Advertisement

Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿ

01:05 AM Dec 28, 2024 | Team Udayavani |

ಬೆಂಗಳೂರು: ನೋಂದಣಿಯೇತರ ಒಡಂಬಡಿಕೆಗಳಿಗಾಗಿ ಬಳಸುವ ಸ್ಟ್ಯಾಂಪ್ ಪೇಪರ್‌ಗಳ ನಕಲಿ ಹಾವಳಿ ಹೆಚ್ಚುತ್ತಿರುವುದನ್ನು ಪತ್ತೆ ಹಚ್ಚಿರುವ ಕಂದಾಯ ಇಲಾಖೆಯು ಎ. 1ರಿಂದ ಡಿಜಿಟಲ್‌ ಪಾವತಿ ಪದ್ಧತಿ ಜಾರಿಗೆ ನಿರ್ಧರಿಸಿದ್ದು, ಸಬ್‌ ರಿಜಿಸ್ಟ್ರಾರ್‌ಗಳ ವಿಶೇಷ ಅಧಿಕಾರವನ್ನು ಮೊಟಕುಗೊಳಿಸಲು ಕಾನೂನು ತಿದ್ದುಪಡಿಗೆ ನಿರ್ಧರಿಸಿದೆ.

Advertisement

ಸುಮಾರು 54 ಬಗೆಯ ನೋಂದಣಿಯೇತರ ಒಡಂಬಡಿಕೆ ಗಳಿಗಾಗಿ ಸ್ಟಾಂಪ್‌ ಪೇಪರ್‌ಗಳು ಬಳಕೆಯಾಗುತ್ತವೆ. ಮನೆ, ವಾಣಿಜ್ಯ ಮಳಿಗೆ ಒಪ್ಪಂದ ಪತ್ರ, ಸಾಲ, ಟೆಂಡರ್‌, ಸಾಮಗ್ರಿ ಸರಬರಾಜು ಸಹಿತ ಅನೇಕ ವಿಧದ ದಸ್ತಾವೇಜುಗಳು, ಎಸ್ಕಾಂಗಳಿಂದ ಗೃಹಬಳಕೆ ಹಾಗೂ ವಾಣಿಜ್ಯ ವಿದ್ಯುತ್‌ ಸಂಪರ್ಕ ಸೇರಿ ಸರಕಾರದ ಜತೆಗೆ ನಡೆಸುವ ಎಲ್ಲ ವಿಧದ ಒಡಂಬಡಿಕೆ ಸಂದರ್ಭದಲ್ಲಿ ಸ್ಟಾಂಪ್‌ ಪೇಪರ್‌ ಅಗತ್ಯವಾಗಿ ಬೇಕಾಗುತ್ತದೆ. ಆದರೆ “ತೆಲಗಿ ಛಾಪಾ ಕಾಗದ ಹಗರಣ’ ಮಾದರಿಯಲ್ಲಿ ಒಂದು ದಶಕದಿಂದ ಸ್ಟ್ಯಾಂಪ್ ಪೇಪರ್‌ಗಳ ಕಲರ್‌ ಝೆರಾಕ್ಸ್‌ ತೆಗೆದು ಅದಕ್ಕೆ ಸಬ್‌ ರಿಜಿಸ್ಟ್ರಾರ್‌ಗಳ ಸೀಲು-ಸಹಿ ಹಾಕಿ ಸರಕಾರದ ಆದಾಯಕ್ಕೆ ದೋಖಾ ಮಾಡುತ್ತಿರುವುದನ್ನು ಕಂದಾಯ ಇಲಾಖೆ ಪತ್ತೆ ಹಚ್ಚಿದೆ.

ಇದರಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು 3ರಿಂದ 4 ಸಾವಿರ ಕೋಟಿ ರೂ.ಗೂ ಮೇಲ್ಪಟ್ಟು ವಾರ್ಷಿಕ ಆದಾಯ ನಷ್ಟವಾಗುತ್ತಿದೆ ಎಂದು ಆಡಿಟ್‌ ಸಂದರ್ಭದಲ್ಲಿ ಅಂದಾಜಿಸಲಾಗಿದ್ದು, ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತಂದು ಚಲನ್‌ ನೀಡುವ ಮೂಲಕ ಸ್ಟ್ಯಾಂಪ್ ಪೇಪರ್‌ ದುರ್ಬಳಕೆ ತಡೆಯುವ ಬಗ್ಗೆ ಕಂದಾಯ ಇಲಾಖೆ ನಿರ್ಧ ರಿಸಿದೆ. ಸಚಿವ ಕೃಷ್ಣ ಬೈರೇಗೌಡ ಅವರೇ ಖುದ್ದಾಗಿ ಈ ವ್ಯವಸ್ಥೆ ಜಾರಿ ಬಗ್ಗೆ ಚಿಂತನೆ ನಡೆಸಿದ್ದು, ಎ. 1ರಿಂದ ಅನುಷ್ಠಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದರಿಂದ ವಾರ್ಷಿಕ 3ರಿಂದ 4 ಸಾವಿರ ಕೋಟಿ ರೂ. ಆದಾಯ ಹೆಚ್ಚಿಸಬಹುದೆಂಬುದು ಒಂದು ಅಂದಾಜು. ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಮೂಗಿನ ಕೆಳಗೆ 2013ರಿಂದಲೂ ಈ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಸರಕಾರದ ಕೊನೆಯ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಆರ್‌. ಅಶೋಕ ಕೂಡಾ ಈ ಅವ್ಯವಸ್ಥೆಯ ನಿಯಂತ್ರಣಕ್ಕೆ ಮುಂದಾಗಿದ್ದರು. ಆದರೆ ಸರಕಾರದ ಕೊನೆಯ ಅವಧಿಯಲ್ಲಿ ಗಮನಕ್ಕೆ ಬಂದಿದ್ದರಿಂದ ಅಲ್ಲಿಗೇ ನಿಂತಿತ್ತು.

ಆದರೆ ಕೃಷ್ಣ ಬೈರೇಗೌಡ ಕಂದಾಯ ಸಚಿವರಾದ ಬಳಿಕ ಮತ್ತೆ ಈ ವಿಚಾರ ಮುನ್ನೆಲೆಗೆ ಬಂದಿತ್ತು. ಕಾಮಗಾರಿಯ ಸ್ವರೂಪಕ್ಕೆ ತಕ್ಕಂತೆ ಸ್ಟಾಂಪ್‌ ಪೇಪರ್‌ ಖರೀದಿ ಮಾಡಬೇಕಾಗುತ್ತದೆ. ಆದರೆ ಹತ್ತಾರು ಚಲನ್‌ಗಳಲ್ಲಿ ಒಂದೇ ಸ್ಟ್ಯಾಂಪ್ ಪೇಪರ್‌  ನಂಬರ್‌ ಬಳಕೆ ಇದೆ. ವಿಶೇಷವೆಂದರೆ ಇದಕ್ಕೆ ಕಡಿವಾಣ ಹಾಕಬೇಕಿದ್ದ

Advertisement

ಉಪನೋಂದಣಾಧಿಕಾರಿಗಳು ತಮ್ಮ ಸೀಲು-ಸಹಿಯನ್ನು ಈ ಪತ್ರಕ್ಕೆ ಹಾಕಿ ಸರಕಾರದ ಆದಾಯದ ಸೋರಿಕೆಯಲ್ಲಿ ಕೈ ಜೋಡಿಸಿದ್ದಾರೆ. ಯಾವುದೋ ಒಂದು ಪ್ರಭಾವಿ ಜಾಲ ಈ ಸ್ಟ್ಯಾಂಪ್ ಪೇಪರ್‌ ನಕಲಿ ಮುದ್ರಣದ ಹಿಂದೆ ಇದೆ ಎಂಬ ಅನುಮಾನವೂ ಇದೆ. ಹೀಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೆಕ್ಷನ್‌ 10ಎ ಅಧಿಕಾರವನ್ನು ಸಬ್‌ ರಿಜಿಸ್ಟ್ರಾರ್‌ಗಳಿಂದ ಕಸಿ ದು ಕೊಂಡರೆ ಅವ್ಯವಹಾರ ತಡೆಯಬಹುದೆಂಬುದು ಲೆಕ್ಕಾಚಾರವಾಗಿದೆ.

ಬಜೆಟ್‌ ಅಧಿವೇಶನದಲ್ಲಿ ಮಂಡನೆ?
ಈ ವ್ಯವಸ್ಥೆಯನ್ನು ಜಾರಿಗೆ ತರಬೇಕಿದ್ದರೆ ಹಾಲಿ ಇರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕಾಗುತ್ತದೆ. ಸಬ್‌ ರಿಜಿಸ್ಟ್ರಾರ್‌ಗಳಿಗೆ ನೀಡಿರುವ ಈ ವಿಶೇಷ ಅಧಿಕಾರವನ್ನು ವಾಪಸ್‌ ಪಡೆಯುವುದಕ್ಕೂ ಕಾನೂನು ತಿದ್ದುಪಡಿ ಅಗತ್ಯ ವಾಗುತ್ತದೆ. ಹೀಗಾಗಿ ಮುಂದಿನ ಬಜೆಟ್‌ ಅಧಿವೇಶನ ಸಂದರ್ಭದಲ್ಲಿ ತಿದ್ದುಪಡಿ ಕಾಯ್ದೆಯನ್ನು ಮಂಡಿಸಿ ಹೊಸ ವ್ಯವಸ್ಥೆ ಜಾರಿಗೆ ತರಲು ಸರಕಾರದ ಹಂತದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

2600 ಗುತ್ತಿಗೆದಾರರಿಗೆ ನೋಟಿಸ್‌
ಎಸ್ಕಾಂ ವ್ಯಾಪ್ತಿಯಲ್ಲಿನ 70 ಸಾವಿರ ಗುತ್ತಿಗೆದಾರರು ಸರಕಾರದ ಜತೆಗಿನ ಒಡಂಬಡಿಕೆ ಸಂದರ್ಭದಲ್ಲಿ ಕಲರ್‌ ಝೆರಾಕ್ಸ್‌ ಮಾರ್ಗವನ್ನೇ ಹಿಡಿದಿದ್ದಾರೆ ಎಂಬುದು ಆಡಿಟ್‌ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಕಳೆದ 2 ತಿಂಗಳು ಅವಧಿಯಲ್ಲಿ ಈ ಕಾರಣಕ್ಕಾಗಿ ಸುಮಾರು 2,600 ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 ರಾಘವೇಂದ್ರ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next