■ ಉದಯವಾಣಿ ಸಮಾಚಾರ
ಬೆಳಗಾವಿ: ದೇಶದಲ್ಲಿ ಮಾನವ ಕಳ್ಳ ಸಾಗಾಣಿಕೆ ಮತ್ತು ಜೀತ ಪದ್ಧತಿಯಂತಹ ಅನಿಷ್ಠ ಪದ್ಧತಿಗಳಿಗೆ ಬಡತನ, ಅನಕ್ಷರತೆ, ನಿರುದ್ಯೋಗ ಕಾರಣವಾಗಿದೆ. ಜೀತ ಪದ್ಧತಿ ಎಲ್ಲಿದೆ ಎಂಬುದನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪಿ. ಮುರಳಿಮೋಹನ್ ರೆಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ಪಂದನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸುವರ್ಣ ವಿಧಾನಸೌಧದಲ್ಲಿ ಮಾನವ ಕಳ್ಳ ಸಾಗಾಣಿಕೆ ಹಾಗೂ ಜೀತ ಕಾರ್ಮಿಕ ಪದ್ಧತಿ ತಡೆಗಟ್ಟುವ ಕುರಿತು ಬೆಳಗಾವಿ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳಸಾಗಾಣಿಕೆ, ಜೀತ ಪದ್ಧತಿಯು ದೇಶದ ಬಹು ದೊಡ್ಡ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಬೇಕಾದರೆ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದುಕೊಳ್ಳುವುದರ ಜೊತೆಗೆ ಕಾನೂನಿನ ಅರಿವು ಹೊಂದುವದು ಅತೀ ಮುಖ್ಯವಾಗಿದೆ ಎಂದರು.
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಅವಶ್ಯವಾಗಿ ಬೇಕು. ಜೀತ ಪದ್ಧತಿ ಎಲ್ಲಿಯಾದರೂ ನಡೆದರೆ ಅದನ್ನು ಗುರುತಿಸಿ ಸಂಬಂಧಪಟ್ಟವರ ಗಮನಕ್ಕೆ ತರಬೇಕು. ಆಗ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ತಂದೆ, ತಾಯಿ ಜೀತ ಪದ್ಧತಿ ಅಥವಾ ಜೀತದ ಕೆಲಸದಲ್ಲಿ ತೊಡಗಿದ್ದಲ್ಲಿ ಅವರ ಮಕ್ಕಳೂ ಕೂಡ ಈ ಕೆಲಸವನ್ನು ಮಾಡುತ್ತಾರೆ. ಈ ಜೀತ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಬೇಕೆಂಬುದು ಪ್ರತಿಯೊಬ್ಬರ ಧ್ಯೇಯವಾಗಿದೆ ಎಂದು ಹೇಳಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ವೀರನಗೌಡ ಪಾಟೀಲ ಮಾತನಾಡಿ ಜೀತ ಪದ್ಧತಿ, ಮಾನವ ಕಳ್ಳ ಸಾಗಾಣಿಕೆ ತಡೆಟ್ಟಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಜೀತದಾಳುಗಳ ಗುರುತಿಸುವಿಕೆ, ಬಿಡುಗಡೆ, ಪುನರ್ವಸತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಾದರಿ ಕಾರ್ಯ ವಿಧಾನಗಳು ಮತ್ತು ಜೀತಪದ್ಧತಿ (ರದ್ದತಿ) ಕಾಯ್ದೆ, 1976 ಸಂಕ್ಷಿಪ್ತ ವಿಚಾರಣೆ ಕುರಿತು ಹಾಗೂ ಮಾನವ ಕಳ್ಳ ಸಾಗಾಣಿಕೆ ತಡೆವಹಿಸಬೇಕಾಗಿರುವ ಕಾನೂನು ಕ್ರಮಗಳ ಕುರಿತು ತಿಳಿಸಿದರು.
ರಾಜ್ಯ ಉನ್ನತ ಸಮಿತಿ ಸದಸ್ಯರಾದ ವಿಲಿಯಂ ಕ್ರಿಸ್ಟೋಫರ್, ಸ್ಪಂದನ ಸಂಸ್ಥೆಯ ಕಾರ್ಯದರ್ಶಿ ವಿ.ಸುಶೀಲ, ಕಾರ್ಯಕ್ರಮ ಸಂಯೋಜಕರಾದ ಕರೆಪ್ಪಾ ಮಾದಿಗರ, ಶ್ರೀಬಾಬು ಹೊನೊಳೆ, ಕಾರ್ಮಿಕ ಇಲಾಖೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಂಘ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.