ಮೆಲ್ಬೋರ್ನ್: ಬಾರ್ಡರ್ ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬೋರ್ನ್ ನ ಎಂಸಿಜಿ ಯಲ್ಲಿ ಡಿ.26ರಂದು ಆರಂಭವಾಗಲಿದೆ. ಈಗಾಗಲೇ ಸರಣಿ 1-1ರಿಂದ ಸಮಬಲವಾಗಿದ್ದು, ಮುನ್ನಡೆಗಾಗಿ ಉಭಯ ತಂಡಗಳು ಪೈಪೋಟಿ ನಡೆಸುತ್ತಿದೆ.
ಆದರೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಹೊಸ ಸಮಸ್ಯೆಯೊಂದು ಎದುರಾಗಿದೆ. ಅದು ಗಾಯಾಳುಗಳ ಸಮಸ್ಯೆ.
ನೆಟ್ ಸೆಷನ್ ವೇಳೆ ನಾಯಕ ರೋಹಿತ್ ಶರ್ಮಾ ಮೊಣಕಾಲಿಗೆ ಪೆಟ್ಟು ಬಿದ್ದಿದೆ ಎಂದು ವರದಿಯಾಗಿದೆ. ಅವರು ನೋವಿನ ನಡುವೆಯೂ ಆಟವಾಡಲು ಪ್ರಯತ್ನಿಸಿದರು ಆದರೆ ಅಂತಿಮವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕಾಯಿತು.
ರೋಹಿತ್ ಕುರ್ಚಿಯ ಮೇಲೆ ಕುಳಿತಿದ್ದರು, ಅವರ ಪ್ಯಾಡ್ ಗಳನ್ನು ತೆಗೆಯಲಾಗಿತ್ತು. ಎಡ ಮೊಣಕಾಲಿಗೆ ಪಟ್ಟಿ ಹಾಕಲಾಗಿತ್ತು. ಆರಂಭದಲ್ಲಿ ಹೊಡೆತವು ಗಂಭೀರವಾಗಿ ಕಾಣದಿದ್ದರೂ, ಬಾಕ್ಸಿಂಗ್ ಡೇ ಪಂದ್ಯಕ್ಕೂ ಮುನ್ನ ವೈದ್ಯರ ತಂಡ ಅವರ ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ಸಾಧ್ಯತೆಯಿದೆ.
ಕೆ.ಎಲ್.ರಾಹುಲ್ ಬೆರಳಿಗೆ ಗಾಯ
ತಂಡದ ಅಭ್ಯಾಸದ ವೇಳೆ ಕೆ.ಎಲ್. ರಾಹುಲ್ ಅವರ ಕೈ ಬೆರಳಿಗೆ ಏಟು ಬಿದ್ದ ಘಟನೆ ಸಂಭವಿಸಿದೆ. ಕೂಡಲೇ ಚಿಕಿತ್ಸೆ ನೀಡಲಾಯಿತು. ಇದೇನೂ ಗಂಭೀರ ಸ್ವರೂಪದ ಗಾಯವಲ್ಲ ಎನ್ನಲಾಗಿದೆಯಾದರೂ, ನಿರ್ಣಾಯಕ ಪಂದ್ಯಕ್ಕೂ ಮುನ್ನ ಭಾರತೀಯ ತಂಡದಲ್ಲಿ ಗಾಯದ ಭೀತಿ ಎದುರಾಗಿದೆ ಎಂದು ವರದಿಯಾಗಿದೆ.