ಹೈದರಾಬಾದ್: ಇತ್ತೀಚೆಗಷ್ಟೇ ಐಪಿಎಲ್ ನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದ 13ರ ಹರೆಯದ ವೈಭವ್ ಸೂರ್ಯವಂಶಿ (Vaibhav Suryavanshi) ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ದೇಶಿಯ ಏಕದಿನ ಕೂಟವಾದ ವಿಜಯ್ ಹಜಾರೆ ಕೂಟದಲ್ಲಿ ವೈಭ್ ಸೂರ್ಯವಂಶಿ ಅವರು ಬಿಹಾರ ಪರ ಪದರ್ಪಣೆ ಮಾಡಿದ್ದಾರೆ. ಇದೇ ವೇಳೆ ಸುಮಾರು 25 ವರ್ಷಗಳ ಹಿಂದಿನ ದಾಖಲೆಯೊಂದನ್ನು ಮುರಿದಿದ್ದಾರೆ.
13 ವರ್ಷ ಮತ್ತು 269 ದಿನಗಳ ವಯಸ್ಸಿನ ಸೂರ್ಯವಂಶಿ ಅವರು ಲಿಸ್ಟ್-ಎ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದಾರೆ. 1999/00 ಋತುವಿನಲ್ಲಿ ಅಲಿ ಅಕ್ಬರ್ ಅವರು 14 ವರ್ಷ ಮತ್ತು 51 ದಿನಗಳ ವಯಸ್ಸಿನಲ್ಲಿ ವಿದರ್ಭಕ್ಕಾಗಿ ಆಡಿದ್ದು, ಲಿಸ್ಟ್ ಎ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಎಂಬ ಈವರೆಗಿನ ದಾಖಲೆಯಾಗಿತ್ತು.
ಸೂರ್ಯವಂಶಿ ವಯಸ್ಸಿನ-ದಾಖಲೆಗಳನ್ನು ಮುರಿಯುವುದನ್ನು ಮುಂದುವರೆಸಿದ್ದಾರೆ, ಈಗಾಗಲೇ ರಣಜಿ ಟ್ರೋಫಿ ಪಂದ್ಯವನ್ನು ಆಡಿದ ಕಿರಿಯ ಆಟಗಾರರಾಗಿದ್ದಾರೆ ಮತ್ತು ಇದಕ್ಕೂ ಮೊದಲು ಭಾರತ U19 ಅನ್ನು ಪ್ರತಿನಿಧಿಸಿದ್ದಾರೆ.
ಆದಾಗ್ಯೂ, ಮೊದಲ ವಿಜಯ್ ಹಜಾರೆ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಮಿಂಚಲಿಲ್ಲ. ಎರಡು ಎಸೆತಗಳಲ್ಲಿ 4 ರನ್ ಗಳಿಸಿದ ವೈಭವ್ ವಿಕೆಟ್ ಒಪ್ಪಿಸಿದರು. ಮೊದಲ ಎಸೆತವನ್ನು ಬೌಂಡರಿ ಬಾರಿಸಿದ ಸೂರ್ಯವಂಶಿ ನಂತರದ ಎಸೆತದಲ್ಲಿ ಆರ್ಯನ್ ಆನಂದ್ ಪಾಂಡೆ ಎಸೆತದಲ್ಲಿ ಔಟಾದರು.
ಬಿಹಾರ ತಂಡವು ಒಟ್ಟು 196 ರನ್ಗಳನ್ನು ಮಾತ್ರ ಗಳಿಸಿತು. ಅದನ್ನು ಮಧ್ಯಪ್ರದೇಶ ಸುಲಭವಾಗಿ ಬೆನ್ನಟ್ಟಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಸ್ಟಾರ್ ರಜತ್ ಪಾಟಿದಾರ್ ಅರ್ಧಶತಕ ಸಿಡಿಸಿದರೆ, 23.75 ಕೋಟಿ ರೂ.ಗಳ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಆಟಗಾರ ವೆಂಕಟೇಶ್ ಅಯ್ಯರ್ ಅವರು ಕೊನೆಯಲ್ಲಿ ಅಜೇಯರಾಗಿ ಉಳಿದರು.