Advertisement

Baindur: ಇನ್ನೂ ಪೂರ್ಣಗೊಳ್ಳದ ಬೈಂದೂರು ಬಸ್‌ ನಿಲ್ದಾಣ!

01:12 PM Dec 06, 2024 | Team Udayavani |

ಬೈಂದೂರು: ತೆಕ್ಕಟ್ಟೆಯಿಂದ ಬೈಂದೂರುವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡುವ ವೇಳೆ ತೆರವು ಮಾಡಿದ ಬಸ್‌ ತಂಗುದಾಣಗಳನ್ನು ವ್ಯವಸ್ಥಿತವಾಗಿ ಮರು ನಿರ್ಮಾಣ ಮಾಡದೆ ಜನರು ಸಂಕಷ್ಟ ಅನುಭವಿಸುತ್ತಿರುವುದು ಒಂದು ಕಡೆಯಾದರೆ, ಬೈಂದೂರಿನಲ್ಲಿ ಸರಕಾರಿ ಬಸ್‌ ನಿಲ್ದಾಣದ ಕಾಮಗಾರಿ ಆರಂಭಗೊಂಡು ಏಳು ವರ್ಷವಾದರೂ ಇನ್ನೂ ಪೂರ್ಣಗೊಳ್ಳದೆ ಇರುವ ದುರಂತ ಇನ್ನೊಂದು ಕಡೆ!

Advertisement

ಬೈಂದೂರಿಗೊಂದು ಸುಸಜ್ಜಿತ ಸರಕಾರಿ ಬಸ್‌ ನಿಲ್ದಾಣ ಬೇಕು ಎಂಬ ಬೇಡಿಕೆ ಬಹು ಹಿಂದಿನದ್ದು. ಹಲವು ಕಡೆ ಪ್ರಸ್ತಾವನೆಯಾಗಿ, ನಿರ್ಮಾಣವೂ ಆಗಿ, ಬಳಕೆಯಾಗದೆ ಉಳಿದ ಇತಿಹಾಸವೂ ಇದಕ್ಕಿದೆ. ಇದೆಲ್ಲ ಕಳೆದು 2018ರಲ್ಲಿ ಸರಕಾರಿ ಬಸ್‌ ನಿಲ್ದಾಣ ಮತ್ತು ಡಿಪೋ ಸ್ಥಾಪನೆಗೆ ಕಾಮಗಾರಿ ಆರಂಭವಾಗಿತ್ತು. ಆದರೆ, ಈಗಲೂ ಅದು ಪೂರ್ಣಗೊಂಡಿಲ್ಲ!

2017ರಲ್ಲಿ ಬೈಂದೂರಿನಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶದಿಂದ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಜಿಲ್ಲೆಯ ಗ್ರಾಮೀಣ ಮತ್ತು ನಗರದ ಭಾಗಗಳಿಗೆ ಹೆಚ್ಚು ಬಸ್‌ ಸೇವೆಗಳನ್ನು ಒದಗಿಸಿ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಉಡುಪಿಯಲ್ಲಿ 34 ಕೋಟಿ ಅನುದಾನದ ಬಸ್‌ ನಿಲ್ದಾಣ, 6 ಕೋಟಿ ರೂಪಾಯಿ ವೆಚ್ಚದ ಡಿಪೋ ನಿರ್ಮಾಣಕ್ಕೆ ಅಡಿ ಇಡಲಾಗಿತ್ತು. ಅದರ ಜತೆಗೆ ಬೈಂದೂರಿನಲ್ಲಿ 5 ಕೋಟಿ ರೂಪಾಯಿ ವೆಚ್ಚದ ಬಸ್‌ ನಿಲ್ದಾಣ ಹಾಗೂ 6 ಕೋಟಿ ಹೆಚ್ಚುವರಿ ಡಿಪೋ ನಿರ್ಮಾಣಕ್ಕೆ ಅನುಮೋದನೆ ಪಡೆಯಲಾಗಿತ್ತು. 2018 ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌.ಉಮಾಶಂಕರ್‌ ಶಂಕುಸ್ಥಾಪನೆ ಮಾಡಿದ್ದರು.

ಎರಡನೇ ಬಾರಿ ಗುದ್ದಲಿ ಪೂಜೆ: ಬೈಂದೂರಿನ ಬಸ್‌ ನಿಲ್ದಾಣಕ್ಕೆ ಎರಡೆರಡು ಬಾರಿ ಗುದ್ದಲಿ ಪೂಜೆ ನಡೆದಿದೆ. ಅಂದಿನ ಶಾಸಕರು ಶಂಕುಸ್ಥಾಪನೆ ನಡೆಸಿದ ಬಳಿಕ ಚುನಾವಣೆ ನಡೆದು ಸರಕಾರ ಬದಲಾವಣೆಯಾದಾಗ ಆಯ್ಕೆಯಾದ ನೂತನ ಶಾಸಕರು ಮತ್ತೂಮ್ಮೆ ಗುದ್ದಲಿ ಪೂಜೆ ನಡೆಸಿದ್ದರು.

ಈ ಕಾಮಗಾರಿ ಕೂಡ ಪೂರ್ಣಗೊಳ್ಳುವ ಹಂತದಲ್ಲಿದೆ. ಇಲಾಖೆ ಮತ್ತು ಸರಕಾರ ಇನ್ನಷ್ಟೆ ಉದ್ಘಾಟನೆ ನಿಗದಿ ಮಾಡಬೇಕಿದೆ. ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡ ಕಾಮಗಾರಿ ಈ ವರ್ಷವಾದರು ಪೂರ್ಣಗೊಂಡು ಉದ್ಘಾಟನೆಯಾಗಲಿ ಎನ್ನುವುದು ಬೈಂದೂರು ಜನರ ಆಶಯವಾಗಿದೆ.

Advertisement

ಇನ್ನೂ ಬಾಕಿ ಇದೆ ಕಾಮಗಾರಿ
ಈಗಾಗಲೆ ಬಿಡುಗಡೆಯಾದ ಅನುದಾನದಲ್ಲಿ ಬಸ್‌ ನಿಲ್ದಾಣ ಕಟ್ಟಡ ಕಾಮಗಾರಿ ಮಾತ್ರ ನಡೆಸಲು ಸಾಧ್ಯವಾಗಿದೆ. ಬಹುಕೋಟಿ ಅನುದಾನದ ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದಿದೆ. ಇತರ ಮೂಲ ಸೌಕರ್ಯಕ್ಕೆ ಹೆಚ್ಚುವರಿ ಅನುದಾನ ಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿತ್ತು. ಸರಕಾರ 2.20 ಕೋಟಿ ರೂ. ಹೆಚ್ಚುವರಿ ಅನುದಾನ ಮಂಜೂರು ಮಾಡಿದ್ದರಿಂದ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾಂಕ್ರೀಟ್‌ ರಸ್ತೆ ನೆಲಹಾಸು, ಮೇಲ್ಛಾವಣಿ ಕಾಮಗಾರಿ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಕಾರಣ ಕೋಟ್ಯಾಂತರ ಅನುದಾನ ಕಾಮಗಾರಿ ಪೂರ್ಣಗೊಂಡು ವ್ಯರ್ಥವಾಗುವ ಬದಲು ಇಲಾಖೆ, ಜನಪ್ರತಿನಿಧಿಗಳ ವಿಶ್ವಾಸ ಪಡೆದು ಶೀಘ್ರ ಲೋಕಾರ್ಪಣೆಗೆ ಸಿದ್ದತೆ ನಡೆಸಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬಸ್‌ ನಿಲ್ದಾಣ ಉದ್ಘಾಟನೆಯಾದರೆ ಬೈಂದೂರಿನ ಬೆಳವಣಿಗೆಗೆ ಅನುಕೂಲ
ನೂತನ ಸರಕಾರಿ ಬಸ್‌ ನಿಲ್ದಾಣ ಉದ್ಘಾಟನೆಯಾದರೆ ಬೈಂದೂರಿನ ಅಭಿವೃದ್ಧಿಗೆ ಸಾಕಷ್ಟು ಸಹಕಾರಿಯಾಗಲಿದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಸಮರ್ಪಕ ಬಸ್‌ ಸೇವೆ ದೊರೆಯುವ ಜತೆಗೆ ದಕ್ಷಿಣ ಭಾರತದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಕಾರಣ ತಾಲೂಕು ಕೇಂದ್ರದ ಸೌಂದರ್ಯ ಹೆಚ್ಚಲಿದೆ. ಹೀಗಾಗಿ ಸುಸಜ್ಜಿತ ಬಸ್‌ ನಿಲ್ದಾಣ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಅನುಕೂಲ ಮಾಡಿಕೊಂಡು ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ.

ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣ
ಬೈಂದೂರು ಬಸ್‌ ನಿಲ್ದಾಣ ಕಾಮಗಾರಿ ಸಾಕಷ್ಟು ವಿಳಂಬವಾಗಿರುವುದು ನಿಜ. ಕೆಲವು ತಾಂತ್ರಕ ಅಂಶಗಳು ಇದಕ್ಕೆ ಕಾರಣವಾಗಿದೆ. ಇಲಾಖೆಯ ವಿವಿಧ ಹಂತದ ಅನುಮೋದನೆ ಬಳಿಕ ಅನುದಾನ ದೊರೆತಿದೆ. ಈ ತಿಂಗಳ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಅತ್ಯುತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ.
– ರವೀಂದ್ರ, ಎಂಜಿನಿಯರ್‌

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next