Advertisement

70 ವಿದ್ಯಾರ್ಥಿಗಳಿಗೆ ಒಂದೇ ಶೌಚಾಲಯ; ಮೂತ್ರ ವಿಸರ್ಜನೆಗೆ ಬಯಲೇ ಗತಿ

03:12 PM Nov 22, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಬಯಲು ಶೌಚಮುಕ್ತ ಪರಿಸರ ನಿರ್ಮಾಣಕ್ಕೆ ಸರ್ಕಾರ ಹಲವಾರು ಕ್ರಮ ಕೈಗೊಂಡಿದ್ದರೂ ಸಹ ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಾಲಾ ಮಕ್ಕಳೆ ಮೂತ್ರ ವಿಸರ್ಜನೆಗೆ ಬಯಲು ಆಶ್ರಯಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ವೆಂಕಟೇಶ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದೇ ಮೂತ್ರಾಲಯವಿರುವ ಕಾರಣ ಶಾಲಾ ಮಕ್ಕಳು ಬಿಡುವಿನ ಸಮಯದಲ್ಲಿ ಶಾಲಾ ಕಟ್ಟಡದ ಗೋಡೆ ನೆರಳಿಗೆ ತೆರಳಿ ಮುಜುಗರದಿಂದ ಮೂತ್ರ ವಿಸರ್ಜನೆ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

Advertisement

70 ವಿದ್ಯಾರ್ಥಿಗಳಿಗೆ ಒಂದೇ ಮೂತ್ರಾಲಯ:
ಒಂದರಿಂದ ಐದನೇ ತರಗತಿವರೆಗೆ ವಿದ್ಯಾಭ್ಯಾಸ ನೀಡುವ ಈ ಶಾಲೆಯಲ್ಲಿ ಒಟ್ಟು 70 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಾರೆ. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ಮೂತ್ರಾಲಯವಿರುವ ಕಾರಣ ವಿದ್ಯಾರ್ಥಿಗಳು ಅನಿವಾರ್ಯವಾಗಿ ಬಯಲಲ್ಲೆ ಮೂತ್ರ ವಿಸರ್ಜನೆ ಮಾಡಬೇಕಾಗಿದೆ. ವಿದ್ಯಾರ್ಥಿಗಳಿಗೆ ಬಿಡುವು ನೀಡಿದಾಗ ಶಾಲೆ ಕಟ್ಟಡ ಮರೆಯಲ್ಲಿ, ಗಿಡಗಂಟಿ ಆಶ್ರಯಿಸಿಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ.

ಇಕ್ಕಟ್ಟಾದ ಸ್ಥಳಾವಕಾಶ: 1997ರಲ್ಲಿ ನಿರ್ಮಾಣ  ಗೊಂಡಿರುವ ಶಾಲಾ ಕಟ್ಟಡ ಇಕ್ಕಟ್ಟಿನಿಂದ ಕೂಡಿದೆ. ಶಾಲಾ ವಿದ್ಯಾರ್ಥಿಗಳ ಕೊಠಡಿ ಸಣ್ಣ ಪ್ರಮಾಣದಲ್ಲಿದ್ದು ಕಟ್ಟಡವನ್ನು ಪುನರ್ನಿಮಾಣಕ್ಕೆ ಪತ್ರ ಬರೆದಿರುವುದಾಗಿ ತಿಳಿಸುತ್ತಾರೆ ಇಲ್ಲಿನ ಶಿಕ್ಷಕರು. ನಗರ ಪ್ರದೇಶದಲ್ಲಿರುವ ಶಾಲೆಗೆ ನೂತನ ಕಾಯಕಲ್ಪ ಬೇಕಿದೆ. ಕಟ್ಟಡ ಮರುನಿರ್ಮಾಣ ಮಾಡಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂಬುದು ಪೋಷಕರ ಆಗ್ರಹವಾಗಿದೆ.

ನಗರಕ್ಕೆ ಹೊಂದಿಕೊಂಡಿರುವ ಶಾಲೆ: ಹಳ್ಳಿಗಾಡಿನ ಪ್ರದೇಶದಲ್ಲಿನ ಶಾಲಾ ಕಟ್ಟಡಗಳು ನಿರ್ಲಕ್ಷ್ಯಕ್ಕೆ ಒಳಗಾಗುವುದು ಸರ್ವೆ ಸಾಮಾನ್ಯ. ಆದರೆ, ನಗರಕ್ಕೆ ಹೊಂದಿಕೊಂಡಿರುವ ಶಾಲೆಯಲ್ಲಿ ಹಲವಾರು ದಶಕದಿಂದ ಮೂತ್ರಾಲಯದ ಸಮಸ್ಯೆ ಇದ್ದರೂ ಸಹ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಪ್ರಜ್ಞಾವಂತರ ಆಕ್ರೋಶಕ್ಕೆ ಕಾರಣವಾಗಿದೆ.

ಕೂಡಲೇ ಮೂತ್ರಾಲಯ ನಿರ್ಮಿಸಲಿ: ಮೂಲಗಳ ಪ್ರಕಾರ ಶಾಲಾ ಕಟ್ಟಡವನ್ನು ಪುನರ್ನಿಮಾಣಕ್ಕೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಆದರೆ, ಅದಕ್ಕೆ ಇನ್ನು ಎಷ್ಟು ವರ್ಷಗಳ ಕಾಲಾವಕಾಶ ಹಿಡಿಯುತ್ತದೆ ಎಂಬುದು ದೇವರೆ ಬಲ್ಲ. ಅಲ್ಲಿಯವರೆಗೆ ಮಕ್ಕಳು ಬಯಲಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಕೂಡಲೇ ಶಾಲೆಯ ಪಕ್ಕದಲ್ಲಿ ಮೂತ್ರಾಲಯ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

ಸಿದ್ದಲಿಂಗೇಶ್ವರ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂತ್ರಾಲಯದ ಕೊರತೆ ಬಗ್ಗೆ ನನ್ನ ಗಮನಕ್ಕೆ
ಬಂದಿಲ್ಲ. ಶಾಲೆಯಲ್ಲಿನ ಸಮಸ್ಯೆ ಬಗ್ಗೆ ಮಾಹಿತಿ ತರಿಸಿಕೊಂಡು ಮುಂಬರುವ ಕ್ರಿಯಾಯೋಜನೆ ಹಾಕಿಕೊಂಡು ಮೂತ್ರಾಲಯ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಎಸ್‌.ಎಂ. ಮುಲ್ಲಾ ,
ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಧೋಳ

ವಾರ್ಡ್‌ ನಂ.5ರಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವಾರು ದಶಕದಿಂದ ಮೂತ್ರಾಲಯದ ಸಮಸ್ಯೆ ಇದೆ.
ಅಧಿಕಾರಿಗಳು ಶಾಲೆಯಲ್ಲಿ ಮೂತ್ರಾಲಯ ನಿರ್ಮಾಣಕ್ಕೆ ಕೂಡಲೇ ಮುಂದಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು.
ಅಶೋಕ ಎನ್‌., ಮುಧೋಳ ನಿವಾಸಿ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next