Advertisement

Kundapura: ಸಂಪೂರ್ಣ ಹದಗೆಟ್ಟ ಕೆರಾಡಿ ಸಂಪರ್ಕಿಸುವ ಮುಖ್ಯ ರಸ್ತೆ

02:43 PM Dec 08, 2024 | Team Udayavani |

ಕುಂದಾಪುರ: ಹಾಡಿಬಿರ್ಗಿ ಕ್ರಾಸ್‌ (ಕಂಪದ ಮೂರುಕೈ) ನಿಂದ ಕೆರಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಮಳೆಗಾಲಕ್ಕೂ ಮುನ್ನ ತೇಪೆ ಹಾಕಲಾದ ರಸ್ತೆಯ ಡಾಮರೆಲ್ಲ ಮಳೆಗೆ ಎದ್ದು ಹೋಗಿದ್ದು, ಈಗ ಹೊಂಡ- ಗುಂಡಿಯ ರಸ್ತೆಯಲ್ಲಿಯೇ ಜನ ಸಂಚರಿಸುವಂತಾಗಿದೆ.

Advertisement

ನೇರಳಕಟ್ಟೆ-ಚಿತ್ತೂರು ಮುಖ್ಯ ರಸ್ತೆಯ ಹಾಡಿಬಿರ್ಗಿ ಯಿಂದ ಕೆರಾಡಿಗೆ ಸಂಪರ್ಕಿಸುವ ಸುಮಾರು 366 ಮೀಟರ್‌ ಉದ್ದದ, 3.75 ಮೀಟರ್‌ ಅಗಲದ ಸಂಪರ್ಕ ರಸ್ತೆಗೆ 3-4 ವರ್ಷದ ಹಿಂದೆ ಡಾಮರು ಹಾಕಲಾಗಿತ್ತು. ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ ಇದಕ್ಕೆ 10 ಲಕ್ಷ ರೂ. ಮಂಜೂರಾಗಿತ್ತು.

ಆದರೆ ಈಗ ಅಲ್ಲಲ್ಲಿ ಈ ರಸ್ತೆಯ ಬಹುತೇಕ ಡಾಮರೆಲ್ಲ ಎದ್ದು ಹೋಗಿದೆ. ಒಂದು ಸ್ವಲ್ಪ ದೂರದವರೆಗೆ ಕಾಂಕ್ರೀಟ್‌ ಮಾಡಿದ್ದು ಬಿಟ್ಟರೆ ಈ ರಸ್ತೆಯ ಅಭಿವೃದ್ಧಿಯಾಗದೆ ಹಲವು ವರ್ಷಗಳೇ ಕಳೆದಿದೆ. ಮಳೆ ಬಂದರೆ ಕೆಸರುಮಯ, ಮಳೆ ಇಲ್ಲದಿದ್ದರೆ ಧೂಳುಮಯ ಈ ರಸ್ತೆಯಲ್ಲಿ ಗ್ರಾಮಸ್ಥರು ಪ್ರಯಾಸಪಟ್ಟು ಸಂಚರಿಸುವಂತಾಗಿದೆ.

ಕೆರಾಡಿ ಹಾಗೂ ಬೆಳ್ಳಾಲ ಗ್ರಾಮಗಳೆರಡು ಸೇರಿ ಒಟ್ಟು 6 ಸಾವಿರ ಮಂದಿ ಗ್ರಾಮಸ್ಥರಿದ್ದು, ಇದರಲ್ಲಿ ಶೇ. 90 ರಷ್ಟು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಕೆರಾಡಿ ಗ್ರಾ.ಪಂ., ಶಾಲೆ, ಶ್ರೀ ವರಸಿದ್ಧಿ ವಿನಾಯಕ ಕಾಲೇಜು, ಮೂಡುಗಲ್ಲು ದೇವಸ್ಥಾನ, ಬ್ಯಾಂಕ್‌, ಉಪ ಆರೋಗ್ಯ ಕೇಂದ್ರಗಳಿಗೆ ತೆರಳಲು ಗ್ರಾಮಸ್ಥರಿಗೆ ಇರುವುದು ಇದೊಂದೇ ರಸ್ತೆ.

ಕಾಂಕ್ರೀಟ್‌ ಕಾಮಗಾರಿ ಮಾಡಿ
ಹಾಡಿಬಿರ್ಗಿ ಕ್ರಾಸ್‌-ಕೆರಾಡಿ ರಸ್ತೆ ಹಾಳಾಗಲು ಮುಖ್ಯ ಕಾರಣ ರಸ್ತೆಯ ಎರಡೂ ಬದಿಗಳಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಆಗಿದೆ. ಒಂದೆರಡು ಕಡೆಗಳಲ್ಲಿ ಅಗತ್ಯವಿದ್ದರೂ ಮೋರಿ ಅಳವಡಿಸಿಲ್ಲ. ಅದಲ್ಲದೆ ಒಂದು ಕಡೆಯಿಂದ ಜೇಡಿಮಣ್ಣಿನ ಬರೆಯಿದ್ದು, ಅದು ವರ್ಷ- ವರ್ಷವೂ ಮಳೆಗಾಲದಲ್ಲಿ ಕುಸಿಯುತ್ತದೆ. ಹಾಗಾಗಿ ಈ ರಸ್ತೆಗೆ ಡಾಮರು ಹಾಕಿದರೂ ಒಂದೇ ಮಳೆಗಾಲದಲ್ಲಿ ಎದ್ದು ಹೋಗುತ್ತದೆ. ಕಾಂಕ್ರೀಟಿಕರಣಗೊಳಿಸಿದರೆ ಮಾತ್ರ ಅನುಕೂಲ. ಆದ್ದರಿಂದ ಈ ರಸ್ತೆಗೆ ಕಾಂಕ್ರೀಟಿಕರಣ ಮಾಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Advertisement

ಮೂಡುಗಲ್ಲಿಗೆ ಬರುವವರ ಸಂಖ್ಯೆ ಮತ್ತಷ್ಟು ಹೆಚ್ಚಳ
ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ ಇತ್ತೀಚೆಗೆ ನಟ, ನಿರ್ದೇಶಕ ರಿಷಬ್‌ ಶೆಟ್ಟರೊಂದಿಗೆ ತೆಲುಗು ನಟರಾದ ಜೂ. ಎನ್‌ಟಿಆರ್‌, ರಾಣಾ ದಗ್ಗುಬಾಟಿ, ನಿರ್ದೇಶಕ ಪ್ರಶಾಂತ್‌ ನೀಲ್‌, ನಟ ಪ್ರಮೋದ್‌ ಶೆಟ್ಟಿ ಸಹಿತ ಅನೇಕರು ಭೇಟಿ ನೀಡಿದ್ದರು. ಇದಾದ ಬಳಿಕ ಈ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಮತ್ತಷ್ಟು ಹೆಚ್ಚಿದೆ. ದಿನೇ ದಿನೇ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಕುಂದಾಪುರ, ಕೊಲ್ಲೂರು, ಮಾರಣಕಟ್ಟೆ ಕಡೆಯಿಂದ ಬರುವವರು ಇದೇ ಮಾರ್ಗವಾಗಿ ಬರಬೇಕು.

ಮನವಿ ಸಲ್ಲಿಸಿದ್ದೇವೆ
ಇದು ಕೆರಾಡಿ ಪಂಚಾಯತ್‌ ರಸ್ತೆಯಾಗಿದ್ದು, ಒಂದು ಸ್ವಲ್ಪ ದೂರ ಕಾಂಕ್ರೀಟಿಕರಣ ಆಗಿದೆ. ಈ ರಸ್ತೆಯ ಕಂಪದ ಮೂರುಕೈ ಬಳಿಯಿಂದ ಪಂಚಾಯತ್‌ವರೆಗಿನ ಸಂಪೂರ್ಣ ಕಾಂಕ್ರೀಟೀಕರಣಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಈಗ ಯಾವುದೇ ಅನುದಾನ ಸರಕಾರದಿಂದ ಬಿಡುಗಡೆಯಾಗದೇ ಇರುವುದರಿಂದ ಕಾಮಗಾರಿ ವಿಳಂಬ ಆಗಿದೆ.
– ಸುದರ್ಶನ ಶೆಟ್ಟಿ, ಅಧ್ಯಕ್ಷರು, ಕೆರಾಡಿ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next