ) ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ತುಳು ಭಾಷೆಯಲ್ಲಿ ಮಾತನಾಡುವ ಮೂಲಕ ಮಂಗಳೂರಿನಲ್ಲಿ ತಾನು ಕಳೆದ ದಿನಗಳನ್ನು ಮೆಲುಕು ಹಾಕಿದ್ದಾರೆ.

Advertisement

“ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕು ಎಂಬ ಕನಸು ಮಂಗಳೂರಿನ ಎನ್‌ಐಟಿಕೆ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗಲೇ ನನ್ನಲ್ಲಿತ್ತು. ಇದು ಸಾಕಾರಗೊಳ್ಳಬಹುದು ಎಂಬ ಆತ್ಮವಿಶ್ವಾಸ ಇರಲಿಲ್ಲ. ಆದರೆ ಕುಡ್ಲದ ಜನರ ಪ್ರೀತಿ, ವಿಶ್ವಾಸ ದಿಂದಲೇ ಇದು ಸಾಧ್ಯವಾಯಿತು. ನಾನು ಬಾಲ್ಯದಿಂದ ಈವರೆಗೆ ಇಷ್ಟೊಂದು ಸಾಧನೆಗೈದಿದ್ದೇನಾ ಎಂದು ನನಗೆ ಅನಿಸುವುದುಂಟು’ ಎಂದು ತುಳು ಭಾಷೆಯಲ್ಲೇ ಹೇಳಿದ್ದಾರೆ.

ಕೆ.ಎಲ್‌. ರಾಹುಲ್‌ ತನ್ನ ಬಾಲ್ಯವನ್ನು ಮಂಗಳೂರಿನಲ್ಲಿ ಕಳೆದಿದ್ದು, ನಗರದ ನೆಹರೂ ಮೈದಾನಿನಲ್ಲಿ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದರು. ಅವರ ತಂದೆ ಲೋಕೇಶ್‌ ಅವರು ಎನ್‌ಐಟಿಕೆಯಲ್ಲಿ ಪ್ರೊಫೆಸರ್‌ ಮತ್ತು ತಾಯಿ ರಾಜೇಶ್ವರಿ ಅವರು ಮಂಗಳೂರು ವಿ.ವಿ. ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿದ್ದರು. ಇದೇ ಕಾರಣಕ್ಕೆ ರಾಹುಲ್‌ಗೆ ಮಂಗಳೂರಿನ ಬಗ್ಗೆ ವಿಶೇಷ ಗೌರವ. ಅನೇಕ ಸಂದರ್ಭಗಳಲ್ಲಿ ಮಂಗಳೂರಿನ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದರು.

ಅವರು ಲಕ್ನೋ ಸೂಪರ್‌ ಜೈಂಟ್ಸ್‌ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರು 2025ರ ಐಪಿಎಲ್‌ನಲ್ಲಿ ಯಾವ ತಂಡದ ಪರ ಆಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಿಗಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ರಾಹುಲ್‌ ಸೇರ್ಪಡೆ ಕುರಿತು ಚರ್ಚೆ ನಡೆದಿದೆ. ನ.22ರಿಂದ ಆರಂಭವಾಗಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಗೆ ರಾಹುಲ್‌ ಅವರು ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next