ಬಹ್ರೈನ್:ಇಲ್ಲಿನ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹ್ರೈನ್’ ಆಯೋಜಿಸಿದ್ದ ದಿ| ತೀರ್ಥ ಸುವರ್ಣ ಸ್ಮರಣಾರ್ಥ ಪ್ರೊ ಕಬಡ್ಡಿ ಪಂದ್ಯಾಟ ನೆರೆದ ನೂರಾರು ಜನರನ್ನು ತಡರಾತ್ರಿಯವರೆಗೂ ರಂಜಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಅಲ್ ಅಹಲಿ ಕ್ಲಬ್ನ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಈ ಕಬಡ್ಡಿ ಪಂದ್ಯಾಟದಲ್ಲಿ ದ್ವೀಪದ ಎಂಟು ಬಲಿಷ್ಠ ತಂಡಗಳು ಪಾಲ್ಗೊಂಡಿದ್ದವು. ಮೊಗವೀರ್ಸ್ ಬಹ್ರೈನ್ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ ಮೊಗವೀರ್ಸ್ ಬಹ್ರೈನ್ ಸಂಘಟನೆ ದ್ವೀಪದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅದರ ಕ್ರಿಯಾಶೀಲ ಸದಸ್ಯರಾಗಿ ಸಂಘಟನೆಗೆ ಅನನ್ಯ ಕೊಡುಗೆಯನ್ನು ತೀರ್ಥ ಸುವರ್ಣರವರು ನೀಡಿದ್ದರು. ಸ್ವತಃ ಕಬಡ್ಡಿ ಆಟಗಾರರಾಗಿ ಇವರು ಮಂಗಳೂರು ವಿಶ್ವವಿದ್ಯಾನಿಲಯವನ್ನು ತಮ್ಮ ಕಾಲೇಜು ದಿನಗಳಲ್ಲಿ ಇವರು ಪ್ರತಿನಿ ಧಿಸಿದ್ದು ಎರಡು ವರುಷಗಳ ಹಿಂದೆ ಅಗಲಿದ್ದರು.
ಮೊಗವೀರ್ಸ್ ಬಹ್ರೈನ್ ಸಂಘಟನೆಗೆ ಅವರ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಕಳೆದ ವರುಷ ಅವರ ಸ್ಮರಣಾರ್ಥ ಈ ಪಂದ್ಯಾಟವನ್ನು ಆರಂಭಿಸಿದ್ದು ಇದು ಯಶಸ್ವಿಯಾಗಿ ಎರಡನೇ ವರುಷಕ್ಕೆ ಕಾಲಿಟ್ಟಿದೆ.
ಮೊಗವೀರ್ಸ್ ಬಹ್ರೈನ್ನ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್ರವರ ಅಧ್ಯಕ್ಷತೆಯಲ್ಲಿ ಈ ಜರಗಿದ ಈ ಪ್ರೊ ಕಬಡ್ಡಿ ಪಂದ್ಯಾಟವು ಯಾವುದೇ ಅಂತಾರಾಷ್ಟ್ರೀಯ ಪಂದ್ಯಾಟಕ್ಕೆ ಕಡಿಮೆಯಿಲ್ಲದಂತೆ ಅತ್ಯಂತ ಅಚ್ಚುಕಟ್ಟಾಗಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಕ್ರೀಡಾ ಕಾರ್ಯದರ್ಶಿ ರಾಜೇಶ್ ಮೆಂಡನ್, ಉಪ ಕ್ರೀಡಾಕಾರ್ಯದರ್ಶಿ ರಾಹುಲ್ ಸಾಲ್ಯಾನ್, ಸಾಂಸðತಿಕ ಕಾರ್ಯದರ್ಶಿ ಸಂದೀಪ್ ಮೆಂಡನ್, ಪ್ರೇಮ್ ಅತ್ತಾವರ, ಸುಧಾಕರ್ ಆನಗಳ್ಳಿ, ಗಣೇಶ್ ಕುಂದರ್, ಸಾಹಿಲ್ ಸುವರ್ಣ ಮುಂತಾದವರು ಈ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ್ದರು.
ಸಿ| ತೀರ್ಥ ಸುವರ್ಣರವರಿಗೆ ಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಿದ ಅನಂತರ ಶಿಲ್ಪಾ ಶಮಿತ್ ಕುಂದರ್ರವರು ಎಲ್ಲರನ್ನೂ ಸ್ವಾಗತಿಸಿ, ತಂಡಗಳಿಗೆ ಶುಭ ಹಾರೈಸಿದರು. ತೀರ್ಥ ಸುವರ್ಣರ ಧರ್ಮಪತ್ನಿ ಸುರೇಖಾ ಸುವರ್ಣ ಅವರು ರಿಬ್ಬನ್ ಕತ್ತರಿಸಿ ಈ ಪಂದ್ಯಾಟಕ್ಕೆ ಚಾಲನೆ ನೀಡಿ, ಪಂದ್ಯಾಟ ಆರಂಭಗೊಂಡಿತು.
ಒಟ್ಟಾರೆ ಎಂಟು ತಂಡಗಳು ಕಬಡ್ಡಿ ಪಂದ್ಯಾಟ ದಲ್ಲಿ ಭಾಗವಹಿಸಿದ್ದವು. ಎಂಟು ಬಲಿಷ್ಠ ತಂಡಗಳು ತೀವ್ರ ಪೈಪೋಟಿ ತೋರಿದ್ದು ಸೆಮಿಫೈನಲ್ ಹಂತಕ್ಕೆ ಶಿವಗಂಗೆ, ಯುನೈಟೆಡ್ ಪುತ್ತೂರು, ಫ್ರೆಂಡ್ಸ್ ಬಹ್ರೈನ್ ಹಾಗೂ ತುಳುನಾಡ್ ತಂಡಗಳು ಲಗ್ಗೆ ಇಟ್ಟವು. ಅಂತಿಮ ಹಂತಕ್ಕೆ ಪ್ರವೇಶಿಸಿದ ಫ್ರೆಂಡ್ಸ್ ಬಹ್ರೈನ್ ಹಾಗೂ ತುಳುನಾಡು ತಂಡಗಳ ನಡುವಿನ ಪಂದ್ಯಾಟ ರೋಚಕ ಹಂತಕ್ಕೆ ತಲುಪಿ ಕೊನೆಗೆ ತುಳುನಾಡ್ ಕಬ್ಬಡಿ ತಂಡ ಜಯವನ್ನು ದಾಖಲಿಸಿತು. ಫ್ರೆಂಡ್ಸ್ ಬಹ್ರೈನ್ ತಂಡ ಎರಡನೇ ಸ್ಥಾನ ಪಡೆದರು. ಯುನೈಟೆಡ್ ಪುತ್ತೂರು ತೃತೀಯ ಸ್ಥಾನ ಹಾಗೂ ಶಿವಗಂಗೆ ತಂಡ ನಾಲ್ಕನೇ ಸ್ಥಾನವನ್ನು ಪಡೆಯಿತು.
ಬೆಸ್ಟ್ ರೈಡರ್ ಪ್ರಶಸ್ತಿಯನ್ನು ರಾಹುಲ್, ಬೆಸ್ಟ್ ಕ್ಯಾಚರ್ ಆಗಿ ವೈಷಾಗ್, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪುನೀತ್ ಪಡಕೊಂಡರೆ, ಪಂದ್ಯಾಟದ ಭರವಸೆಯ ಆಟಗಾರನಿಗಿರುವ ಪ್ರಶಸ್ತಿಯನ್ನು ರಾಶಿದ್ ಬನಾರಿ ತಮ್ಮದಾಗಿಸಿಕೊಂಡರು. ನಾಡಿನ ಖ್ಯಾತ ಕಬಡ್ಡಿ ಆಟಗಾರರಾದ ರಾಶಿದ್ ಬನಾರಿ, ಶಮೀರ್ ಕಡಬ, ಹಿಶಾಮ್ ಉಡುಪಿ ವಿಶೇಷವಾಗಿ ಈ ಪಂದ್ಯಾಟಕ್ಕೆ ಆಗಮಿಸಿ ತಮ್ಮ ಆಟದಿಂದ ಪಂದ್ಯಾಟಕ್ಕೆ ಹೆಚ್ಚಿನ ಮೆರುಗು ನೀಡಿದರು.
ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಇಲ್ಲಿನ ವಿವಿಧ ಸಂಘಟನೆಗಳ ಪದಾ ಕಾರಿಗಳು, ಗಣ್ಯರುಗಳು ಆಗಮಿಸಿ ಬಹುಮಾನಗಳನ್ನು ವಿತರಿಸಿದರು. ವಿಜೇತ ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳಿಗೆ ಟ್ರೋಫಿಗಳ ಜತೆಗೆ ನಗದು ಬಹುಮಾನಗಳನ್ನು ನೀಡಲಾಯಿತು. ಇತರ ತಂಡಗಳಿಗೆ ಟ್ರೋಫಿಗಳು ಹಾಗೂ ಪಂದ್ಯಾಟದ ಯಶಸ್ಸಿಗೆ ಸಹಕರಿಸಿದ ಕಾರ್ಯಕರ್ತರಿಗೆ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ವರದಿ: ಕಮಲಾಕ್ಷ ಅಮೀನ್