Advertisement

Puttur: ಗಮನಿಸಿ, ಇಲ್ಲೆಲ್ಲ ತಂಗುದಾಣ ಬೇಕು!

12:58 PM Dec 13, 2024 | Team Udayavani |

ಪುತ್ತೂರು: ಮಂಡಲ ಪಂಚಾಯತ್‌ನಿಂದ ನಗರಸಭೆ ತನಕ ಬೆಳೆದಿರುವ ಪುತ್ತೂರು ನಗರ ಸ್ಮಾರ್ಟ್‌ ಸಿಟಿಯ ಕನಸಿನಲ್ಲಿದೆ. ಸುತ್ತಮುತ್ತಲಿನ ನಾಲ್ಕು ತಾಲೂಕಿನ ಜನರು ಒಂದಲ್ಲ ಒಂದು ಕಾರಣಕ್ಕಾಗಿ ಪುತ್ತೂರು ನಗರಕ್ಕೆ ಬರುತ್ತಾರೆ. ಹತ್ತಾರು ದಿಕ್ಕಿನಲ್ಲಿ ಇಲಾಖೆಗಳ ಕಚೇರಿಗಳಿವೆ. ನಗರದೊಳಗಿನ ಸಣ್ಣ ಸಣ್ಣ ಪ್ರದೇಶಗಳು ಈಗ ಜನ ಸಂಚಾರ ಕೇಂದ್ರಿತ ಪ್ರದೇಶವಾಗಿ ಬೆಳೆಯುತ್ತಿವೆ. ನಗರದ ಕೇಂದ್ರ ಸ್ಥಾನದ ಮಾರುಕಟ್ಟೆಗಳಲ್ಲಿ ಸಿಗುತ್ತಿದ್ದ ಸೌಲಭ್ಯಗಳು ಈಗ ದರ್ಬೆ, ಬೊಳುವಾರಿಗೆ ಹೋದರೂ ಸಿಗುತ್ತದೆ. ಅಂದರೆ ನಗರದ ಕೆಲವು ಪ್ರದೇಶಗಳು ಜನರ ಅಗತ್ಯತೆಗಳು ಪೂರೈಸುವ ಮಿನಿ ಪಟ್ಟಣಗಳಾಗಿವೆ.

Advertisement

ಒಂದು ಕಾಲದಲ್ಲಿ ಕೇಂದ್ರೀಕೃತವಾಗಿದ್ದ ಪಟ್ಟಣ ವಿಕೇಂದ್ರೀಕರಣವಾಗಿದೆ. ಕೆಲವು ಸರಕಾರಿ ಇಲಾಖೆಗಳು ಪುತ್ತೂರು ನಗರದ ಬೇರೆಬೇರೆ ಭಾಗಗಳಿಗೆ ಸ್ಥಳಾಂತರಗೊಂಡು ಅಲ್ಲಿ ಸೇವೆ ನೀಡುತ್ತಿದೆ. ಅಂದರೆ ನಗರದ ಕೇಂದ್ರ ಸ್ಥಾನಕ್ಕೆ ಬಂದು ಬಸ್‌, ಆಟೋಕ್ಕಾಗಿ ಹತ್ತಾರು ದಿಕ್ಕಿಗೆ ಹೋಗಬೇಕಿದ್ದ ಸ್ಥಿತಿ ಈಗ ಬದಲಾಗಿದೆ. ಕೇಂದ್ರ ನಿಲ್ದಾಣಕ್ಕೆ ಬಾರದೆ ಮಿನಿ ಪಟ್ಟಣಗಳ ಬಳಿಯಲ್ಲೇ ನಿಂತು ತಮ್ಮೂರಿಗೆ ತೆರಳುವ ಬಸ್‌, ಆಟೋ, ಟೂರಿಸ್ಟ್‌ ವಾಹನಗಳು ಏರುತ್ತಾರೆ. ಕಾಣಿಯೂರು ಕಡೆಗೆ ಹೋಗುವ ಪ್ರಯಾಣಿಕ ದರ್ಬೆಯಲ್ಲಿ, ಉಪ್ಪಿನಂಗಡಿಗೆ ಹೋಗವ ಪ್ರಯಾಣಿಕ ಬೊಳುವಾರಿನಲ್ಲಿ ನಿಲ್ಲುವುದುಂಟು. ಹೀಗೆ ನಗರದ ಮುಖ್ಯ ರಸ್ತೆ ಸಂಪರ್ಕ ಇರುವ ಪ್ರದೇಶಗಳಲ್ಲಿ ಬೆಳಗ್ಗೆ, ಸಂಜೆ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ಆಟೋ, ಬಸ್‌ಗಾಗಿ ಕಾಯುತ್ತಿರುವ ದೃಶ್ಯ ಸರ್ವೆ ಸಾಮಾನ್ಯ. ಆದರೆ ಈ ಜಾಗಗಳಲ್ಲಿ ಪ್ರಯಾಣಿಕರಿಗೆ ನಿಲ್ಲಲು ಸರಿಯಾದ ವ್ಯವಸ್ಥೆ ಇದೆಯೇ ಎಂದು ಕೇಳಿದರೆ ಇಲ್ಲ!

ಬಸ್‌, ಆಟೋಗಾಗಿ ಕಾಯುವ ಪ್ರಯಾಣಿಕರಿಗೆ ರಸ್ತೆ ಬದಿ, ಅಂಗಡಿ ಮುಂಭಾಗವೇ ತಂಗುದಾಣ. ಕನಿಷ್ಠ ವಿಶ್ರಾಂತಿಗೂ ಇಲ್ಲಿ ನೆಲೆ ಇಲ್ಲದ ಸ್ಥಿತಿ ಇದೆ. ಗಲ್ಲಿ ಗಲ್ಲಿಯಲ್ಲಿ ಆಟೋ ಸಂಚಾರ, ಬಸ್‌ ಸಂಚಾರ ಇದ್ದರೂ ಸ್ಮಾರ್ಟ್‌ ಸಿಟಿ ಕನಸಿನ ನಗರದಲ್ಲಿ ಪ್ರಯಾಣಿಕರಿಗೆ ಆಕಾಶವೇ ಛಾವಣಿ. ಬಿಸಿಲು, ಮಳೆ, ಚಳಿಯಲ್ಲೇ ರಸ್ತೆ ಬದಿ ನಿಲ್ಲಬೇಕಾದ ಸ್ಥಿತಿ. ನಗರದೊಳಗೆ ಪ್ರಯಾಣಿಕರ ತಂಗುದಾಣವೇ ಇಲ್ಲದ ಕೆಲವು ಜಾಗಗಳನ್ನು ಉದಯವಾಣಿ ಸುದಿನ ಗುರುತಿಸಿ ನಗಾರಡಳಿತದ ಮುಂದಿರಿಸಿದೆ. ನಮ್ಮ ಕಳಕಳಿಯೇನೆಂದರೆ ಇಲ್ಲಿಗೊಂದು ತಂಗುದಾಣ ಇರಲಿ..

ಸ್ಥಳ: ಬೊಳುವಾರು
ಎಲ್ಲಿದೆ, ಮಹತ್ವ ಏನು?:
ಪುತ್ತೂರು ನಗರದಿಂದ ಉಪ್ಪಿನಂಗಡಿ ಭಾಗಕ್ಕೆ ಕವಲೊಡೆದಿರುವ ರಸ್ತೆಯ ಪ್ರಾರಂಭದ ಸರ್ಕಲ್‌. ವಾಣಿಜ್ಯ ಮಳಿಗೆ, ಹೊಟೇಲ್‌, ಧಾರ್ಮಿಕ ಕೇಂದ್ರ, ಮಾರುಕಟ್ಟೆ ಮೊದಲಾದವುಗಳು ಇಲ್ಲಿವೆ. ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರು ಭಾಗದಿಂದ ಪುತ್ತೂರು ನಗರಕ್ಕೆ ಪ್ರವೇಶಿಸುವಾಗ ಸಿಗುವ 2ನೇ ವೃತ್ತವಿದು.

Advertisement

ತಂಗುದಾಣ ಏಕೆ?: ನೆಹರೂ ನಗರ ಭಾಗದಿಂದ ಬರುವ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಉಪ್ಪಿನಂಗಡಿ ಭಾಗಕ್ಕೆ ತೆರಳುವ ಬಸ್‌ಗಾಗಿ ಬೊಳುವಾರು ವೃತ್ತದ ಬಳಿ ಕಾಯುತ್ತಾರೆ. ಇನ್ನು ಕೃಷ್ಣನಗರ, ಕೆಮ್ಮಾಯಿ, ದಾರಂದಕುಕ್ಕು, ಬನ್ನೂರು ಗ್ರಾಪಂ ಮೊದಲಾದೆಡೆಗೆ ತೆರಳುವವರು ಆಟೋಗಾಗಿ ಇಲ್ಲಿ ಕಾಯತ್ತಾರೆ. ಪ್ರಸ್ತುತ ಇಲ್ಲಿ ಪ್ರಯಾಣಿಕರಿಗೆ ರಸ್ತೆ ಬದಿಯೇ ತಂಗುದಾಣ.

ಸ್ಥಳ: ಗ್ರಾಮ ಚಾವಡಿ ಹತ್ತಿರ
ಎಲ್ಲಿದೆ, ಮಹತ್ವ ಏನು?:
ಕೋರ್ಟ್‌ ರಸ್ತೆ, ಕಿಲ್ಲೆ ಮೈದಾನ, ಮಿನಿವಿಧಾನ ಸೌಧಕ್ಕೆ ತೆರಳುವ ರಸ್ತೆಯ ಕೇಂದ್ರ ಸ್ಥಾನದಲ್ಲಿರುವ ಗ್ರಾಮ ಚಾವಡಿ ಪಕ್ಕ. ಇದು ಶ್ರೀಧರ್‌ ಭಟ್‌ ಅಂಗಡಿಯಿಂದ ಕಲ್ಲಿಮಾರ್‌, ಎಂ.ಟಿ ರಸ್ತೆಗೆ ಸಂಪರ್ಕಿಸುವ ರಸ್ತೆ. ಮಂಗಳೂರು ಭಾಗಕ್ಕೆ ತೆರಳುವ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳು ಇಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ.

ತಂಗುದಾಣ ಏಕೆ?: ವಾರದ ಸಂತೆ ನಡೆಯುವ ಕಿಲ್ಲೆ ಮೈದಾನ, ಮಿನಿ ವಿಧಾನಸೌಧ, ಗ್ರಾಮ ಚಾವಡಿ, ನ್ಯಾಯಾಲಯ, ತಾಲೂಕು ಪಂಚಾಯತ್‌, ಶಾಸಕರ ಕಚೇರಿ, ತಾಲೂಕು ಆಸ್ಪತ್ರೆ, ಬಿಇಓ ಕಚೇರಿ ಸಹಿತ ಪ್ರಮುಖ ಇಲಾಖೆಗಳು ಇಲ್ಲಿದ್ದು ಅತ್ಯಧಿಕ ಜನಸಂಪರ್ಕದ ತಾಣ. ಇಲ್ಲಿ ನೂರಾರು ಆಟೋಗಳು ಸಂಚರಿಸುತ್ತಿವೆ. ಇಲ್ಲಿ ರಸ್ತೆ ಬದಿ ಅಥವಾ ಅಂಗಡಿಗಳ ಮುಂಭಾಗವೇ ತಂಗುದಾಣ.

ಸ್ಥಳ: ದರ್ಬೆ
ಎಲ್ಲಿದೆ, ಮಹತ್ವ ಏನು?:
ಇದು ಪುತ್ತೂರು ನಗರದ ಪ್ರಮುಖ ವೃತ್ತ. ದರ್ಬೆ ಸರ್ಕಲ್‌ ಎಂದೇ ಜನಜನಿತ. ಸರ್ಕಲ್‌ನ ಎಡಭಾಗಕ್ಕೆ ಸುಬ್ರಹ್ಮಣ್ಯ ಕ್ಷೇತ್ರ, ಬಲ ಭಾಗಕ್ಕೆ ಸುಳ್ಯ ತೆರಳುವ ರಸ್ತೆಗಳಿವೆ. ಇಲ್ಲಿ ಸುಬ್ರಹ್ಮಣ್ಯ, ಕಾಣಿಯೂರು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ತಂಗುದಾಣದ ಸಮಸ್ಯೆ ಇದೆ. ಕುಂಬ್ರ, ಸುಳ್ಯ ಭಾಗಕ್ಕೆ ತೆರಳುವವರಿಗೆ ತಂಗುದಾಣ ಇದೆ.

ತಂಗುದಾಣ ಏಕೆ?: ದರ್ಬೆ ಸರ್ಕಲ್‌ ಬಳಿ ಎಡ ಭಾಗದಿಂದ ಸುಬ್ರಹ್ಮಣ್ಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದು ನರಿಮೊಗರು, ಸವಣೂರು, ಕಾಣಿಯೂರು ಭಾಗಕ್ಕೆ ತೆರಳುವವರು ದರ್ಬೆಯಲ್ಲಿ ಬಸ್‌ಗಾಗಿ ಕಾಯುತ್ತಾರೆ. ಆಟೋಗಳು ಕೂಡ ಇಲ್ಲಿಂದ ಪ್ರಯಾಣಿಕರನ್ನು ಸಾಗಿಸುತ್ತದೆ. ರಾತ್ರಿ ಸುಬ್ರಹ್ಮಣ್ಯ, ಬೆಂಗಳೂರು ತೆರಳುವ ಬಸ್‌ಗಳಿಗೂ ಇಲ್ಲೇ ಬಂದು ಪ್ರಯಾಣಿಕರು ನಿಲ್ಲುತ್ತಾರೆ. ಆದರೆ ಇಲ್ಲಿ ತಂಗುದಾಣ ಇಲ್ಲ.

ಸ್ಥಳ: ಬೈಪಾಸ್‌ ಸರ್ಕಲ್‌
ಎಲ್ಲಿದೆ, ಮಹತ್ವ ಏನು?:
ಇದು ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ ಬಳಿ ಇರುವ ಪತ್ರಾವೋ ಸರ್ಕಲ್‌. ಸುಳ್ಯ, ಕುಂಬ್ರ, ಈಶ್ವರಮಂಗಲ ಭಾಗದಿಂದ ಬರುವವರಿಗೆ ಹೆಬ್ಟಾಗಿಲು. ಸುಳ್ಯಭಾಗಕ್ಕೆ ಕವಲೊಡೆದಿರುವ ರಸ್ತೆ ಬದಿ ಬಸ್‌ಗಳು ನಿಲುಗಡೆಯಾಗುತ್ತಿದೆ. ಅಟೋಗಳು ನಿಂತು ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ.

ತಂಗುದಾಣ ಏಕೆ?: ನಗರದಿಂದ ಏಳೆಂಟು ಕಿ.ಮೀ. ದೂರದ ವ್ಯಾಪ್ತಿಗೆ ಸಂಚರಿಸುವವರು ಬಸ್‌, ಆಟೋಗಾಗಿ ಇಲ್ಲಿಯೇ ಕಾಯುತ್ತಾರೆ. ಮೊಟ್ಟೆತ್ತಡ್ಕ, ಮುಕ್ರಂಪಾಡಿ, ಸಂಟ್ಯಾರು ಭಾಗಕ್ಕೂ ಇಲ್ಲಿಂದ ಆಟೋ ಮೂಲಕ ಹೋಗುತ್ತಾರೆ. ಖಾಸಗಿ ವಿದ್ಯಾಸಂಸ್ಥೆ, ಕೃಷಿ ಇಲಾಖೆ, ಸಭಾಭವನವೂ ಈ ಆಸುಪಾಸಿನಲ್ಲಿ ಇದ್ದು ಇಲ್ಲಿನ ವಿದ್ಯಾರ್ಥಿಗಳು, ಸಿಬಂದಿ ಈ ಸ್ಥಳವನ್ನೇ ಆಶ್ರಯಿಸಿದ್ದಾರೆ. ಇಲ್ಲೀಗ ಬೃಹತ್‌ ಮರದ ಅಡಿಯೇ ತಂಗುದಾಣ.

ಸ್ಥಳ: ಪರ್ಲಡ್ಕ ಜಂಕ್ಷನ್‌
ಎಲ್ಲಿದೆ, ಮಹತ್ವ ಏನು?:
ಇದು ನಗರದ ಹೊರವಲಯದ ಬೈಪಾಸ್‌ ರಸ್ತೆಗೆ ತಾಗಿಕೊಂಡಿರುವ ಪ್ರದೇಶ. ನಾಲ್ಕು ದಿಕ್ಕಿನಿಂದ ರಸ್ತೆಗಳು ಸಂಗಮಿಸುವ ಸ್ಥಳ. ನಗರದ ಮುಖ್ಯ ರಸ್ತೆಯಲ್ಲಿ ವಾಹನ ದಟ್ಟಣೆ ವೇಳೆ ಪರ್ಯಾಯವಾಗಿ ಒಳರಸ್ತೆಗಳಲ್ಲಿ ಪ್ರವೇಶಿಸಲು ಇರುವ ವೃತ್ತ ಇದು. ಪ್ರಯಾಣಿಕರು ಅಟೋ ರಿಕ್ಷಾಕ್ಕೆ ಕಾಯುವ ಜಾಗ ಇದು.

ತಂಗುದಾಣ ಏಕೆ?: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯು ಇಲ್ಲೇ ಹಾದು ಹೋಗಿದೆ. ಪುತ್ತೂರು-ಪರ್ಲಡ್ಕ-ಕುಂಜೂರುಪಂಜ-ದೇವಸ್ಯ-ವಳತ್ತಡ್ಕ ರಸ್ತೆ, ಎಡ-ಬಲ ಬದಿಗಳಲ್ಲಿ ರಾಷ್ಟ್ರೀಯ ಹೆದ್ದಾರಿಯು ಸಂಪರ್ಕ ಪಡೆದಿದೆ. ಕಾರಂತರ ಬಾಲವನ ಪರ್ಲಡ್ಕದಲ್ಲಿದೆ. ಹಲವಾರು ಮನೆಗಳು ಇವೆ. ಪಟ್ಟಣಕ್ಕೆ ಬರುವವರು ಅಥವಾ ಬಾಲವನಕ್ಕೆ ತೆರಳುವವರು ಇಲ್ಲಿ ರಿಕ್ಷಾ ಹತ್ತುತ್ತಾರೆ. ಇಲ್ಲಿಗೊಂದು ನಿಲ್ದಾಣ ಬೇಕು.

ಸ್ಥಳ: ಲಿನೆಟ್‌ ವೃತ್ತ
ಎಲ್ಲಿದೆ, ಮಹತ್ವ ಏನು?:
ಇದು ಮಂಗಳೂರು, ವಿಟ್ಲ, ಕಬಕ ಭಾಗದಿಂದ ಪುತ್ತೂರು ನಗರವನ್ನು ಪ್ರವೇಶಿವ ಇನ್ನೊಂದು ಹೆಬ್ಟಾಗಿಲು. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಸ್ಥಳ. ಆಟೋ ರಿಕ್ಷಾಗಳಿಗೆ ಇಲ್ಲಿ ಪ್ರಯಾಣಿಕರು ಕಾಯುತ್ತಾರೆ.

ತಂಗುದಾಣ ಏಕೆ?: ಇಲ್ಲಿ ಸರಕಾರಿ ಬಸ್‌ ನಿಲುಗಡೆ ಇಲ್ಲ. ತುರ್ತು ಸಂದರ್ಭದಲ್ಲಿ ಖಾಸಗಿ ಬಸ್‌ ನಿಲ್ಲಿಸುವುದುಂಟು. ಇಲ್ಲಿ ಹೆಚ್ಚಾಗಿ ಆಟೋ ಪ್ರಯಾಣಿಕರೇ ಹೆಚ್ಚು. ಬೊಳುವಾರು, ನಗರಕ್ಕೆ ಸಂಚರಿಸುವವರು ಇಲ್ಲಿ ಆಟೋಗೆ ಕಾಯುತ್ತಾರೆ. ಸದ್ಯಕ್ಕೆ ಇಲ್ಲಿ ಪ್ರಯಾಣಿಕರ ತಂಗುದಾಣ ಇಲ್ಲ. ಒಂದು ವೇಳೆ ವಾಹನಗಳೇ ನಿಲ್ಲಿಸದಿದ್ದರೆ ನಡೆದುಕೊಂಡೇ ಬೊಳುವಾರಿಗೆ ಬರಬೇಕು ಅನ್ನುವ ಸ್ಥಿತಿ ಇಲ್ಲಿನದು.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next