ಕನ್ನಡ ಚಿತ್ರರಂಗದಲ್ಲಿ ಭೂಗತ ಲೋಕದ ಕಥೆಗಳಿಗೆ ಬರ ಇಲ್ಲ. ಅಂಡರ್‌ವರ್ಲ್ಡ್, ಮಾಫಿಯಾ ಲೋಕದ ಕಥಾಹಂದರ ಇಟ್ಟುಕೊಂಡು ಹೊಸ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಅದರ ಹೆಸರು “ಕ್ಯಾಪಿಟಲ್ ಸಿಟಿ’.
ಇನ್ಫಿನಿಟಿ ಕ್ರಿಯೆಷನ್ಸ್ ಲಾಂಛನದಡಿ 20 ನಿರ್ಮಾಪಕರು ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. “ಅಪ್ಪು ಪಪ್ಪು’, “ಮಸ್ತ್ ಮಜಾ ಮಾಡಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಆರ್. ಅನಂತರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಬಿಡುಗಡೆಗೊಂಡಿವೆ.
ಚಿತ್ರದ ಬಗ್ಗೆ ನಿರ್ದೇಶಕ ಅನಂತರಾಜು ಮಾತನಾಡುತ್ತ, “ಇದು ಬೆಂಗಳೂರು ಭೂಗತ ಜಗತ್ತಿನ ಸುತ್ತ ನಡೆಯುವ ಕಥೆ. ತೊಂದರೆಗೀಡಾದ ನಾಯಕ ಹೇಗೆ ತನ್ನ ಕಷ್ಟ ನಿಭಾಯಿಸಿಕೊಳ್ಳುತ್ತಾನೆ ಎನ್ನುವುದೇ ಕಥಾಹಂದರ. ಆ್ಯಕ್ಷನ್ ಪ್ರಧಾನವಾಗಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳು ಚಿತ್ರದಲ್ಲಿವೆ. ಚಿತ್ರದ ಕೆಲವು ನಿರ್ಮಾ ಪಕರು ಇದರಲ್ಲಿ ನಟಿಸಿರುವುದು ವಿಶೇಷ’ ಎಂದರು.
ಇದೊಂದು ರಿವೆಂಜ್ ಸ್ಟೋರಿ. ನಿಮಗೆ ತೊಂದರೆಯಾದಾಗ ನಿಮ್ಮನ್ನು ನೀವು ಹೇಗೆ ಕಾಪಾಡಿಕೊಳ್ಳುತ್ತೀರಾ ಎಂಬುದನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು ನಟ ರಾಜೀವ್ ರೆಡ್ಡಿ. ನಿರ್ಮಾಪಕರಾದ ಮಂಜುನಾಥ್, ಕರ್ನಲ್ ರಾಜೇಂದ್ರ, ಶಿವಪ್ಪ ಕುಡ್ಲೂರು, ಆ್ಯಂಟೋನಿ ರಾಜ್, ಕೃಷ್ಣಮೂರ್ತಿ ಅವರು ಚಿತ್ರದ ಬಗ್ಗೆ ಮಾತು ಹಂಚಿಕೊಂಡರು.
ಈ ಚಿತ್ರಕ್ಕೆ ಪ್ರೇರಣಾ ನಾಯಕ ನಟಿಯಾಗಿದ್ದಾರೆ. ಉಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ, ಕೆ.ಎಸ್. ಶ್ರೀಧರ್, ಮುಂತಾದ ಹಿರಿಯ ನಟರು ಚಿತ್ರದ ತಾರಾಬಳಗದಲ್ಲಿದ್ದಾರೆ.