ಜಾಮ್‌ನಗರ್: 30 ವರ್ಷ ಹಿಂದಿನ ಕಸ್ಟಡಿ ಸಾವಿನ ಕೇಸ್‌ಗೆ ಸಂಬಂಧಿಸಿ ಜಾಮ್‌ನಗರ್ ಕೋರ್ಟ್ ಗುರುವಾರ ತೀರ್ಪು ನೀಡಿದ್ದು, ವಜಾಗೊಂಡಿದ್ದ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೋರ್ವ ಪೊಲೀಸ ಅಧಿಕಾರಿ ಪ್ರವೀಣ್ ಸಿಂಗ್ ಝಾಲಾ ಅವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಭಟ್ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಕಳೆದ ವಾರ ಸುಪ್ರೀಂ ಕೋರ್ಟ್ ತಳ್ಳಿ ಹಾಕಿತ್ತು. 11 ಹೆಚ್ಚುವರಿ ಸಾಕ್ಷಿಗಳನ್ನು ಪರಿಗಣಿಸಬೇಕು ಎಂದು ಭಟ್ ಮನವಿ ಮಾಡಿದ್ದರು.
ಭಟ್ ಅವರ ಮೇಲ್ಮನವಿಯನ್ನು ಗುಜರಾತ್ ಪೊಲೀಸರು ಬಲವಾಗಿ ವಿರೋಧಿಸಿದ್ದರು ಮತ್ತು ಇದು ಪ್ರಕರಣದ ತೀರ್ಪು ವಿಳಂಬಗೊಳಿಸಲು ಮಾಡಿರುವ ತಂತ್ರ ಎಂದಿದ್ದರು.
30 ವರ್ಷದ ಹಿಂದೆ ಜಾಮ್‌ನಗರ್‌ನಲ್ಲಿ ಎಸಿಪಿ ಆಗಿದ್ದ ಸಂಜೀವ್ ಭಟ್ , ಕೋಮುಗಲಭೆ ನಡೆದಾಗ ನೂರಕ್ಕು ಹೆಚ್ಚು ಜನರನ್ನು ಬಂಧಿಸಿದ್ದರು. ಆ ಪೈಕಿ ಓರ್ವ ಬಿಡುಗಡೆಯಾಗುವ ವೇಳೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕಂಡು ಬಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ.
2011 ರಲ್ಲಿ ಸಂಜೀವ್ ಭಟ್ ಅವರಿಗೆ ಕಡ್ಡಾಯ ರಜೆ ನೀಡಲಾಗಿತ್ತು, 2015 ರಲ್ಲಿ ಗುಜರಾತ್ ಸರ್ಕಾರ ಅಮಾನತು ಮಾಡಿತ್ತು.