ವಿಶ್ವಸಂಸ್ಥೆಯ ಅಂಗಸಂಸ್ಥೆಯೊಂದು ತನ್ನ ಅಧ್ಯಯನ ವರದಿಯಲ್ಲಿ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ವರ್ಗೀಕರಿಸಿದ ಬೆನ್ನಲ್ಲೇ ದಶಕಗಳಿಂದ ಚರ್ವಿತ ಚರ್ವಣವಾಗುತ್ತಲೇ ಬಂದಿರುವ ಈ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಈ ವರದಿಯಿಂದ ಅಡಿಕೆ ಬೆಳೆಗಾರರು ಆತಂಕಿತರಾಗಿದ್ದೇ ಅಲ್ಲದೆ ಅಡಿಕೆಯ ಮೇಲೆ ನಿಷೇಧ ಹೇರಲಾಗುತ್ತದೆಯೇ ಎಂಬ ಭೀತಿ ಅವರನ್ನು ಕಾಡ ತೊಡಗಿತ್ತು. ಈ ಎಲ್ಲ ಆತಂಕ, ಗೊಂದಲ, ವೈರುಧ್ಯಗಳಿಂದ ಕೂಡಿದ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಡಿಕೆ ಕುರಿತಂತೆ ಸಾಕ್ಷಿ ಆಧರಿತ ಅಧ್ಯಯನ ನಡೆಸುವ ನಿರ್ಧಾರ ಕೈಗೊಂಡಿದೆ. ಕೇಂದ್ರದ ಈ ತೀರ್ಮಾನದಿಂದ ಅಡಿಕೆ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯಲಾಗುವ ತೋಟಗಾರಿಕ ಬೆಳೆಯಾದ ಅಡಿಕೆಯನ್ನು ಕ್ಯಾನ್ಸರ್‌ಕಾರಕ ಎಂದು ಕಳೆದ ಮೂರ್‍ನಾಲ್ಕು ದಶಕಗಳ ಅವಧಿಯಲ್ಲಿ ಹಲವಾರು ಬಾರಿ ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ವರದಿ ನೀಡುವ ಮೂಲಕ ಬೆಳೆಗಾರರನ್ನು ಆತಂಕದ ಮಡುವಿಗೆ ತಳ್ಳುತ್ತಲೇ ಬಂದಿವೆ. ವಾಸ್ತವಾಂಶದಿಂದ ಹೊರತಾದ ಇಂತಹ ವರದಿಗಳು ಪ್ರಕಟಗೊಂಡಾಗಲೆಲ್ಲ ಅಡಿಕೆ ಮಾರುಕಟ್ಟೆಯಲ್ಲಿ ಒಂದಿಷ್ಟು ಏರಿಳಿತಗಳಾಗಿ, ಬೆಳಗಾರರು ಸಂಕಷ್ಟ ಅನುಭವಿಸುವಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿತ್ತು. ಈ ಬಾರಿ ವಿಶ್ವಸಂಸ್ಥೆಯ ಅಂಗಸಂಸ್ಥೆ ಕೂಡ ಇಂತಹುದೇ ವರದಿಯನ್ನು ನೀಡಿದ್ದು ಅಡಿಕೆ ಬೆಳೆಗಾರರ ಆತಂಕವನ್ನು ಮತ್ತಷ್ಟು ಹೆಚ್ಚಿಸಿತ್ತು. ಆದರೆ ಅಡಿಕೆ ಬಗೆಗೆ ನಡೆಸಲಾದ ವಿವಿಧ ವೈಜ್ಞಾನಿಕ ಅಧ್ಯಯನದಲ್ಲಿ ಬರಿಯ ಅಡಿಕೆ ಸೇವನೆ ಆರೋಗ್ಯವರ್ಧಕ ಎಂಬುದು ಸಾಬೀತಾಗಿದೆ. ಇವೆಲ್ಲದರ ಹೊರತಾಗಿಯೂ ಅಡಿಕೆ ಕುರಿತಂತೆ ಪದೇ ಪದೆ ಅಡಿಕೆ ಕ್ಯಾನ್ಸರ್‌ಕಾರಕ, ಅಡಿಕೆ ಸೇವನೆ ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬಂತಹ ವರದಿಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವರದಿಯಾಗುವ ಮೂಲಕ ಅಡಿಕೆ ಬೆಳೆಗಾರರನ್ನು ಸದಾ ಗೊಂದಲದಲ್ಲಿ ಮುಳುಗುವಂತೆ ಮಾಡುತ್ತಲೇ ಬಂದಿವೆ.
ಈ ಬಾರಿ ವಿಶ್ವಸಂಸ್ಥೆಯ ಅಂಗಸಂಸ್ಥೆಯು ನೀಡಿದ ವರದಿಯ ಬಳಿಕ ಅಡಿಕೆ ಬೆಳೆಗಾರರ ಸಂಘಟನೆಗಳು, ಸಂಸ್ಥೆಗಳು, ಜನಪ್ರತಿನಿಧಿಗಳು ಒಕ್ಕೊರಲ ದನಿ ಎತ್ತಿ, ಕೇಂದ್ರದ ಮೇಲೆ ಒತ್ತಡ ಹೇರಿದ ಪರಿಣಾಮ ಸರಕಾರ ‘ಅಡಿಕೆ ಮತ್ತು ಮಾನವ ಆರೋಗ್ಯ’ ಎಂಬ ವಿಷಯವಾಗಿ ಸಮಗ್ರ ಅಧ್ಯಯನ ನಡೆಸುವ ನಿರ್ಧಾರಕ್ಕೆ ಬಂದಿದೆ. ಈ ಅಧ್ಯಯನದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ವೈದ್ಯಕೀಯ, ವಿಜ್ಞಾನ, ಕೈಗಾರಿಕ ಸಂಸ್ಥೆಗಳನ್ನೊಳಗೊಂಡಂತೆ 16 ಸಂಸ್ಥೆಗಳು ಕೈಜೋಡಿಸಲಿವೆ. ಈ ಅಧ್ಯಯನದ ವೇಳೆ ವಿವಿಧ ರಾಜ್ಯಗಳಲ್ಲಿನ ಅಡಿಕೆ ಬೆಳೆಗಾರರ ಸಂಘ ಸಂಸ್ಥೆಗಳನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಡಿಕೆ ಕುರಿತಂತೆ ನಕಾರಾತ್ಮಕ ವರದಿಗಳು ಪ್ರಕಟಗೊಳ್ಳುವ ಹಿಂದಿನ ಷಡ್ಯಂತ್ರವನ್ನು ಬಯಲಿಗೆಳೆಯುವ ಕಾರ್ಯ ಕೂಡ ಈ ಅಧ್ಯಯನದಿಂದಾಗಬೇಕು. ಇದರ ಹಿಂದೆ ಕೆಲವು ವಿದೇಶಿ ವಾಣಿಜ್ಯಾತ್ಮಕ ಸಂಸ್ಥೆಗಳ ಕೈವಾಡ ಇರುವ ಅನುಮಾನ ಇದ್ದು, ಆಗಿಂದಾಗ್ಗೆ ಇಂಥ ವದಂತಿಗಳನ್ನು ಹಬ್ಬಿಸಿ ತನ್ನ ಬೇಳೆ ಕಾಳು ಬೇಯಿಸಿಕೊಳ್ಳುತ್ತಿರುವುದರ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
ಇನ್ನು ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಇನ್ನಿತರ ಕೆಲವು ಸಮಸ್ಯೆ, ಗೊಂದಲಗಳ ಬಗೆಗೂ ಈ ಅಧ್ಯಯನ ಬೆಳಕು ಚೆಲ್ಲಲೇಬೇಕಾಗಿದೆ. ಕಳೆದ ಕೆಲವು ದಶಕಗಳಿಂದ ಅಡಿಕೆ ಬೆಳೆಯನ್ನು ಕಾಡುತ್ತಿರುವ ತರಹೇವಾರಿ ರೋಗಗಳು ಮತ್ತು ಕೀಟಗಳ ನಿಯಂತ್ರಣ, ಬೆಳೆ ವರ್ಧನೆಗಾಗಿ ರಾಸಾಯನಿಕ ಗೊಬ್ಬರಗಳ ಅವಲಂಬನೆಯ ಪಾರ್ಶ್ವ ಪರಿಣಾಮಗಳ ಕುರಿತಂತೆಯೂ ಅಧ್ಯಯನ ನಡೆಸಿ, ಅಡಿಕೆ ಬೆಳೆಗಾರರಿಗೆ ಒಂದಿಷ್ಟು ಮಾರ್ಗದರ್ಶನ ನೀಡುವ ಅಗತ್ಯವಿದೆ. ಅಲ್ಲದೆ ಅಡಿಕೆ ಕಲಬೆರಕೆ ಹಾಗೂ ವಿದೇಶಗಳಿಂದ ಅಡಿಕೆ ಆಮದಿಗೆ ಕಡಿವಾಣ ಹಾಕುವ ಮೂಲಕ ಮಾರುಕಟ್ಟೆಯಲ್ಲಿ ದೇಶೀಯ ಅಡಿಕೆಗೆ ಸ್ಥಿರ ಧಾರಣೆ ಲಭಿಸುವುದನ್ನು ಖಾತರಿಪಡಿಸುವ ಮೂಲಕ ಸರಕಾರ ಬೆಳೆಗಾರರ ಹಿತವನ್ನು ಕಾಯಬೇಕು.