Advertisement
ಕಾರ್ಕಳದ ಪುಲ್ಕೇರಿ ಬೈಪಾಸ್‌ನಿಂದ ಪದವು ಗ್ರಾಮದ ಬಿಕರ್ನಕಟ್ಟೆವರೆಗೆ ಒಟ್ಟು 45 ಕಿ. ಮೀ. ಚತುಷ್ಪಥ ರಸ್ತೆ ಯೋಜನೆ ಮಂಗಳೂರು- ಸೋಲಾಪುರ ಹೆದ್ದಾರಿ ಯೋಜನೆಯ ಮಹತ್ವದ ಭಾಗ. ಈ ಕಾಮಗಾರಿಯಲ್ಲಿ ಕಾರ್ಕಳ ತಾಲೂಕಿನಲ್ಲಿ ಕೇವಲ 4.5 ಕಿ.ಮೀ. ರಸ್ತೆಯ ಕಾಮಗಾರಿ ನಡೆಯುತ್ತಿದ್ದರೂ ಸಮಸ್ಯೆಗಳು ಮಾತ್ರ ನೂರಾರು. 2022ರಲ್ಲಿ 3ಎ ನೋಟಿಫಿಕೇಶನ್ ಆಗಿದ್ದರೂ ಭೂಸ್ವಾಧೀನ ಪ್ರಕ್ರಿಯೆ ವಿಳಂಬ, ಕೃಷಿ ಜಮೀನಿಗೆ ಅತ್ಯಲ್ಪ ಪರಿಹಾರ, ಆಗಾಗ ರಸ್ತೆಯ ಅಲೈನ್ಮೆಂಟ್ ಬದಲಾವಣೆಯ ಗೊಂದಲಗಳಿಂದ ಯೋಜನೆ ಕುಂಟುತ್ತಾ ಸಾಗಿದೆ.
ಸಾಣೂರು ಹೈಸ್ಕೂಲ್‌ನಿಂದ ಪುಲ್ಕೇರಿ ಬೈಪಾಸ್‌ವರೆಗೆ ನಾಲ್ಕೈದು ಕಡೆಗಳಲ್ಲಿ ಡೈವರ್ಶನ್ ನೀಡಲಾಗಿದೆ. ಇಂಡಿಯನ್ ಆಯಿಲ್ ಪೆಟ್ರೋಲ್ ಬ್ಯಾಂಕ್ ಸಮೀಪ, ರಾಮ ಮಂದಿರದ ಸಮೀಪ ಹೆದ್ದಾರಿ ಮಾರ್ಗಸೂಚಿ ಅನ್ವಯದ ಡೈವರ್ಶನ್‌ಗಳಾಗಿದ್ದರೆ, ಉಳಿದವು ಕಾಮಗಾರಿಗೆ ಪೂರಕವಾಗಿ ರೂಪಿಸಿದವು. ಎಲ್ಲ ಡೈವರ್ಶನ್‌ಗಳಲ್ಲಿ ಸವಾರರು ಅಡ್ಡಾದಿಡ್ಡಿ ಸಂಚರಿಸುತ್ತಿದ್ದಾರೆ. ಪರಿಣಾಮ 10ಕ್ಕೂ ಅಧಿಕ ಅಪಘಾತ ಇಲ್ಲಿ ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರುತ್ತಾರೆ. ರವಿವಾರ ರಾತ್ರಿ ಸ್ವಿಫ್ಟ್ ಕಾರೊಂದು ಪುಲ್ಕೇರಿಯಲ್ಲಿ ಡೈವರ್ಶನ್ ಗೊಂದಲದಿಂದ ನೇರವಾಗಿ ಚಲಿಸಿದ ಪರಿಣಾಮ ಜಲ್ಲಿ ರಾಶಿಗೆ ಗುದ್ದಿ ಇಬ್ಬರು ಗಾಯಗೊಂಡ ಘಟನೆ ಸಂಭವಿಸಿದೆ. ಅಲ್ಲಲ್ಲಿ ಕಾಮಗಾರಿ ಬಾಕಿ ಇದೆ
ಈ ನಾಲ್ಕೂವರೆ ಕಿ.ಮೀ. ರಸ್ತೆಯಲ್ಲಿ ಕೆಲವು ಕಡೆ ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಬಾಕಿ ಇದೆ. ಸಂಪರ್ಕ ರಸ್ತೆಯ ಕೆಲಸಕ್ಕೆ ಅರ್ಧಕ್ಕೆ ನಿಂತಿದೆ. 5 ಕಡೆಗಳಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದ ತಕರಾರಿನಿಂದ ಕಾಮಗಾರಿ ನಿಂತಿದೆ. ಮುರತ್ತಂಗಡಿ ಬ್ಯಾಂಕ್ ಆಫ್ ಬರೋಡ ಸಮೀಪ, ಕಾಜಿಗಾರದ ಬಳಿ ರಸ್ತೆಯ ಸರ್ವಿಸ್ ಕಾಮಗಾರಿ ಅರ್ಧಕ್ಕೆ ನಿಂತಿದೆ. ಚಿಲಿಂಬಿಯಲ್ಲಿ 1. ಕಿ.ಮೀ. ಡೀಮ್ಡ್ ಅರಣ್ಯ ಸಮಸ್ಯೆಯಿಂದಾಗಿ ಕಾಮಗಾರಿ ಮುಂದುವರಿದಿಲ್ಲ. ಕಾರ್ಕಳ ಸಾಣೂರು-ಬೆಳುವಾಯಿ ಗ್ರಾ. ಪಂ. ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಉಡುಪಿ, ಮಂಗಳೂರು ಸಂಸದರು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ಒತ್ತಡ ಹೇರಿ ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಹೇಳಿದ್ದಾರೆ.
Related Articles
ಡೈವರ್ಶನ್ ನೀಡಿದ ಕಡೆಗಳಲ್ಲಿ ಸಮರ್ಪಕವಾಗಿ ಫಲಕಗಳನ್ನು ಅಳವಡಿಸಬೇಕು, ಡೈವರ್ಶನ್ ಸಂಪರ್ಕ ರಸ್ತೆಗಳಲ್ಲಿ ಅಡ್ಡಾದಿಡ್ಡಿ ಸಂಚರಿಸುವ ವಾಹನಗಳಿಗೆ ಪೊಲೀಸ್ ಇಲಾಖೆ ದಂಡ ವಿಧಿಸಬೇಕು. ಹೆದ್ದಾರಿ ಪ್ರಾಧಿಕಾರ-ಗುತ್ತಿಗೆ ಸಂಸ್ಥೆ ಕಾಮಗಾರಿ ನಡೆಯುವಾಗ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Advertisement
ಪುಲ್ಕೇರಿ ಬೈಪಾಸ್‌ನಿಂದ ಸ್ವಲ್ಪ ಮುಂದಕ್ಕೆ ಹೋಗುವ ಕಾರು ಡೈವರ್ಶನ್ ತೆಗೆದುಕೊಳ್ಳದ ಪರಿಣಾಮ ಕಾಮಗಾರಿ ರಸ್ತೆಯಲ್ಲಿ ಸಾಗಿ ಜಲ್ಲಿ ರಾಶಿಗೆ ಢಿಕ್ಕಿಯಾಗಿರುವುದು.
ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿಡೈವರ್ಶನ್ಗಳಿಂದ ಹಲವು ಅಪಘಾತಗಳು ಸಂಭವಿಸುತ್ತಿದೆ. ಸವಾರರಿಗೆ ಗೊಂದಲವಾಗುತ್ತಿದೆ. ಈಗಿರುವ ಸೂಚನಾ ಫಲಕಗಳು ಸ್ಪಷ್ಟತೆ ಹೊಂದಿಲ್ಲ. ಸರಿಯಾದ ಬೋರ್ಡ್ ಹಾಕಬೇಕು, ಸುಗಮ ಸಂಚಾರಕ್ಕೆ ಸಿಬಂದಿ ನೇಮಕ ಮಾಡಬೇಕು. ಆಕ್ಷೇಪ ಇರುವ ಕಡೆ ಸೂಕ್ತ ಪರಿಹಾರ ನೀಡುವುದು, ಸರ್ವಿಸ್ ರಸ್ತೆಯನ್ನು ಎಲ್ಲೆಡೆ ಅಚ್ಚುಕಟ್ಟಾಗಿ ರೂಪಿಸಿ ಕಾಮಗಾರಿ ವ್ಯವಸ್ಥಿತವಾಗಿ ಶೀಘ್ರ ಪೂರ್ಣಗೊಳಿಸಬೇಕು.
– ಸಾಣೂರು ನರಸಿಂಹ ಕಾಮತ್, ಕಾರ್ಕಳ-ಮಂಗಳೂರು ರಾ. ಹೆ. ಹೋರಾಟ ಸಮಿತಿ. -ಅವಿನ್ ಶೆಟ್ಟಿ