Advertisement

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

04:11 AM Dec 18, 2024 | Team Udayavani |

ಬೆಳಗಾವಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂ. ರಾಜ್‌ ವಿಶ್ವವಿದ್ಯಾನಿಲಯದ ಕುಲಾಧಿಪತಿ ಹುದ್ದೆಯಿಂದ ರಾಜ್ಯಪಾಲರಿಗೆ ಕೊಕ್‌ ನೀಡುವ ಮಸೂದೆಯು ವಿಧಾನ ಸಭೆ ಯಲ್ಲಿ ತೀವ್ರ ಗದ್ದಲ ಸೃಷ್ಟಿಸಿತು. ಬಿಜೆಪಿ ಸಭಾತ್ಯಾಗದ ಮಧ್ಯೆ ಮಸೂದೆಗೆ ಅಂಗೀಕಾರ ಲಭಿಸಿದೆ. ಈ ಸಂದರ್ಭ ದಲ್ಲಿ ರಾಜಭವನದ ದುರ್ಬಳಕೆ ಬಗ್ಗೆ ಆಡಳಿತ- ವಿಪಕ್ಷಗಳ ಮಧ್ಯೆ ಬಿರುಸಿನ ವಾಗ್ವಾದ ನಡೆದಿದೆ.

Advertisement

ಸಚಿವ ಪ್ರಿಯಾಂಕ್‌ ಖರ್ಗೆ ಮಸೂದೆ ಯನ್ನು ಮಂಡಿಸುತ್ತಿದ್ದಂತೆ ಬಿಜೆಪಿಯ ಶಾಸಕ ಡಾ| ಅಶ್ವತ್ಥನಾರಾಯಣ ಅದಕ್ಕೆ ತೀವ್ರ ಆಕ್ಷೇಪ
ವ್ಯಕ್ತಪಡಿಸಿದರು. ರಾಜ್ಯಪಾಲರ ವಿರುದ್ಧ ಜಿದ್ದಿಗೆ ಬಿದ್ದು, ಅವರ ಅಧಿಕಾರವನ್ನು ಮೊಟಕುಗೊಳಿಸುವ ಸಾಹಸಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಈ ಮಸೂದೆ ಹಗೆತನ ಮತ್ತು ದ್ವೇಷಕ್ಕೆ ಮಾತ್ರ ಸೀಮಿತವಾಗಿದೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹಿಂದಕ್ಕೆ ಒಯ್ಯುವ ಪ್ರಯತ್ನ ಎಂದು ಟೀಕಿಸಿದರು.

ರಾಜ್ಯಪಾಲರ ಬದಲು ಮುಖ್ಯಮಂತ್ರಿಯನ್ನು ಕುಲಾಧಿಪತಿ ಮಾಡುವುದರ ವಿನಾ ಈ ಮಸೂದೆಯಲ್ಲಿ ಯಾವುದೇ ಸುಧಾರಣ ಕ್ರಮಗಳಿಲ್ಲ. ಕುಲಪತಿಯ ನೇಮಕಾವಧಿ ವಿಚಾರವೇ ಸ್ಪಷ್ಟವಾಗಿಲ್ಲ. ತಾನು ಹೇಳಿದವರು ಮಾತ್ರ ಕುಲಪತಿಯಾಗಬೇಕೆನ್ನುವ ಸಣ್ಣತನ ದಿಂದ ಆಚೆ ಬನ್ನಿ ಎಂದು ವ್ಯಂಗ್ಯವಾಡಿದರು. ಈ ಮಾತಿಗೆ ಹಿರಿಯ ಶಾಸಕರಾದ ಆರಗ ಜ್ಞಾನೇಂದ್ರ, ಅರವಿಂದ ಬೆಲ್ಲದ್‌, ಚನ್ನಬಸಪ್ಪ, ಸಿಮೆಂಟ್‌ ಮಂಜುನಾಥ್‌ ಸಹಮತ ವ್ಯಕ್ತಪಡಿಸಿದರು.

ರಾಜ್ಯಪಾಲರಿಗೆ ಸಮಯವಿಲ್ಲ
ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್‌ ಶಾಸಕ ಶರತ್‌ ಬಚ್ಚೇಗೌಡ, ರಾಜ್ಯಪಾಲರು ಸಂವಿಧಾನಾತ್ಮಕ ಹುದ್ದೆ ಅಲಂಕರಿಸಿದ್ದು, ಹೆಚ್ಚಿನ ಸಂದರ್ಭದಲ್ಲಿ ಸಮಯಾವಕಾಶ ಹೊಂದಿರುವುದಿಲ್ಲ. ಹೀಗಾಗಿ ಕುಲಾಧಿಪತಿ ಹುದ್ದೆಯನ್ನು ಮುಖ್ಯಮಂತ್ರಿ ಅಲಂಕರಿಸಿದರೆ ಆಡಳಿತಾತ್ಮಕ ಪ್ರಕ್ರಿಯೆ ಸುಲಭವಾಗುತ್ತದೆ. ಗುಜರಾತ್‌ನಲ್ಲಿ ಎಲ್ಲ ವಿ.ವಿ.ಗಳ ಕುಲಪತಿ ಹುದ್ದೆಯನ್ನು ಮುಖ್ಯಮಂತ್ರಿಗೆ ನೀಡಲಾಗಿದೆ.

ಆಯಾ ರಾಜ್ಯದ ಜನರ ನಾಡಿಮಿಡಿತ ಹಾಗೂ ಶೈಕ್ಷಣಿಕ ಮನಃಸ್ಥಿತಿ ಮುಖ್ಯಮಂತ್ರಿಗೆ ಮಾತ್ರ ಅರಿವಿರಲು ಸಾಧ್ಯ. ಹೀಗಾಗಿ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿ.ವಿ.ಗಳ ಕುಲಾಧಿಪತಿ ಹುದ್ದೆಗೆ ಮುಖ್ಯಮಂತ್ರಿಯನ್ನೇ ನೇಮಕ ಮಾಡಬೇಕು ಎಂದು ವಾದಿಸಿದರು. ಇದಕ್ಕೆ ತಿರುಗೇಟು ನೀಡಿದ ಚನ್ನಬಸಪ್ಪ, ರಾಜ್ಯಪಾಲರಿಗೆ ಸಮಯವಿಲ್ಲ ಎಂಬ ಸ್ಪಷ್ಟನೆಯನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಹಾಗಾದರೆ ಮುಖ್ಯಮಂತ್ರಿಗಳಿಗೆ ಬೇಕಾದಷ್ಟು ಪುರಸೊತ್ತು ಇದೆಯೇ ಎಂದು ವ್ಯಂಗ್ಯವಾಡಿದರು.

Advertisement

ರಾಜಭವನದ ಬಗ್ಗೆ ಚರ್ಚೆ
ಈ ಹಂತದಲ್ಲಿ ಚರ್ಚೆ ರಾಜಭವನದ ದುರ್ಬಳಕೆಯ ಕಡೆಗೆ ಹೊರಳಿತು. ಈ ದೇಶದಲ್ಲಿ ಯಾವ ರಾಜ್ಯದ ರಾಜ್ಯಪಾಲರು ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾರೆ? ಎಲ್ಲರೂ ಸರಿಯಾಗಿದ್ದರೆ ಈ ಮಸೂದೆ ತರುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ ಎಂದು ಮಾಗಡಿ ಬಾಲಕೃಷ್ಣ ತಿರುಗೇಟು ಕೊಟ್ಟರೆ, ಈ ಹಿಂದೆ ಹಂಸರಾಜ್‌ ಭಾರದ್ವಾಜ್‌ ಅವರು ರಾಜಭವನವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಯತ್ನಾಳ್‌ ಕಾಲೆಳೆದರು.

ಹೆಸರು ಬದಲಾವಣೆ
ಮಸೂದೆಯ ಪರವಾಗಿ ಮಾತನಾಡಿದ ಶಾಸಕ ಬಿ.ಆರ್‌. ಪಾಟೀಲ್‌, ಈ ಮಸೂದೆಯ ಉದ್ದೇಶ ಸರಿಯಾಗಿದೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವದ ಸ್ಮರಣಾರ್ಥವಾಗಿ ಈ ವಿಶ್ವವಿದ್ಯಾನಿಲಯಕ್ಕೆ ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ವಿ.ವಿ. ಎಂದು ಹೆಸರಿಡು
ವಂತೆ ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳ
ಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯಪಾಲರು ಕುಲಾಧಿಪತಿ ಯಾಗಿರ ಬಾರದು ಎಂದೂ ಯಾವ ಕಾಯಿದೆಯಲ್ಲೂ ಹೇಳಿಲ್ಲ. ಎಲ್ಲ ಬಾಲ್‌ಗ‌ೂ ಸಿಕ್ಸ್‌ ಹೊಡೆಯಲು ಹೋದರೆ ವಿಕೆಟ್‌ ಉದುರಿ ಹೋಗುತ್ತದೆ. – ಡಾ.ಅಶ್ವತ್ಥನಾರಾಯಣ, ಶಾಸಕ

ರಾಜ್ಯಪಾಲರು ನಮ್ಮ ಕೆಲಸಕ್ಕೆ ಅಡ್ಡಿ ಮಾಡುತ್ತಿಲ್ಲ. ರಾಜ್ಯಪಾಲರೇ ವಿ.ವಿ. ಕುಲಾಧಿಪತಿಗಳಾಗಿರಬೇಕೆಂದು ಯಾವ ಕಾಯಿದೆಯಲ್ಲೂ ಕಡ್ಡಾಯವಾಗಿ ಹೇಳಿಲ್ಲ. ಬಿಜೆಪಿಯವರ ಬೌಲಿಂಗ್‌ಗೆ ಸಿಕ್ಸರ್‌ ಹೊಡೆದರೆ ಮಾತ್ರ ಮಜಾ ಬರುತ್ತದೆ. ಹೀಗಾಗಿ ಮಾತಿಗೆ ಮಾತಿನ ಏಟು ನೀಡುತ್ತಿದ್ದೇನೆ.
 - ಪ್ರಿಯಾಂಕ್‌ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

ಮಸೂದೆಯಲ್ಲಿ ಏನಿದೆ?
– ಇನ್ನು ಮುಂದೆ ಸಿಎಂ ಪಂಚಾಯತ್‌ ರಾಜ್‌ ವಿ.ವಿ. ಕುಲಾಧಿಪತಿ.

– ಶೋಧನ ಸಮಿತಿ ಶಿಫಾರಸು ಮಾಡಿದ ಮೂವರು ವ್ಯಕ್ತಿಗಳ ಪೈಕಿ ಒಬ್ಬರನ್ನು ಕುಲಪತಿಯಾಗಿ ನೇಮಿಸುವ ಅಧಿಕಾರ ಇನ್ನು ಮುಂದೆ ಮುಖ್ಯಮಂತ್ರಿಗೆ.

– ಕುಲಪತಿ ನೇಮಕಕ್ಕೆ ಅರ್ಹತೆ ಆಧಾರದ ಮೇಲೆ ಶೋಧನ ಸಮಿತಿಯನ್ನು ಸರಕಾರವೇ ರಚಿಸುತ್ತದೆ. ಈ ವಿಶ್ವವಿದ್ಯಾನಿಲಯದಲ್ಲಿ ಇನ್ನು ಮುಂದೆ 15 ಕ್ಷೇತ್ರೀಯ ವಿಚಾರಗಳು ಒಳಗೊಂಡಿರುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next