Advertisement

3 ಡಿ ಮ್ಯೂರಲ್ ಹೃದಯಗಳೊಂದಿಗೆ ಕೆಂಪಾದ ಬೆಂಗಳೂರು ನಗರ

06:55 PM Sep 24, 2024 | Team Udayavani |

ಬೆಂಗಳೂರು: ಮಣಿಪಾಲ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ, ಬೆಂಗಳೂರಿನಾದ್ಯಂತ ಆಕರ್ಷಕ 3D ಮ್ಯೂರಲ್ ಆರ್ಟ್ ಪ್ರಾಜೆಕ್ಟ್‌ ನೊಂದಿಗೆ ಸೃಜನಾತ್ಮಕ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದೆ. ದೂರದಿಂದ ನೋಡಿದಾಗ ಮಾತ್ರ ತನ್ನ ಪೂರ್ಣ ಚಿತ್ರವನ್ನು ಬಹಿರಂಗಪಡಿಸುವುದು ಈ ಕಲಾಕೃತಿಯ ವೈಶಿಷ್ಟ್ಯ. ಧೂಮಪಾನ, ಮದ್ಯದ ಚಟ, ಸ್ಥೂಲಕಾಯತೆ, ಮುಂತಾದ ಅನಾರೋಗ್ಯಕರ ಅಭ್ಯಾಸಗಳ ವಿರುದ್ಧದ ಹೋರಾಟವನ್ನು ಸಂಕೇತಿಸುವ ರೋಮಾಂಚಕ ಕೆಂಪು ಹೃದಯವನ್ನು ಈ ಕಲಾಕೃತಿ ತೋರಿಸುತ್ತದೆ.

Advertisement

BTP (ಬೆಂಗಳೂರು ಟ್ರಾಫಿಕ್ ಪೊಲೀಸ್) ಮತ್ತು BMRCL (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ಸಹಯೋಗದಲ್ಲಿ ಹೃದಯದ ಆಕಾರದ ಭಿತ್ತಿಚಿತ್ರವನ್ನು ರಚಿಸಲಾಗುತ್ತಿದೆ. ಭಿತ್ತಿಚಿತ್ರಗಳು ಆರೋಗ್ಯ ಮತ್ತು ಜೀವನಶೈಲಿಯ ಆಯ್ಕೆಗಳ ಕುರಿತು ಚರ್ಚೆಗಳನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿವೆ. ಉತ್ತಮ ಹೃದಯದ ಆರೋಗ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕಾಗಿ, “ವೈಯಕ್ತಿಕ ಅನಾರೋಗ್ಯಕರ ಅಭ್ಯಾಸಗಳ ಬಂಧನದಿಂದ ಹೃದಯವನ್ನು ಮುಕ್ತಗೊಳಿಸಿ” ಎಂಬ ಸಂದೇಶವನ್ನು ಈ ಕಲಾಕೃತಿ ಪ್ರತಿಬಿಂಬಿಸುತ್ತದೆ.

ಈ ಮ್ಯೂರಲ್ ಕಲಾಕೃತಿಯು ಧೂಮಪಾನ, ಕಳಪೆ ಆಹಾರ ಅಥವಾ ವ್ಯಸನದಂತಹ ಹಾನಿಕಾರಕ ಅಭ್ಯಾಸಗಳ ಸರಪಳಿಗಳಿಂದ ಬಂಧಿಸಲ್ಪಟ್ಟ ಹೃದಯವನ್ನು ಪ್ರತಿನಿಧಿಸುತ್ತದೆ. ಆರೋಗ್ಯಕರ ಜೀವನ ಕ್ರಮಗಳನ್ನು ಅಳವಡಿಸಿಕೊಂಡು ಈ ಸರಪಳಿಗಳಿಂದ ಮುಕ್ತರಾಗಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಲಲು ಸಾರ್ವಜನಿಕರನ್ನು ಪ್ರೋತ್ಸಾಹಿಸುವುದು ಮಣಿಪಾಲ್ ಆಸ್ಪತ್ರೆಯು ಈ ಕಲಾಕೃತಿಯ ಮೂಲಕ ಸಾರಲು ಹೊರಟಿರುವ ಸಂದೇಶವಾಗಿದೆ.

ಈ ಸೃಜನಾತ್ಮಕ ಉಪಕ್ರಮವನ್ನು ಇಬ್ಬರು ಹೆಸರಾಂತ ಕಲಾವಿದರು, ತಮ್ಮ ಪ್ರಭಾವಶಾಲಿ ಸ್ಪಾಟ್ ಆರ್ಟ್ ಸ್ಥಾಪನೆಗಳಿಗೆ ಹೆಸರುವಾಸಿಯಾಗಿರುವ ಬಾದಲ್ ನಂಜುಂಡಸ್ವಾಮಿ ಮತ್ತು ಹರಿಯಾಣದ 3D ಕಲಾ ತಜ್ಞ ಮುಖೇಶ್ ಕುಮಾರ್ ಮುನ್ನಡೆಸಿದ್ದಾರೆ. ಒಟ್ಟಾಗಿ, ಅವರು ಬೆಂಗಳೂರನ್ನು ಸಾರ್ವಜನಿಕ ಪಾಲ್ಗೊಳ್ಳುವಿಕೆಯ ರೋಮಾಂಚಕ ಕ್ಯಾನ್ವಾಸ್ ಆಗಿ ಪರಿವರ್ತಿಸುತ್ತಿದ್ದಾರೆ. ಬಾದಲ್ ರವರು ಒಂದು ಕಲಾಕೃತಿಯನ್ನು ಮತ್ತು ಉಳಿದೆಲ್ಲ ಕಲಾಕೃತಿಗಳನ್ನು ಪ್ರಾಧ್ಯಾಪಕರಾದ ಮುಖೇಶ್ ರಚಿಸಿದ್ದಾರೆ. ಆರೋಗ್ಯ ಮತ್ತು ಜೀವನಶೈಲಿಯ ಜಾಗೃತಿಗೆ ಒತ್ತು ನೀಡುವ ಪ್ರಬಲ ಸಂದೇಶದೊಂದಿಗೆ ಕಲಾಕೃತಿಯು ನಗರವನ್ನು ಪರಿವರ್ತಿಸುತ್ತಿದೆ.

Advertisement

ಮ್ಯೂರಲ್ ಕಲಾಕೃತಿಗಳನ್ನು ಪ್ರೆಸ್ಟೀಜ್ ಟೆಕ್ ಪಾರ್ಕ್‌ಗಳಿಂದ ಕಬ್ಬನ್ ಪಾರ್ಕ್ ಮತ್ತು ಚರ್ಚ್ ಸ್ಟ್ರೀಟ್‌ನಂತಹ ಸಾರ್ವಜನಿಕ ಸ್ಥಳಗಳನ್ನು ಒಳಗೊಂಡಂತೆ ಬೆಂಗಳೂರಿನಾದ್ಯಂತ 20 ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಕಲಾಕೃತಿಯು ಈ ಕೆಳಗಿನ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ:

ಮೆಟ್ರೋ ನಿಲ್ದಾಣಗಳು: ಕಬ್ಬನ್ ಪಾರ್ಕ್, ಇಂದಿರಾನಗರ, ಎಂಜಿ ರಸ್ತೆ, ಜೆಪಿ ನಗರ, ಬೆನ್ನಿಗಾನಹಳ್ಳಿ

ಸಾರ್ವಜನಿಕ ಸ್ಥಳಗಳು: ಲಾಲ್ ಬಾಗ್

ಮಾಲ್‌ಗಳು: ಮಂತ್ರಿ ಮಾಲ್

ಟೆಕ್ ಪಾರ್ಕ್‌ಗಳು: ಎಂಬೆಸಿ ಮಾನ್ಯತಾ (ಹೆಬ್ಬಾಳ), ಎಂಬಸಿ ಗಾಲ್ಫ್ ಲಿಂಕ್ (ದೊಮ್ಮಲೂರು), ಎಂಬಸಿ ಟೆಕ್ ವಿಲೇಜ್ (ಬೆಳ್ಳಂದೂರು) ಮತ್ತು ಐಟಿಪಿಎಲ್ (ವೈಟ್‌ಫೀಲ್ಡ್)

ಅಪಾರ್ಟ್‌ಮೆಂಟ್ ಸಂಕೀರ್ಣಗಳು: ಪ್ರೆಸ್ಟೀಜ್ ಟ್ರ್ಯಾಂಕ್ವಿಲಿಟಿ (ವೈಟ್‌ಫೀಲ್ಡ್), ಪೂರ್ವ ಫೌಂಟೇನ್ ಸ್ಕ್ವೇರ್ (ಮಾರತಹಳ್ಳಿ)

ಕಾಲೇಜು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಯೆಲಹಂಕ)

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ T1 & T2 (ಹೊರಗೆ)

ಈ ಕ್ರಮವು ಆರೋಗ್ಯ ರಕ್ಷಣೆಯೊಂದಿಗೆ ಸೃಜನಶೀಲತೆಯನ್ನು ಸಂಯೋಜಿಸುತ್ತದೆ. ಆರೋಗ್ಯಕರ ಭವಿಷ್ಯಕ್ಕಾಗಿ ಬೆಂಗಳೂರಿನ ಕಲಾತ್ಮಕ ಅಭಿಯಾನದಲ್ಲಿ ಭಾಗವಹಿಸಲು ಪ್ರತಿಯೊಬ್ಬರನ್ನು ಪ್ರೋತ್ಸಾಹಿಸಿ, ಸಾರ್ವಜನಿಕರ ಆರೋಗ್ಯ ಪ್ರಜ್ಞೆಯ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುವ ಗುರಿಯನ್ನು ಹೊಂದಿದೆ. ಈ ಮನಮೋಹಕ ಮ್ಯೂರಲ್ ಕಲಾಕೃತಿಗಳ ಮೇಲೆ ಒಂದು ಗಮನವನ್ನಿಡಿ ಮತ್ತು “ವೈಯಕ್ತಿಕ ಅನಾರೋಗ್ಯಕರ ಅಭ್ಯಾಸಗಳ ಬಂಧನದಿಂದ ಹೃದಯವನ್ನು ಮುಕ್ತಗೊಳಿಸುವ   ಪ್ರಯಾಣದಲ್ಲಿ ಸೇರಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next