ಹನೋಯಿ[ವಿಯಟ್ನಾಂ] : ವೇದಗಳನ್ನು ಕುರಿತ ಎರಡು ಸಂಶೋಧನಾ ಪತ್ರಿಕೆಗಳ ಸಂಪುಟಗಳು ವಿಯಟ್ನಾಮಿನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದಲ್ಲಿ ಸೆ.11 ರಂದು ಬಿಡುಗಡೆಯಾದವು. ಕೇಂದ್ರದ ನಿರ್ದೇಶಕ ಮತ್ತು ಭಾರತದ ಸಾಂಸ್ಕೃತಿಕ ರಾಯಭಾರಿ, ಸಾಹಿತಿ ಡಾ. ಜಿ.ಬಿ.ಹರೀಶ ಈ ಸಂಪುಟಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಭಾರತಕ್ಕೆ ಆರ್ಯರು ಹೊರಗಿನಿಂದ ಬಂದರು ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ನುಡಿದರು.
ವಿಯಟ್ನಾಮಿ ಭಾಷೆಯಲ್ಲಿರುವ ಈ ಸಂಚಿಕೆಗಳು ವಿಯಟ್ನಾಂ ಮತ್ತು ಭಾರತದ ಸಂಬಂಧದಲ್ಲಿ ಹೊಸ ಹೆಜ್ಜೆ ಎಂದು ಆವರು ಹೇಳಿದರು. ಈ ವೇದ ಸಂಚಿಕೆಗಳು ಸ್ವಾಮಿ ವಿವೇಕಾನಂದರು ವಿಶ್ವ ಧರ್ಮ ಸಮ್ಮೇಳನದಲ್ಲಿ ಪ್ರಸಿದ್ಧ ಭಾಷಣ ಮಾಡಿದ ಸೆ.11 ರಂದು, 127 ವರ್ಷದ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವುದು ಮತ್ತೊಂದು ವಿಶೇಷ ಎಂದು ವಿವರಿಸಿದರು.
ಇದರಲ್ಲಿ ಡಾ ವಾಮದೇವ ಶಾಸ್ತ್ರೀ(ಡೇವಿಡ್ ಫ್ರಾಲಿ) ಅವರ ಲೇಖನವೂ ಸೇರಿದಂತೆ ಅನೇಕ ವಿದ್ವಾಂಸರ ಲೇಖನಗಳಿರುವುದು ವಿಶೇಷ. ವೇದಗಳನ್ನು ಕುರಿತು ವಿಯಟ್ನಾಂ ಭಾಷೆಯಲ್ಲಿ ಪ್ರಕಟವಾದ ಮೊದಲ ಸಂಚಿಕೆಗಳಿವು. ಇದನ್ನು ವಿಯಟ್ನಾಂ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸಸ್ಸಿನ ರಿಲಿಜಿಯಸ್ ಸ್ಟಡೀಸ್ ವಿಭಾಗ ಮತ್ತು ವಿಯಟ್ನಾಂ ನ ಹನೋಯಿಯಲ್ಲಿರುವ, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಈ ಸಂಚಿಕೆಗಳು ಸಿದ್ಧವಾದವು.
ಕಾರ್ಯಕ್ರಮದಲ್ಲಿ ಯೂನಿವರ್ಸಿಟಿ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಹ್ಯುಮ್ಯಾನಿಟಿಸ್ ನ ಭಾರತೀಯ ಅಧ್ಯಯನಗಳ ವಿಭಾಗದ ಸಹ ಪ್ರಾಧ್ಯಾಪಕಿ ಡಾ ದೋ ತು ಹ, ರಿಲಿಜಿಯಸ್ ಸ್ಟಡೀಸ್ ಸಂಶೋಧನಾ ಪತ್ರಿಕೆಯ ಪ್ರಧಾನ ಸಂಪಾದಕ ಡಾ ಚುನ್ ವನ್ ತನ್ ಮತ್ತು ಇತರರು ಭಾಗವಹಿಸಿದ್ದರು.
ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೇಂದ್ರದ ಫೇಸ್ ಬುಕ್ ನ ಮೂಲಕ ನಡೆದ ಈ ಬಿಡುಗಡೆ ಸಮಾರಂಭದಲ್ಲಿ ಹಲವಾರು ವಿದ್ವಾಂಸರು ಭಾಗವಹಿಸಿದ್ದರು.