Advertisement

GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!

01:29 AM Nov 17, 2024 | Team Udayavani |

ಬೆಂಗಳೂರು: ಶ್ರಮ ಜೀವನಕ್ಕೆ ಉತ್ತಮ ಉದಾಹರಣೆ ಜೇನು. ಆದರೆ ಹೊಸ ಆವಿಷ್ಕಾರದ ಮೂಲಕ ಜೇನಿನ ಕೆಲಸವನ್ನೇ ಈಗ ಸುಲಭಗೊಳಿಸಲಾಗಿದೆ. ಈ ತಂತ್ರಜ್ಞಾನದಿಂದ ಜೇನು ಹುಳುಗಳು ನೈಸರ್ಗಿಕವಾಗಿ ಗೂಡು ಕಟ್ಟು ವ ಅಗತ್ಯವಿಲ್ಲ. ಈ ಜಾಗಕ್ಕೆ ಕೃತಕ 3ಡಿ ಜೇನುಗೂಡುಗಳು ಕಾಲಿಟ್ಟಿದ್ದು, ಪರಿಣಾಮಕಾರಿ ಪರ್ಯಾಯವಾಗಿ ಮಾರ್ಪಟ್ಟಿದೆ. ಇದು ಜಿಕೆವಿಕೆಯಲ್ಲಿ ನಡೆಯುತ್ತಿರುವ 2024ನೇ ಸಾಲಿನ ಕೃಷಿ ಮೇಳದಲ್ಲಿ ಜೇನು ಸಾಕಣೆದಾರರ ಗಮನ ಸೆಳೆದಿದೆ.

Advertisement

ಜಿಕೆವಿಕೆಯ ಕೃಷಿ ಎಂಜಿನಿಯರಿಂಗ್‌ ಮಹಾ ವಿದ್ಯಾಲಯದ ಸಂಶೋಧನೆ ಇದು. ನೈಸರ್ಗಿಕ ಗೂಡು ಕಟ್ಟಲು ಜೇನು ಹುಳುವಿಗೆ 8ರಿಂದ 9 ಲೀಟರ್‌ ಮೇಣದ ಆವಶ್ಯಕತೆಯಿರುತ್ತದೆ. ಇದನ್ನು ಎರಡರಿಂದ ಮೂರು ಬಾರಿ ಮಾತ್ರ ಮರುಬಳಸ‌ಬಹುದು. ಈ ಗೂಡು ಸಿಹಿ ಇರುವುದರಿಂದ “ಮಿಲಿಮೌತ್‌’ ಎನ್ನುವ ಹುಳುಗಳು ಗೂಡಿನಲ್ಲಿ ಸೇರಿಕೊಂಡು ಗೂಡನ್ನು ಹಾಳು ಮಾಡುತ್ತವೆ. ಈ ಸಮಸ್ಯೆಗೆ ಉತ್ತರವಾಗಿ ಎಫ್ಡಿಎಯಿಂದ ಮಾನ್ಯತೆ ಪಡೆದ 3ಡಿ ಮುದ್ರಿತ ಮಾದರಿಯ ಅಕ್ರಿಲೋಟ್ರೈಲ್‌ ಬ್ಯುಟಾಡೀನ್‌ ಸ್ವೆ„ರೀನ್‌ (ಎಬಿಎಸ್‌)ನಿಂದ ಕೃತಕ ಜೇನುಗೂಡನ್ನು ತಯಾರಿಸಲಾಗಿದೆ. ಇದನ್ನು ರೈಸ್‌ 3ಡಿ ಪ್ರಿಂಟರ್ಸ್‌ ಪ್ಲಸ್‌ ಮಾದರಿಯ 3ಡಿ ಪ್ರಿಂಟರ್‌ ಬಳಸಿ ಮುದ್ರಿಸಲಾಗಿದ್ದು, ಹನಿಕೊಂಬ್‌ ಸ್ಟ್ರಕ್ಚರ್‌ ಮಾದರಿಯಲ್ಲಿದೆ. ದೀರ್ಘ‌ ಬಾಳಿಕೆ ಹಾಗೂ ಅಧಿಕ ಜೇನು ಉತ್ಪಾದನೆಗೆ ಇದು ಸಹಾಯಕ ಎನ್ನುತ್ತಾರೆ ಸಂಶೋಧಕರು.

ಒಂದು 3ಡಿ ಜೇನುಗೂಡಿಗೆ ಗರಿಷ್ಠ 2,500 ರೂ.ಗಳಷ್ಟಿದ್ದು, 100ಕ್ಕಿಂತ ಹೆಚ್ಚು ಬಾರಿ ಮರುಬಳಸಬಹುದು. ಜತೆಗೆ ನೈಸರ್ಗಿಕವಾದ ಒಂದು ಜೇನು ಗೂಡಿನಲ್ಲಿ 200 ಎಂ.ಎಲ್‌. ಜೇನು ಲಭ್ಯವಾದರೆ ಇಲ್ಲಿ 500 ಎಂ.ಎಲ್‌. ಹೆಚ್ಚಿನ ಜೇನುತುಪ್ಪ ಲಭ್ಯವಾಗುತ್ತದೆ. ಇದರಿಂದ ಗೂಡುಕಟ್ಟಲು ಬಳಸುವ ಮೇಣವೂ ಜೇನು ತುಪ್ಪವಾಗಿಯೇ ದೊರೆಯುತ್ತದೆ. ಒಂದು ಪೆಟ್ಟಿಗೆಯಲ್ಲಿ 10ರಿಂದ 12 ಕೃತಕ ಗೂಡುಗಳನ್ನು ಇಟ್ಟುಕೊಳ್ಳಬಹುದು ಹಾಗೂ ಒಂದು ಶೀಟ್‌ನಿಂದ 350 ಎಂ.ಎಲ್‌. ಜೇನು ತುಪ್ಪ ಸಿಗುತ್ತದೆ.

100 ಬಾರಿ ಮರುಬಳಕೆ
ಈ ವಿಧಾನವು ರೈತರಿಗೆ ಸುಲಭ, ಸರಳವಾಗಿದ್ದು, ಮರುಬಳಕೆಗೆ ಒಗ್ಗಿಕೊಂಡಿದೆ. ಫೌಂಡೇಶನ್‌ ಶೀಟ್‌ ಬಳಸಿ ಜೇನಿನ ಫ್ರೆàಮ್‌ಗೆ ಕಟ್ಟಲಾಗುತ್ತದೆ. ಅನಂತರ ತುಡುವೆ ಜೇನಿನ ಮೇಣ ಹಾಗೂ ನಿರ್ದಿಷ್ಟ ಪ್ರಮಾಣದಲ್ಲಿ ಡೈ-ಇಥೆಲ್‌-ಈಥರ್‌ನ ಮಿಶ್ರಣವನ್ನು ಲೇಪಿಸಲಾಗುವುದು. ಇದರಿಂದ ಜೇನು ಹುಳುಗಳು ಕೃತಕ ಗೂಡನ್ನು ಸುಲಭವಾಗಿ ಒಪ್ಪಿಕೊಳ್ಳುತ್ತವೆ. ಜೇನು ತುಪ್ಪವನ್ನು ಗೂಡಿನಿಂದ ಬೇರ್ಪಡಿಸುವಾಗ ಮೇಣದೊಂದಿಗೆ ತುಪ್ಪ ಬೆರೆತುಕೊಳ್ಳದೇ ಹೆಚ್ಚಿನ ಪ್ರಮಾಣದ ತುಪ್ಪ ಕೃಷಿಕರ ಕೈ ಸೇರುತ್ತದೆ. ಒಮ್ಮೆ ಹೀಗೆ ಬಳಸಿದ ಗೂಡನ್ನು ಬಿಸಿ ನೀರಿನಿಂದ ಸ್ವತ್ಛಗೊಳಿಸಿ 100 ಬಾರಿ ಮರುಬಳಸ‌ಬಹುದು.

2 ಬಾರಿ ಸಂಶೋಧನೆ
ಮೊದಲ ಬಾರಿಗೆ ಕೃತಕ ಜೇನುಗೂಡಿಗೆ ಮೇಣದ ಲೇಪನ ಮಾಡದೆ ಹಾಗೇ ಉಪಯೋಗಿಸಲಾಗಿತ್ತು. ಆದರೆ ಜೇನು ಹುಳುಗಳು ಸೂಕ್ಷ್ಮ ಜೀವಿಗಳಾದ್ದರಿಂದ ಇದನ್ನು ಒಪ್ಪಿಕೊಳ್ಳಲಿಲ್ಲ. ಈ ಬಗ್ಗೆ ಪುನಃ ಸಂಶೋಧಿಸಿ ಹುಳುಗಳೇ ತಯಾರಿಸಿದ ಮೇಣವನ್ನು ಸಿಂಪಡಿಸಿದ ಅನಂತರ ಇದನ್ನು ಒಪ್ಪಿಕೊಂಡವು.

Advertisement

ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನ
ಸದ್ಯ ಈ ಗೂಡುಗಳು ಕೇವಲ ಜೇನು ತುಪ್ಪ ಉತ್ಪಾದನೆಗೆ ಮಾತ್ರ ಸೀಮಿತವಾಗಿದ್ದು, ಜೇನು ಹುಳುಗಳು ಇದರಲ್ಲಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಆದರೆ ಜೇನು ತುಪ್ಪ ಉತ್ಪಾದನೆಗೆ ಪೂರಕವಾಗಿದ್ದು, ಹಲವು ರೈತರಿಂದ ಮೆಚ್ಚುಗೆ ಗಳಿಸಿದೆ. ಇವರೆಗೆ ಈ ತಂತ್ರಜ್ಞಾನವು “ಎಪಿಸರನಾ ಇಂಡಿಕಾ’ (ತುಡುವೆ ಜೇನು) ಸಾಕಾಣಿಕೆಗೆ ಮಾತ್ರ ಉಪಯೋಗಿಸಲಾಗಿದೆ.

3ಡಿ ಮುದ್ರಿತ ಕೃತಕ ಜೇನುಗೂಡು ಎಲ್ಲಿ ಲಭ್ಯ?
ವಿಶ್ವವಿದ್ಯಾನಿಲಯದಲ್ಲಿ 3ಡಿ ಮುದ್ರಿತ ಕೃತಕ ಜೇನುಗೂಡು ಲಭ್ಯವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500ರಿಂದ 2,500 ರೂ. ವರೆಗಿನ ಗೂಡುಗಳು ದೊರೆಯುತ್ತಿದ್ದು, ಬೆಲೆಗೆ ತಕ್ಕಂತೆ ಗೂಡಿನ ಬಾಳಿಕೆ ನಿರ್ಧಾರವಾಗುತ್ತದೆ. ಆಸಕ್ತರು ಮೊ. 9449627325ಗೆ ಸಂಪರ್ಕಿಸಬಹುದು ಎಂದು ವಿ.ವಿ. ತಿಳಿಸಿದೆ.

ಈ ಕೃತಕ ಗೂಡುಗಳು ಜೇನು ಹುಳುಗಳನ್ನು ಆಲಸಿ ಮಾಡದೆ, ಗೂಡು ತಯಾರಿಕೆಯ ಸಮಯವನ್ನು ಉಳಿಸಿ ಹೆಚ್ಚು ಉತ್ಪಾದನೆಗೆ ಸಹಾಯಕವಾಗಿದೆ. ಈ ಸಂಶೋಧನೆಯ ಪೇಟೆಂಟ್‌ಗೆ ಕೆಲವು ಹಂತಗಳು ಮಾತ್ರ ಬಾಕಿ ಇರುವುದು ಸಂತಸದ ವಿಚಾರ.
– ಡಾ| ಸಿ.ಟಿ. ರಾಮಚಂದ್ರ, ಎಂಜಿನಿಯರಿಂಗ್‌ ವಿ.ವಿ.ಯ ಪ್ರಾಧ್ಯಾಪಕ

ಜೇನು ಕೃಷಿಯಲ್ಲಿ ಈ ಮಾದರಿಯನ್ನು ಈಗಾಗಲೇ ಅಳವಡಿಸಿಕೊಂಡಿದ್ದೇನೆ. ಇನ್ನು ಹೆಚ್ಚಿನ ಕೃತಕ ಗೂಡುಗಳನ್ನು ಅಳವಡಿಸಬೇಕೆಂದಿದ್ದೇನೆ.
– ಕಿರಣ್‌, ಜೇನು ಕೃಷಿಕ

ಸುಚೇತಾ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next