Advertisement

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

08:55 AM Dec 28, 2024 | Team Udayavani |

ಬೆಂಗಳೂರು: ಪರಿಚಿತ ಸಿವಿಲ್‌ ಗುತ್ತಿಗೆದಾರನಿಗೆ ಟೀ ಕುಡಿಯಲು ಮನೆಗೆ ಕರೆದು ಹನಿಟ್ರ್ಯಾಪ್‌ ಮಾಡಿ ನಗದು, ಚಿನ್ನಾಭರಣ ದೋಚಿದ್ದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತುಂಗಾನಗರದ ಸಂತೋಷ್‌ (28), ಅಜಯ್‌ (25) ಮತ್ತು ಜಯರಾಜ್‌ (30) ಬಂಧಿತರು. ಪ್ರಕರಣದಲ್ಲಿ ನಯನಾ ಸೇರಿ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿಗಳು ಡಿ.9ರಂದು ಮಾಗಡಿ ರಸ್ತೆ ತುಂಗಾನಗರದ ಮನೆಯೊಂದರಲ್ಲಿ ಉಲ್ಲಾಳ ವಿನಾಯಕ ಲೇಔಟ್‌ ನಿವಾಸಿ ರಂಗನಾಥ (57) ಎಂಬುವವರನ್ನು ಬೆದರಿಸಿ ನಗದು ಹಾಗೂ ಚಿನ್ನಾಭರಣ ಸುಲಿಗೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಏನಿದು ಪ್ರಕರಣ?: ಸಿವಿಲ್‌ ಗುತ್ತಿಗೆದಾರ ರಂಗನಾಥ್‌ಗೆ ಕಳೆದ 6 ತಿಂಗಳ ಹಿಂದೆ ಶಿವು ಎಂಬ ಸ್ನೇಹಿತನ ಮೂಲಕ ನಯನಾ ಪರಿಚಯವಾಗಿದೆ. ಬಳಿಕ ಈ ನಯನಾ ತನ್ನ ಮಗುವಿಗೆ ಹುಷಾರಿಲ್ಲ, ಆಸ್ಪತ್ರೆಗೆ ತೋರಿಸಬೇಕು ಎಂದು ರಂಗನಾಥ ಬಳಿ ಫೋನ್‌ ಪೇ ಮೂಲಕ ಎರಡು ಬಾರಿ 5 ಸಾವಿರ ರೂ. ಹಾಗೂ ಮತ್ತೂಮ್ಮೆ 4 ಸಾವಿರ ರೂ. ಪಡೆದುಕೊಂಡಿದ್ದಳು.

ಬಳಿಕ ಪ್ರತಿದಿನ ರಂಗನಾಥಗೆ ಕರೆ ಮಾಡಿ “ಮನೆಗೆ ಬನ್ನಿ’ ಎಂದು ಕರೆಯುತ್ತಿದ್ದಳು. ಆದರೆ, ರಂಗನಾಥ ಹೋಗಿರಲಿಲ್ಲ. ಇತ್ತೀಚೆಗೆ ಒಂದು ದಿನ ರಾತ್ರಿ ರಂಗನಾಥಗೆ ಕರೆ ಮಾಡಿ ಮನೆಗೆ ಬರುವಂತೆ ಕರೆದಿದ್ದಾಳೆ. ಬರುವುದಾಗಿ ಹೇಳಿದ್ದ ರಂಗನಾಥ ಬಳಿಕ ಹೋಗಿಲ್ಲ. ಈ ನಡುವೆ ರಂಗನಾಥ ನೆಲಗದರನಹಳ್ಳಿಯಲ್ಲಿರುವ ಅಳಿಯನ ಮನೆ ನವೀಕರಣ ಕೆಲಸ ಕೈಗೆತ್ತಿಕೊಂಡಿದ್ದರು. ಹೀಗಾಗಿ ರಂಗನಾಥ ಡಿ.9ರಂದು ಬೆಳಗ್ಗೆ ಮಾಗಡಿ ರಸ್ತೆಯ ತುಂಗಾನಗರದ ಮಾರ್ಗವಾಗಿ ನೆಲಗದರನಹಳ್ಳಿ ಕಡೆಗೆ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದಾರೆ.

ಅದೇ ವೇಳೆ ತುಂಗಾನಗರ ಕ್ರಾಸ್‌ನ ಬಳಿ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದ ನಯನಾ, ಸಾರ್‌ ಎಂದು ಕೂಗಿದ್ದಾಳೆ. ಈ ವೇಳೆ ರಂಗನಾಥ ದ್ವಿಚಕ್ರ ವಾಹನ ನಿಲ್ಲಿಸಿದ್ದಾರೆ. ಬಳಿಕ ನಯನಾ, “ನಮ್ಮ ಮನೆ ಇಲ್ಲೇ ಹತ್ತಿರದಲ್ಲಿದೆ. ಟೀ ಕುಡಿದು ಹೋಗಿ’ ಎಂದು ಆಹ್ವಾನಿಸಿದ್ದಾಳೆ. ಅದಕ್ಕೆ ಒಪ್ಪಿದ ರಂಗನಾಥ ಆಕೆಯ ಮನೆಗೆ ತೆರಳಿದ್ದಾರೆ. ಬಳಿಕ ಇಬ್ಬರು ಕುಳಿತು ಮಾತುಕತೆಯಲ್ಲಿ ತೊಡಗಿದ್ದಾರೆ.

Advertisement

ಕ್ರೈಂ ಪೊಲೀಸರ ಸೋಗಿನಲ್ಲಿ ದಾಳಿ: ಅದೇ ವೇಳೆ ಮೂವರು ಆರೋಪಿಗಳು ಕ್ರೈಂ ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ್ದಾರೆ. ಈ ವೇಳೆ “ನೀವು ಮನೆಯಲ್ಲಿ ವ್ಯಭಿಚಾರ ಮಾಡುತ್ತಿದ್ದೀರಾ, ಕೆಳಗೆ ಜೀಪಿನಲ್ಲಿ ಮೇಡಂ ಇದ್ದಾರೆ’ ಎಂದು ರಂಗನಾಥ್‌ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ರಂಗನಾಥ್‌ ಬಟ್ಟೆ ಬಿಚ್ಚಿಸಿ ಮೊಬೈಲ್‌ನಲ್ಲಿ ಫೋಟೋ ತೆಗೆದಿದ್ದಾರೆ. “2 ಲಕ್ಷ ರೂ. ಕೊಟ್ಟರೆ ಇಲ್ಲೇ ಬಿಟ್ಟು ಹೋಗುತ್ತೇವೆ. ಇಲ್ಲವಾದರೆ, ನೀನು ಇವಳೊಂದಿಗೆ ಅಕ್ರಮ ಸಂಬಂಧ ಹೊಂದಿರುವೆ ಎಂದು ನಿನ್ನ ಹೆಂಡತಿ ಮತ್ತು ಮಕ್ಕಳಿಗೆ ತಿಳಿಸುತ್ತೇವೆ’ ಎಂದು ಹೆದರಿಸಿದ್ದಾರೆ ಎಂದು ರಂಗನಾಥ್‌ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಇದರಿಂದ ಹೆದರಿದ ರಂಗನಾಥ್‌, ಕೊರಳಲ್ಲಿದ್ದ ಚಿನ್ನದ ಸರ, ಜೇಬಿನಲ್ಲಿದ್ದ 29 ಸಾವಿರ ರೂ. ನಗದು ಹಾಗೂ ಮೊಬೈಲ್‌, 2 ಚಿನ್ನದ ಉಂಗುರ ಕಿತ್ತುಕೊಂಡಿದ್ದಾರೆ. ಬಳಿಕ ಮತ್ತೂಬ್ಬ ಫೋನ್‌ ಪೇ ಮೂಲಕ 26 ಸಾವಿರ ರೂ. ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಆಟೋ ಹತ್ತಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಮಗು ಜತೆ ಮನೆಗೆ ಬರುವುದಾಗಿ ಬೆದರಿಕೆ: ಈ ವೇಳೆ ನಯನಾ ಸಹ ದ್ವಿಚಕ್ರ ವಾಹನದಲ್ಲಿ ಆ ಆಟೋ ಹಿಂಬಾಲಿಸಿದ್ದಾಳೆ. ಅಲ್ಲದೆ, ಕೆಲ ಹೊತ್ತಿನ ಬಳಿಕ ರಂಗನಾಥ್‌ಗೆ ಕರೆ ಮಾಡಿ, ಆರೋಪಿಗಳು ನಾಪತ್ತೆಯಾದರು ಎಂದಿದ್ದಾಳೆ. ಆಗ ರಂಗನಾಥ, ಘಟನೆ ಸಂಬಂಧ ಪೊಲೀಸ್‌ ಠಾಣೆಗೆ ದೂರು ನೀಡೋಣ ಬಾ ಎಂದು ಕರೆದಿದ್ದಾರೆ. ಆಗ ನಯನಾ, ಪೊಲೀಸ್‌ ದೂರು ನೀಡಿದರೆ, ನನ್ನ ಮಗುವನ್ನು ನಿನ್ನ ಮನೆಗೆ ಕರೆತಂದು ನನಗೂ ನಿನಗೂ ಸಂಬಂಧವಿದೆ ಎಂದು ಹೇಳುವುದಾಗಿ ಹೆದರಿಸಿದ್ದಾಳೆ. ಅದರಿಂದ ಭಯಗೊಂಡ ರಂಗನಾಥ ಮನೆಗೆ ತೆರಳಿದ್ದಾರೆ. ಬಳಿಕ ವಕೀಲರೊಂದಿಗೆ ಚರ್ಚಿಸಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next