ನವದೆಹಲಿ: ಪಂಜಾಬ್ ನ ಮೊಹಾಲಿ ಜಿಲ್ಲೆಯಲ್ಲಿ ಶನಿವಾರ (ಡಿ.22) ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಹಿಮಾಚಲ ಪ್ರದೇಶದ 20 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
ಮೃತ ಯುವತಿಯನ್ನು ಥಿಯೋಗ್ನ ದೃಷ್ಟಿ ವರ್ಮಾ ಎಂದು ಗುರುತಿಸಲಾಗಿದೆ. ಅವರನ್ನು ಗಂಭೀರ ಸ್ಥಿತಿಯಲ್ಲಿ ಅವಶೇಷಗಳಿಂದ ರಕ್ಷಿಸಲಾಗಿತ್ತು. ಕೂಡಲೇ ಸೊಹಾನಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಗಂಭೀರ ಗಾಯಗೊಂಡಿದ್ದ ಆಕೆ ಸಾವನ್ನಪ್ಪಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಿಷ್ಠ ಐದು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ ಎನ್ನಲಾಗಿದೆ. ಭಾರತೀಯ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ (ಎನ್ಡಿಆರ್ಎಫ್) ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.
ಜಿಮ್ ಸಹ ಹೊಂದಿದ್ದ ಕಟ್ಟಡವು ಪಕ್ಕದ ಪ್ಲಾಟ್ ನಲ್ಲಿ ಅಗೆಯುವ ಕಾರಣ ಕುಸಿದಿದೆ ಎಂದು ಪ್ರಾಥಮಿಕವಾಗಿ ವರದಿಯಾಗಿದೆ.
ಕಟ್ಟಡದ ಮಾಲೀಕರಾದ ಪರ್ವಿಂದರ್ ಸಿಂಗ್ ಮತ್ತು ಗಗನ್ದೀಪ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 105 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಇದು ಕೊಲೆಗೆ ಸಮನಾಗದ ಅಪರಾಧಿ ನರಹತ್ಯೆಗೆ ಶಿಕ್ಷೆಯನ್ನು ವಿಧಿಸುತ್ತದೆ.