Advertisement
ಆ ಕ್ರಾಸ್‌ನಲ್ಲಿ ಅಡ್ಡಾಡುವವರಿಗೆ ಖಂಡಿತವಾಗಿಯೂ ತಿಳಿದಿರಬಹುದಾದ ಹೆಸರು ಸಾಯಿ ಶಕ್ತಿ. ಉತ್ತರ ಭಾರತ ಶೈಲಿಯ ಈ ಸಸ್ಯಾಹಾರಿ ಹೋಟೆಲ್, ಸಾಧಾರಣವಾಗಿ ಎಲ್ಲ ಸಮಯದಲ್ಲಿಯೂ ಗ್ರಾಹಕರಿಂದ ತುಂಬಿರುತ್ತದೆ. ಜನರಿಗೆ ಇದು ಅಚ್ಚುಮೆಚ್ಚಿನದಾಗಲು ಕಾರಣ, ತಮ್ಮದೇ ಗುಂಪಿನ ಉತ್ತರ ಭಾರತದ ಗೆಳೆಯನ ಮನೆಯಲ್ಲಿನ ಹಿತವಾದ ಊಟ ಉಂಡಂತೆ ಅನಿಸುವ ಇಲ್ಲಿನ ಆಹಾರ. ಹೊಟ್ಟೆಗೆ ಖಂಡಿತಾ ಭಾರವಲ್ಲ. ಜೇಬಿಗಂತೂ ಮೊದಲೇ ಅಲ್ಲ!
ಅತ್ಯಂತ ಮೆದುವಾದ ರೋಟಿ, ಚಪಾತಿ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲೊಂದು. ಇಲ್ಲಿ ಪ್ರೋಟಿನ್ ಚಪಾತಿ, ಪ್ರೋಟಿನ್ ಪರಾಠ ಕೂಡಾ ಲಭ್ಯ. ಗೋಧಿ ಹಿಟ್ಟಿನೊಂದಿಗೆ ಇತರ ಕಾಳುಗಳ ಹಿಟ್ಟುಗಳನ್ನು ಸೇರಿಸಿ ಮಾಡುವ ಪ್ರೋಟಿನ್ ಚಪಾತಿ ತುಂಬಾ ಮೃದುವಷ್ಟೇ ಅಲ್ಲ, ರುಚಿಯಲ್ಲೂ ಒಂದು ಕೈ ಮೇಲೇ. ಇವಲ್ಲದೆ ಬೆಂಡೆಕಾಯಿ ಸೀಳಿ, ಉದ್ದುದ್ದಕ್ಕೆ ಹೆಚ್ಚಿದ ಈರುಳ್ಳಿ, ಹಸಿಮೆಣಸು, ಖಾರದೊಂದಿಗೆ ಹುರಿದು ತಯಾರಿಸಲಾಗುವ ಭಿಂಡಿ ಚಿಲ್ಲಿ ಕೂಡಾ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದೆ. ಅನ್ನದ ಐಟಂಗಳನ್ನು ಇಷ್ಟಪಡುವವರಿಗಾಗಿ, ಅತ್ಯಂತ ಹದವಾದ ಪುದೀನ ಸೊಪ್ಪಿನ ಘಮದೊಂದಿಗೆ ತಯಾರಾಗುವ ಪುದೀನ ರೈಸ್ ಇದೆ. ಬೇರೆ ಬೇರೆ ರೀತಿಯ ಮಿಲ್ಕ್ ಶೇಕ್‌ಗಳು ಕೂಡಾ ಫೇಮಸ್ ಆಗಿರುವ ಇಲ್ಲಿ ರೋಸ್ ಮಿಲ್ಕ್ಗೆ ಬೇಡಿಕೆ ಜಾಸ್ತಿ. ಒಟ್ಟಾರೆಯಾಗಿ ಹೇಳುವುದಾದರೆ, ಸರಳವಾದ ವ್ಯವಸ್ಥೆಗಳಲ್ಲೇ ರುಚಿಯಾದ ಆಹಾರ ಉಣಬಡಿಸಿ ಜನಪ್ರಿಯತೆ ಪಡೆದಿರುವ ಹೋಟೆಲ್‌ಗಳಲ್ಲಿ ಈ ಸಾಯಿ ಶಕ್ತಿಯೂ ಒಂದು. ದಶಕಗಳಿಂದಲೂ ಹಸಿದ ಹೊಟ್ಟೆಗೆ ಹಿತವಾದ ಆಹಾರ ಒದಗಿಸುತ್ತಿರುವುದಷ್ಟೇ ಅಲ್ಲದೆ, ದಿನೇ ದಿನೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬರುತ್ತಿರುವುದು ವಿಶೇಷ.
Related Articles
ಸಾಯಿ ಶಕ್ತಿಯ ಹಿಂದಿನ ಶಕ್ತಿ ಯಾರೆಂದು ಹುಡುಕುತ್ತಾ ಹೋದಾಗ ಸಿಕ್ಕವರು ವಿಜಯ್ ಕುಮಾರ್ ಮಿಶ್ರಾ. ಕಳೆದ ನಲವತ್ತು ವರ್ಷಗಳಿಂದ ಹೋಟೆಲ್, ಕ್ಯಾಟರಿಂಗ್ ಹಾಗೂ ಆಹಾರ ಉದ್ಯಮದಲ್ಲಿ ತೊಡಗಿಕೊಂಡಿರುವ ಇವರು ಸ್ವತಃ ಪಾಕ ಪ್ರವೀಣರೂ ಹೌದು. ಪಾಕಶಾಲೆಯಲ್ಲಿ ಬೇರೆ ಬೇರೆ ರೀತಿಯ ಪ್ರಯೋಗ ಪರೀಕ್ಷೆಗಳನ್ನು ನಡೆಸುವುದು ಇವರ ಹವ್ಯಾಸ. ಯೋಗಾಭ್ಯಾಸಿಯಾಗಿರುವ ಇವರು, ಶುಚಿ- ರುಚಿಯಾದ ಆಹಾರ ಮಾತ್ರವಲ್ಲ, ಗ್ರಾಹಕನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಪೌಷ್ಟಿಕಾಂಶಭರಿತ ಅಡುಗೆಗಳನ್ನು ತಯಾರಿಸುವುದರತ್ತವೂ ಕಾಳಜಿ ವಹಿಸುತ್ತಾರೆ.
Advertisement
ರುಚಿಯ ಗುಟ್ಟುಅಡುಗೆಮನೆಯನ್ನು ಹೊಕ್ಕು ನೋಡಿದಾಗ, ಅಲ್ಲಿನ ಆಹಾರದ ಗುಟ್ಟು -ಉತ್ತಮ ಗುಣಮಟ್ಟದ ತರಕಾರಿಗಳು, ಒಳ್ಳೆಯ ಎಣ್ಣೆ, ಕೃತಕ ಬಣ್ಣ ಸೇರಿಸದ, ಕಲಬೆರಕೆಯಿಲ್ಲದ, ಸದಾ ಶುಚಿಯಾಗಿರುವ ಅಡುಗೆ ಮನೆ ಎಂಬುದು ಮನದಟ್ಟಾಗುತ್ತದೆ. ಗ್ರಾಹಕನ ಆರೋಗ್ಯದ ಜೊತೆ ಚೆಲ್ಲಾಟವಾಡುವ ಪ್ರವೃತ್ತಿ ತಮ್ಮ ಹೋಟೆಲ್‌ನಲ್ಲಿ ಯಾವತ್ತಿಗೂ ಸಲ್ಲುವುದಿಲ್ಲ ಎನ್ನುತ್ತಾರೆ ವಿಜಯ್ ಕುಮಾರ್. ಆಹಾರ- ಆರೋಗ್ಯ
ಆಹಾರದ ಗುಣಮಟ್ಟ ಮಾತ್ರವಲ್ಲ, ಅಪ್ಪಟ ಮನೆ ಅಡುಗೆಯ ಸ್ವಾದ, ಸತ್ವಯುತ ಆಹಾರ ತಯಾರಿಕೆ ಗ್ರಾಹಕರ ಪ್ರೀತಿ ಗಳಿಸುವಲ್ಲಿ ಅಪಾರ ಕೊಡುಗೆಯನ್ನಿತ್ತಿದೆ. ಸಾಧಾರಣ ಪಂಜಾಬಿ ಮನೆಯೊಂದರಲ್ಲಿ ತಯಾರಿಸುವ ರಾಜ್ಮಾ, ದಾಲ… ಇನ್ನಿತರ ಅಡುಗೆಗಳು ಹೇಗಿರುತ್ತವೋ, ಹಾಗೆಯೇ ತಯಾರಿಸಿ ಗ್ರಾಹಕರಿಗೆ ಬಡಿಸುವುದೇ ಇಲ್ಲಿ ಸ್ಪೆಷಲ್ ಅಡುಗೆಗಳೆಂದು ಕರೆಯಲ್ಪಡುತ್ತವೆ. ಮೂಲತಃ ನಾರ್ಥ್ ಇಂಡಿಯನ್ ಅಡುಗೆಗೆ ಗೋಡಂಬಿ ಅರೆದು ಬೆರೆಸುವ ಮಸಾಲ ಬಳಸುವುದಿಲ್ಲ.
ನೀವೂ ಇಲ್ಲಿಗೆ ಭೇಟಿ ಕೊಟ್ಟಲ್ಲಿ, ಭಿಂಡಿ ಚಿಲ್ಲಿ, ಪುದೀನ ರೈಸ್ ಜೊತೆ ಪ್ರೋಟೀನ್ ಚಪಾತಿ, ರಾಜ್ಮಾ, ಗ್ರೀನ್ ಪೀಸ್ ಮಸಾಲ ಹಾಗೂ ದಾಲ್ ಸವಿಯಲು ಮರೆಯದಿರಿ. “ಸಾಧಾರಣವಾಗಿ ಮದುವೆಯಾದ ಬಳಿಕ ಹುಡುಗರ ಹೊರಗಿನ ಊಟಕ್ಕೆ ಕಡಿವಾಣ ಬೀಳುತ್ತದೆಯೆಂದು ಎಲ್ಲರೂ ಹೇಳುತ್ತಾರೆ. ಆದರೆ ನಮ್ಮಲ್ಲಿ ಬಂದು ಊಟ ಮಾಡುತ್ತಿದ್ದ ಬ್ಯಾಚುಲರ್ ಹುಡುಗರು, ಮದುವೆಯಾದ ಬಳಿಕ ತಮ್ಮ ಪತ್ನಿಯನ್ನೂ ಇಲ್ಲಿಗೇ ಊಟಕ್ಕೆ ಕರೆ ತರುತ್ತಾರೆ ಎಂಬುದೇ ನಮ್ಮ ಹೋಟೆಲ್‌ನ ವಿಶೇಷ’
-ವಿಜಯ್ ಕುಮಾರ್ ಮಿಶ್ರಾ “ನಾನು ಈ ಹೋಟೆಲ್‌ನ ಖಾಯಂ ಗ್ರಾಹಕ. 2006ರಿಂದಲೂ ವಾರಕ್ಕೊಮ್ಮೆಯಾದರೂ ಇಲ್ಲಿಗೆ ಕುಟುಂಬ ಸಮೇತ ಊಟಕ್ಕೆ ಬರುತ್ತೇನೆ. ಇದುವರೆಗೂ ಇಲ್ಲಿನ ಊಟದ ರುಚಿಯಲ್ಲಿ ಯಾವುದೇ ಏರುಪೇರಾಗಿಲ್ಲ. ಹೆಂಡತಿ-ಮಕ್ಕಳು ಸಾಯಿಶಕ್ತಿಯ ಊಟವನ್ನು ಬಹಳವೇ ಮೆಚ್ಚುತ್ತಾರೆ. ಬರೀ ರುಚಿಯಷ್ಟೇ ಅಲ್ಲ, ತುಂಬಾ ಕಡಿಮೆ ದರದಲ್ಲಿ ವೇಗದ ಸೇವೆಯನ್ನು ಒದಗಿಸುವುದು ಇಲ್ಲಿನ ವಿಶೇಷ’.
-ಜಿ. ಕುಮಾರ್, ಗ್ರಾಹಕ ಎಲ್ಲಿ?
ಸಾಯಿ ಶಕ್ತಿ ವೆಜಿಟೇರಿಯನ್
56/1, 8ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ,
ಮಲ್ಲೇಶ್ವರಂ -ಶ್ರುತಿ ಶರ್ಮಾ, ಬೆಂಗಳೂರು