Advertisement

ಬಸ್‌ ಶೆಲ್ಟರ್‌ ಗೊಂದಲ: ಸ್ಟೇಟ್‌ಬ್ಯಾಂಕ್‌ ಸರ್ವೀಸ್‌ ಬಸ್‌ ನಿಲ್ದಾಣ ಕಾಮಗಾರಿಗೆ ಹಿನ್ನಡೆ

03:17 PM Aug 24, 2022 | Team Udayavani |

ಮಹಾನಗರ: ನಿರೀಕ್ಷೆಯಂತೆ ಈಗಾಗಲೇ ಕಾಮಗಾರಿ ಪೂರ್ಣಗೊಳ್ಳಬೇಕಿದ್ದ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಬಸ್‌ ಶೆಲ್ಟರ್‌ ಅಳವಡಿಕೆ ಕುರಿತಂತೆ ಇರುವ ಗೊಂದಲದ ಪರಿಣಾಮ ಬಸ್‌ ನಿಲ್ದಾಣದಲ್ಲಿ ಕೊಡೆ ಹಿಡಿದೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಪ್ರಯಾಣಿಕರದ್ದು.

Advertisement

ಹಲವು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತಿದ್ದ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣವನ್ನು ಸುಮಾರು 4.2 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ, ಮುಡಾದಿಂದ ಅಭಿವೃದ್ಧಿಗೊಳಿಸಲಾಗುತ್ತಿದೆ. ಬಸ್‌ ನಿಲ್ದಾಣದ ಬಹುತೇಕ ಕಾಮಗಾರಿ ಪೂರ್ಣಗೊಂಡರೂ, ಬಸ್‌ ಶೆಲ್ಟರ್‌ ಮಾತ್ರ ಇನ್ನೂ ನಿರ್ಮಾಣಗೊಂಡಿಲ್ಲ. ಪಿಪಿಪಿ ಮಾದರಿಯಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಈ ಹಿಂದೆ ಟೆಂಡರ್‌ ಕರೆಯ ಲಾಗಿತ್ತು. ಆದರೆ, ಟೆಂಡರ್‌ ವಹಿಸಿ ಕೊಳ್ಳಲು ಯಾರೂ ಆಸಕ್ತಿ ವಹಿಸದ ಕಾರಣ, ಕಾಮಗಾರಿ ಆರಂಭಗೊಂಡಿಲ್ಲ. ಬಸ್‌ ಶೆಲ್ಟರ್‌ ನಿರ್ಮಾಣ ಈಗಾಗಲೇ ಮಾದರಿಯೊಂದನ್ನು ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಆದರೆ, ಆ ಮಾದರಿಗೆ ಖರ್ಚು ಹೆಚ್ಚಾಗುವ ಕಾರಣ ಆ ಯೋಜನೆ ಕೈ ಬಿಡಲಾಗಿದೆ. ಬದಲಾಗಿ ಮಾಮೂಲಿ ಶೆಲ್ಪರ್‌ ನಿರ್ಮಾಣ ಸದ್ಯದಲ್ಲೇ ಆರಂಭಗೊಳ್ಳುವ ನಿರೀಕ್ಷೆ ಇದೆ. ನೂತನ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತು ಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸುಸಜ್ಜಿತ ಶೌಚಾಲಯ ವ್ಯವಸ್ಥೆ ಒಳಗೊಳ್ಳಲಿದೆ. ಈ ಹಿಂದೆ ಬಸ್‌ನಿಲ್ದಾಣದ ಒಳಭಾಗದಲ್ಲಿರುವ ಛಾವಣಿ ಸಮರ್ಪಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದಿತ್ತು. ಜತೆಗೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆಯಿಲ್ಲ. ದೂರದೂರಿನಿಂದ ಬರುವ ಪ್ರಯಾಣಿಕರು ಇದೇ ನಿಲ್ದಾಣವನ್ನು ಅವಲಂಬಿಸಿರುವ ಕಾರಣದಿಂದ ನಿತ್ಯ ಸಮಸ್ಯೆ ಪರಿಹಾರವಾಗದೆ ಪ್ರಯಾಣಿಕರಿಗೆ ತಲೆನೋವಾಗಿತ್ತು. ಇದೀಗ ಸುಸಜ್ಜಿತ ಬಸ್‌ ನಿಲ್ದಾಣ ಕಲ್ಪಿಸಲು ಕಾಮಗಾರಿ ಸಾಗುತ್ತಿದೆ.

ವಿಸ್ತರಣೆಯಾಗಿದೆ ಬಸ್‌ ನಿಲ್ದಾಣ

ಸ್ಟೇಟ್‌ಬ್ಯಾಂಕ್‌ನ ಸರ್ವೀಸ್‌ ಬಸ್‌ ನಿಲ್ದಾಣ ಅಭಿವೃದ್ಧಿಯ ಜತೆ ವಿಸ್ತರಣೆಯಾಗಿದೆ. ಬಸ್‌ ನಿಲ್ದಾಣ ಸಂಪರ್ಕಿತ ಸರ್ವೀಸ್‌ ರಸ್ತೆಯನ್ನು ಕೆಡಹಿ ಅಲ್ಲಿಯವರೆಗೆ ನಿಲ್ದಾಣ ವಿಸ್ತರಿಸಲಾಗಿದೆ. ಪೂರ್ಣ ಮಟ್ಟದ ಅಭಿವೃದ್ಧಿಗೆಂದು 15ನೇ ಹಣಕಾಸು ನಿಧಿಯಲ್ಲಿ 1 ಕೋಟಿ ರೂ., ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 2.2 ಕೋಟಿ ರೂ. ಮತ್ತು ಮುಡಾದಿಂದ 1 ಕೋಟಿ ರೂ. ಭರಿಸಲಾಗಿದ್ದು, ಅಭಿವೃದ್ಧಿ ಕಾರ್ಯ ನಡೆಯುತ್ತಿದೆ.

ಸದ್ಯದಲೇ ಪೂರ್ಣ: ಸ್ಟೇಟ್‌ಬ್ಯಾಂಕ್‌ನಲ್ಲಿ ಸರ್ವೀಸ್‌ ಬಸ್‌ ನಿಲ್ದಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಸ್‌ ಶೆಲ್ಟರ್‌ ನಿರ್ಮಾಣದಲ್ಲಿ ಇದ್ದ ಗೊಂದಲದಿಂದ ಕಾಮಗಾರಿ ತುಸು ವಿಳಂಬಗೊಂಡಿತ್ತು. ಸದ್ಯ ಸಮಸ್ಯೆ ಇತ್ಯರ್ಥಗೊಂಡಿದ್ದು, ತತ್‌ಕ್ಷಣ ಕಾಮಗಾರಿಯೂ ಆರಂಭಗೊಳ್ಳಲಿದೆ. ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. –ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next