Advertisement
ಉಡುಪಿ ಜಿಲ್ಲಾಧಿಕಾರಿಗಳು ಮಿಲ್ಲಿನ ಮಾಲಕರು ಹಾಗೂ ರೈತರ ಸಭೆ ನಡೆಸಿ ಭತ್ತವನ್ನು 23 ರೂ.ಗೆ ಖರೀದಿಸಲು ಮಿಲ್ಲಿನ ಮಾಲಕರು ಒಪ್ಪಿಕೊಂಡಿದ್ದಾರೆ. ಇದಕ್ಕೂ ಮೊದಲು 19-20 ರೂ. ಎಂದು ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ಒಂದು ಹಂತದವರೆಗೆ ಜಿಲ್ಲಾಡಳಿತ ರೈತರ ಪರವಾಗಿ ಕೆಲಸ ಮಾಡಿದೆ. ಆದರೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಕಡಿಮೆ ದರದಲ್ಲಿ ಯಥೇತ್ಛವಾಗಿ ಭತ್ತ ದೊರೆಯುವ ಕಾರಣ ಮಿಲ್ಲಿನ ಮಾಲಕರು ಸ್ಥಳೀಯರಿಗೆ ಆದ್ಯತೆ ನೀಡುತ್ತಿಲ್ಲ.ಕರಾವಳಿಯಲ್ಲಿ ಭತ್ತ ಕೃಷಿಯನ್ನು ಪ್ರೋತ್ಸಾಹಿಸಲು ಹಿಂದೊಮ್ಮೆ ಕೇರಳ ಮಾದರಿಯಲ್ಲಿ ಪ್ಯಾಕೇಜ್ ಘೋಷಿಸುವ ಪ್ರಸ್ತಾವ ಆಗಿತ್ತು. ಆದರೆ ಅದು ಮುಂದಕ್ಕೆ ಹೋಗಲೇ ಇಲ್ಲ. ಆಕರ್ಷಕ ಪ್ಯಾಕೇಜ್ ಘೋಷಣೆಯಾದರೆ ಇನ್ನಷ್ಟು ಮಂದಿ ಭತ್ತ ಬೆಳೆಯುವ ಸಾಧ್ಯತೆ ಇದೆ.
ಭತ್ತದ ಬೆಳೆಗೆ ಖರ್ಚಾಗುವ ಸಣ್ಣ ಲೆಕ್ಕ ಹೀಗಿದೆ. ಟ್ರ್ಯಾಕ್ಟರ್ ಬಾಡಿಗೆ ಗಂಟೆಗೆ 900-1,000 ರೂ., ಹಾರ್ವೆಸ್ಟರ್ ಬಾಡಿಗೆ ಗಂಟೆಗೆ 2,400 ರೂ., ಮೆಶಿನ್ನಲ್ಲಿ ನಾಟಿ ಮಾಡಿದರೆ ಅದರ ಖರ್ಚು ಪ್ರತ್ಯೇಕ. 1 ಎಕ್ರೆಗೆ 4-5 ಗಂಟೆ ಉಳುಮೆ ಬೇಕಾಗುತ್ತದೆ. ಟ್ರ್ಯಾಕ್ಟರ್ ಬಾಡಿಗೆ 5 ಸಾವಿರ ರೂ., ಹಟ್ಟಿಗೊಬ್ಬರ ಹಾಕಲು, ಬದು ಮಾಡಲು, ಭತ್ತ ಹೊರಲು ಎಂದು ಎಕ್ರೆಗೆ 21 ಕೂಲಿಯಾಳು ಬೇಕು. 700 ರೂ.ಗಳಂತೆ ಕೂಲಿ ಹಿಡಿದರೂ 14,700 ರೂ. ಆಗುತ್ತದೆ. ಕಟಾವು ಯಂತ್ರ ಒಂದೂವರೆಯಿಂದ ಎರಡು ಗಂಟೆ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ 3,600ರಿಂದ 4,800 ರೂ.ವರೆಗೆ ಬಾಡಿಗೆ. ರಸಗೊಬ್ಬರ, ಮೇಲ್ಗೊಬ್ಬರ ಎಂದು 2,500 ರೂ. ಬೇಕು. 1 ಎಕ್ರೆಗೆ 2 ಕೆಜಿ ಬಿತ್ತಿದರೆ ಮಂಗ, ನವಿಲು, ಹಂದಿ ಇತ್ಯಾದಿಗಳ ಕಾಟ ಇಲ್ಲದಿದ್ದರೆ 17ರಿಂದ 22 ಕ್ವಿಂಟಾಲ್ವರೆಗೆ ಭತ್ತ ಬರುತ್ತದೆ. 28-30 ಕ್ವಿಂ. ಬಂದರೆ ಲಾಭ. ಇಲ್ಲದಿದ್ದರೆ ಎಲ್ಲ ಖರ್ಚಿಗೇ ಸರಿಯಾದೀತು. ಮಾರಿದಾಗ 1 ಎಕ್ರೆಯ ಭತ್ತಕ್ಕೆ 37,400 ರೂ. ಸಿಗುತ್ತದೆ. ಅದನ್ನು ಬೆಳೆಯಲು 26,500 ರೂ. ಖರ್ಚಿದೆ. ಮಾರುಕಟ್ಟೆಯಲ್ಲಿ ಅಕ್ಕಿಗೆ 45ರಿಂದ 65 ರೂ.ವರೆಗೆ ದರ ಇದೆ. ರೈತರಿಂದ 23 ರೂ.ಗೆ ಖರೀದಿಸಿದ ಭತ್ತದ ಅಕ್ಕಿ ಈ ದರಕ್ಕೆ ಬಿಕರಿಯಾಗುತ್ತದೆ ಎನ್ನುತ್ತಾರೆ ಕೃಷಿಕ ರಾಘವೇಂದ್ರ ಹಾಲಾಡಿ.
Related Articles
ಉಡುಪಿ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್, ದಕ್ಷಿಣ ಕನ್ನಡದಲ್ಲಿ ಸುಮಾರು 9,500 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಅವಧಿ ಯಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಏನೇ ತಲೆಕೆಳಗು ಮಾಡಿ ಲೆಕ್ಕ ಮಾಡಿದರೂ ಎಕ್ರೆಗೆ 5,950 ರೂ. ಲಾಭ ಬರಬಹುದು. ಹೆಚ್ಚೆಂದರೆ 10 ಸಾವಿರ ರೂ. ಬರಬಹುದು. ಅದೂ 3 ತಿಂಗಳ ಶ್ರಮಕ್ಕೆ. ನೂರಾರು ಎಕ್ರೆ ಭತ್ತ ಬೆಳೆಯುವ ರೈತರು ಇಲ್ಲಿಲ್ಲ. ಅದೂ ಅಲ್ಲದೆ ಈ ಬಾರಿ ಅಕಾಲಿಕ ಮಳೆಯಿಂದಾಗಿ ಮೂರನೆಯ ಬಾರಿ ಬಿತ್ತನೆ ಮಾಡಬೇಕಾಗಿ ಬಂದಿದೆ.
Advertisement
ಪರಿಣಾಮ ಕಟಾವು ವಿಳಂಬವಾಗಿದೆ. ಆದಕಾರಣ ಎರಡನೆ ಬೆಳೆ ಬೆಳೆಯುವುದು ಕಷ್ಟ. ವಿಳಂಬವಾಗಿ ಬಿತ್ತನೆ ಮಾಡಿದರೆ ಕೊನೆಗೆ ನೀರಿನ ಬರ ಉಂಟಾದರೆ ಎಂಬ ಆತಂಕ ಇದೆ. ಈಗ ಗದ್ದೆ ಹಸಿಯಾಗಿ ಇರುವುದರಿಂದ ದ್ವಿದಳ ಧಾನ್ಯ ಬೆಳೆಯಲೂ ಪರದಾಡುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಭತ್ತಕ್ಕೆ ಅಲ್ಪ ದರ ಸಿಕ್ಕಿದರೆ ಸಾಕೇ ಎಂದು ಪ್ರಶ್ನಿಸುತ್ತಾರೆ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ವಿಕಾಸ್ ಹೆಗ್ಡೆ.
ಬೇಗ ಕೊಡುವುದರಿಂದಲೂ ಸಮಸ್ಯೆಈಗ ನೇಜಿ ಹಾಗೂ ಕೊಯ್ಲಿಗೆ ಯಂತ್ರ ಬಂದಿರುವುದರಿಂದ ಒಂದೇ ದಿನದಲ್ಲಿ ಪ್ರಕ್ರಿಯೆ ಮುಗಿಯುತ್ತಿದೆ. ಕೊಯ್ಲು ಮಾಡಿದ ದಿನ ಅಥವಾ ಮರುದಿನವೇ ಮಿಲ್ಗೆ ಕೊಂಡೊಯ್ಯಲಾಗುತ್ತದೆ. ಇದರಿಂದಾಗಿಯೂ ಭತ್ತ ಹಸಿ ಇರುತ್ತದೆ. ಒಣಗಿದಾಗ ತೂಕ ಕಡಿಮೆಯಾಗುತ್ತದೆ ಎಂಬ ಕಾರಣ ಮುಂದಿಟ್ಟು ಮಿಲ್ನವರು ಕಡಿಮೆ ದರ ನೀಡುತ್ತಾರೆ. ಹಾಗಾಗಿ ಅನೇಕ ವರ್ಷಗಳಿಂದ ರೈತರು ಭತ್ತ ಮಾರಾಟ ಸಂದರ್ಭದಲ್ಲಿ ಈ ಸಮಸ್ಯೆ ಎದುರಿಸಿ ಕೆ.ಜಿ. ಭತ್ತಕ್ಕೆ 18 ರೂ.ಗಳಿಂದ 22 ರೂ.ಗಳವರೆಗೆ ಮಾತ್ರ ಪಡೆಯುತ್ತಿದ್ದಾರೆ. ಪತ್ರ ಬರೆಯಲಾಗುವುದು
ರೈತರು ಹಾಗೂ ಮಿಲ್ನವರ ಸಭೆ ನಡೆಸಿ ಇಬ್ಬರೂ ಒಪ್ಪುವಂಥ ದರ ನಿರ್ಣಯಿಸಲಾಗಿದೆ. 19 ರೂ. ಇದ್ದುದನ್ನು 23 ರೂ.ಕ್ಕೇರಿಸಲಾಗಿದೆ. ಆದರೂ ರೈತರಿಗೆ ಶ್ರಮಕ್ಕೆ ತಕ್ಕ ಕೊಡುವ ಬೆಂಬಲ ಬೆಲೆ ಕಡಿಮೆಯಾಗುತ್ತಿದೆ ಎನ್ನುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ರೈತರಿಂದ ಮನವಿ ಬಂದಲ್ಲಿ ಸರಕಾರಕ್ಕೆ ಬರೆಯಲಾಗುವುದು. – ಡಾ| ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ ಫಸಲಿನ ಮೇಲೆ ಪರಿಣಾಮ
ಫಸಲು ಚೆನ್ನಾಗಿದೆ. ಮೂರನೆಯ ಬಾರಿ ಬಿತ್ತನೆ ಮಾಡಬೇಕಾಗಿ ಬಂದಿತ್ತು. ಕಟಾವು ವಿಳಂಬವಾದ ಕಾರಣ ಎರಡು ಮತ್ತು ಮೂರನೇ ಬೆಳೆ ಕಷ್ಟ. ಇದು ಒಟ್ಟು ಫಸಲಿನ ಮೇಲೆ ಪರಿಣಾಮ ಬೀಳಲಿದೆ. – ಸತ್ಯನಾರಾಯಣ ಉಡುಪ ಪ್ರಧಾನ ಕಾರ್ಯದರ್ಶಿ, ಭಾರತೀಯ ಕಿಸಾನ್ ಸಂಘ
ಆಗಬೇಕಾದ್ದೇನು?
– ಕೃಷಿ ಕೇಂದ್ರಗಳ ಮೂಲಕ ಭತ್ತ ಕಟಾವು ಯಂತ್ರ ಒದಗಿಸಬೇಕು. – ತತ್ಕ್ಷಣವೇ ಎಲ್ಲ ತಾಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರವನ್ನು ತೆರೆಯಬೇಕು. – ಹೆಚ್ಚುವರಿ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. – ಭತ್ತ ಶೇಖರಿಸಿ ಇಡುವ ವ್ಯವಸ್ಥೆ ಹೊಂದಿಲ್ಲದ ಕಾರಣ ಈಗ ನೋಂದಾಯಿಸಿ, ಜನವರಿಯಲ್ಲಿ ಖರೀದಿಸಿದರೆ ರೈತರಿಗೆ ಪ್ರಯೋಜನ ಇಲ್ಲ. – ಭತ್ತ ಕೃಷಿಕರಿಗಾಗಿಯೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. – ಲಕ್ಷ್ಮೀ ಮಚ್ಚಿನ