ಹುಕ್ಕೇರಿ: ಗ್ರಾಮಗಳ ಕುಂದು ಕೊರತೆ ಸಭೆಯನ್ನು ಕಾಟಾಚಾರಕ್ಕೆ ಮಾಡದೇ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದು, ಪರಿಹರಿಸಲು ಅಧಿಕಾರಿಗಳು ಕಾರ್ಯನಿರತರಾಗಬೇಕೆಂದು ತಾಲೂಕಿನ ಇಂಗಳಿ , ಹೂಸೂರ, ಸುಲ್ತಾನಪೂರ ಗ್ರಾಮಸ್ಥರು ಆಗ್ರಹಿಸಿದರು.
ತಾಲೂಕಿನ ಹೂಸೂರ ಗ್ರಾಮದಲ್ಲಿ ಜರುಗಿದ ಕುಂದು ಕೊರತೆ ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಕಳೆದೆರಡು ವರ್ಷಗಳಿಂದ ನೆರೆಹಾವಳಿಯಿಂದ ಮನೆ, ಜಾನುವಾರು ಜಲಾವೃತಗೊಂಡು ಲಕ್ಷಾಂತರ ರೂ. ಹಾನಿಯಾಗಿದೆ. ಜನ ಕಷ್ಟ ಅನುಭವಿಸುತ್ತಿದ್ದರೂ ಕೂಡ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ವರ್ಷ ಮಳೆಗಾಲ ಪ್ರಾರಂಭದ ಮುಂಚೆ ನಮಗೆ ಶಾಶ್ವತವಾಗಿ ಮನೆ ಕಟ್ಟಿಕೊಳ್ಳಲು ಸ್ಥಳಾವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಕಳೆದ ಎರಡು ವರ್ಷದ ಹಿಂದೆ ಸುಲ್ತಾನಪೂರ ಹಾಗೂ ಇಂಗಳಿ ನಡುವೆ ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರೀಜ್ ಕಂ ಬಾಂದಾರದಿಂದಾಗಿ ಇಂಗಳಿ ಹಾಗೂ ಹೊಸೂರ ಗ್ರಾಮದಲ್ಲಿ ನೀರು ನುಗ್ಗುತ್ತಿದೆ. ಅದನ್ನು ತೆರವುಗೊಳಿಸಿ ದೊಡ್ಡದಾಗಿ ಬ್ರಿಜ್ ನಿರ್ಮಿಸಿ ಗ್ರಾಮದಲ್ಲಿ ನೀರು ನುಗ್ಗದಂತೆ ಮಾಡಬೇಕು. ಹೊಸೂರದಿಂದ ಹಿಡಕಲ್ ಡ್ಯಾಂ ಗೆ ಹೋಗುವ ರಸ್ತೆ ಹೆದಗೆಟ್ಟು ಹಲವಾರು ವರ್ಷಗಳು ಕಳೆದಿವೆ ಈ ರಸ್ತೆಯನ್ನು ಮಾಡಬೇಕೆಂದು ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನಮ್ಮ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳುತ್ತಾರೆ.
ಈ ರಸ್ತೆ ಯಾರ ವ್ಯಾಪ್ತಿಗೆ ಒಳಪಡುತ್ತದೆ ಎಂಬುದೇ ತಿಳಿಯದಂತಾಗಿದೆ. ತಹಶೀಲ್ದಾರ್ ಈ ಕುರಿತು ವಿಚಾರಿಸಿ, ರಸ್ತೆ ಮಾಡಬೇಕೆಂದು ಹೇಳಿದರು. ತಹಶೀಲ್ದಾರ ಡಿ.ಎಚ್ ಹೂಗಾರ ಸಾರ್ವಜನಿಕರ ಸಮಸ್ಯೆ ಅರಿತು, ಕೆಲವಕ್ಕೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಮನೆಗೆ ಶಾಶ್ವತ ಸ್ಥಳ ಹಾಗೂ ಬ್ರಿಜ್ ನಿರ್ಮಾಣ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಲಗಮಣ್ಣಾ ಮಾಲಾಡಿ, ಉಪಾಧ್ಯಕ್ಷ ತನುಶ್ರೀ ನಾಯಿಕ, ಜಿ.ಪಂ ಮಾಜಿ ಸದಸ್ಯ ಭೀಮಣ್ಣಾ ರಾಮಗೋನಟ್ಟಿ, ಪಿಡಿಒ ಎಮ್ ಗುಡಸಿ, ಬಸವರಾಜ ಕಟ್ಟಿ ಮತ್ತು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.