Advertisement

Service Variation: ಸರಕಾರಿ ಬಸ್‌ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ

03:30 AM Dec 17, 2024 | Team Udayavani |

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಧರ್ಮಸ್ಥಳ ಡಿಪೋದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸ್‌ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು ಅವರು ಸೋಮ ವಾರ ಕೆಲಸಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಸ್‌ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.

Advertisement

ಧರ್ಮಸ್ಥಳ ಡಿಪೋದಲ್ಲಿ 128 ಬಸ್‌ಗಳಿದ್ದು, 121 ಅನುಸೂಚಿ, 136 ಚಾಲಕ ಕಂ ನಿರ್ವಾಹಕ, 75 ಚಾಲಕ ಹಾಗೂ 29 ನಿರ್ವಾಹಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ 72 ಚಾಲಕರು ಕರ್ತವ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಸೇವೆಗೆ ಲಭ್ಯರಾಗದ ಕಾರಣ ಸಮಸ್ಯೆಗಳು ಉದ್ಭವಿಸಿವೆ. ಪೂಜ್ಯಾಯ ಮತ್ತು ಪನ್ನಗ ಗುತ್ತಿಗೆ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿರುವ ಈ ಚಾಲಕರ ಗುತ್ತಿಗೆ ಅವಧಿ ಮುಗಿದಿದ್ದು ನವೀಕರಣ ಪ್ರಕ್ರಿಯೆ ನಡೆಯಬೇಕಿದೆ. ಇದಕ್ಕೆ ಇನ್ನೂ ನಾಲ್ಕು ದಿನ ಬೇಕಾಗುವ ಸಾಧ್ಯತೆ ಇರುವ ಕಾರಣ ಸಮಸ್ಯೆ ಅಷ್ಟು ದಿನ ಮುಂದು ವರಿಯಲಿದೆ.

ಸ್ಥಳೀಯ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗದಂತೆ ಬಸ್‌ ಓಡಾಟ ವ್ಯವಸ್ಥೆ ಮಾಡಲಾಗಿದ್ದು, ದೂರದ ಊರುಗಳ ಕೆಲವು ಟ್ರಿಪ್‌ಗ್ಳನ್ನು ಕಡಿತಗೊಳಿಸುವ ಅನಿವಾರ್ಯತೆ ಉಂಟಾಗಿದೆ. ಇತರ ಡಿಪೋಗಳಿಂದ ಬರುವ ಬಸ್‌ಗಳಲ್ಲಿ ದೂರದ ಊರಿನ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅನುಕೂಲ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಜಾರಿಯಲ್ಲಿವೆ ಎಂದು ಧರ್ಮಸ್ಥಳ ಡಿಪೋದ ಅಧಿಕಾರಿಗಳು ತಿಳಿಸಿದ್ದಾರೆ.

ಚಾಲಕರ ಆಕ್ರೋಶ
ಗುತ್ತಿಗೆ ಅವಧಿ ಮುಗಿದಿರುವ ಚಾಲಕರು ತಾವು ಕಾರ್ಯನಿರ್ವಹಿಸುವ ಗುತ್ತಿಗೆ ಸಂಸ್ಥೆಯಲ್ಲಿ ಈಗಾಗಲೇ 25,000 ರೂ. ಠೇವಣಿ ಇರಿಸಿದ್ದಾರೆ.
ಈಗ ಸಂಸ್ಥೆ 10,000 ರೂ. ಹೆಚ್ಚುವರಿ ಠೇವಣಿಯನ್ನು ಕೇಳುತ್ತಿದ್ದು ಈ ಬಗ್ಗೆ ಚಾಲಕರಿಂದ ಆಕ್ರೋಶ ವ್ಯಕ್ತವಾಗಿದೆ. ಸರಕಾರ ನೀಡುತ್ತಿರುವ ಸಂಬಳದಲ್ಲಿ ಗುತ್ತಿಗೆ ಸಂಸ್ಥೆ ಸಾಕಷ್ಟು ಕಡಿತ ಮಾಡುತ್ತಿದ್ದು ನಿಗದಿಪಡಿಸಿದ ಮೊತ್ತವನ್ನು ಒದಗಿಸುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಯಾಣಿಕರ ಸಂಕಷ್ಟ
ಧರ್ಮಸ್ಥಳ, ಉಜಿರೆ, ಬೆಳ್ತಂಗಡಿ ಮೊದಲಾದ ಕಡೆಯಿಂದ ಬೇರೆ ಬೇರೆ ಊರುಗಳಿಗೆ ತೆರಳುವ ಮಂದಿ ಬಸ್‌ ವ್ಯತ್ಯಯದಿಂದ ಸಂಕಷ್ಟ ಅನುಭವಿಸಿದರು. ಸೋಮವಾರವಾದ ಕಾರಣ ಹೆಚ್ಚಿನ ಜನ ಸಂದಣಿಯು ಕಂಡುಬಂದಿತು. ಈ ಸಮಸ್ಯೆ ಇನ್ನೂ ಕೆಲವು ದಿನ ಮುಂದುವರಿಯಲಿರುವ ಕಾರಣ ಬೇರೆ ಬೇರೆ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ಪರದಾಟ ನಡೆಸುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next