Advertisement

Christmas: ಸಿಲಿಕಾನ್‌ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

11:44 AM Dec 26, 2024 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮಂಗಳವಾರ ಕ್ರಿಸ್‌ಮಸ್‌ ಸಂಭ್ರಮ ಕಳೆಗಟ್ಟಿತ್ತು. ನಗರದೆಲ್ಲೆಡೆ ಸಾಂತಾಕ್ಲಾಸ್‌ ವೇಷ ಧರಿಸಿಕೊಂಡು ಪರಸ್ಪರ ಕ್ರಿಸ್ಮಸ್‌ ಕಾರ್ಡ್‌, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್‌ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ವಿಜೃಂಭಣೆಯ ಕ್ರಿಸ್‌ಮಸ್‌ ಆಚರಿಸಲಾಯಿತು.

Advertisement

ಬೆಂಗಳೂರಿನ ಪ್ರಮುಖ ಚರ್ಚ್‌ಗಳು, ಕ್ರಿಶ್ಚಿಯನ್‌ ಸಮುದಾಯದ ಮನೆಗಳು, ಶಾಲಾ-ಕಾಲೇಜುಗಳಲ್ಲಿ ಇರಿಸಿದ್ದ ಏಸುಕ್ರಿಸ್ತ ಜನಿಸಿದ ಗೋದಲಿ (ಕ್ರಿಬ್‌), ಕ್ರೈಸ್ತ, ಮೇರಿ, ಜೋಸೆಫ್‌, ತ್ರಿ ಕಿಂಗ್‌, ದೇವದೂತರು ಸೇರಿದಂತೆ ಹಲವಾರು ಬೊಂಬೆಗಳು ಕಣ್ಮನಸೂರೆಗೊಳ್ಳುವಂತೆ ಮಾಡಿದವು. ಚರ್ಚ್‌, ಸಾರ್ವ ಜನಿಕ ಸ್ಥಳಗಳು, ಮಾಲ್‌ಗ‌ಳು, ಚಿನ್ನ, ಬಟ್ಟೆ ಮಳಿ ಗೆಯ ಮುಂದೆ ಕ್ರಿಸ್‌ಮಸ್‌ ಟ್ರೀಗೆ ವಿದ್ಯುತ್‌ ಅಲಂಕಾರ, ಗ್ರೇಫ್ಸ್, ಬೆಲ್ಸ್‌ ಸೇರಿ ವಿವಿಧ ಮಾದರಿ ಯಲ್ಲಿ ಅಲಂಕರಿಸಿ ಸಂಭ್ರಮಿಸಿದರೆ, ಪ್ರಮುಖ ಬೀದಿಗಳು, ಮಾಲ್‌ಗ‌ಳು, ಅಂಗಡಿ-ಮುಂಗಟ್ಟು ಬಳಿ ಉಡುಗೊರೆಗಳ ಬುಟ್ಟಿ ಹೊತ್ತ ಬಿಳಿ ಗಡ್ಡದ ಅಜ್ಜ ಸಾಂಟಾ ಕ್ಲಾಸ್‌ ಮಕ್ಕಳಿಗೆ ಉಡುಗೊರೆ ನೀಡಿದರು. ಚರ್ಚ್‌ಗ ಳಲ್ಲಿ ಕ್ರೈಸ್ತ ರ ಸಾಮೂಹಿಕ ಪ್ರಾರ್ಥನೆ, ಸಮೂಹಗಾನ, ಕ್ಯಾರೋಲ್‌ಗ‌ಳು ಹಬ್ಬದ ರಂಗನ್ನು ಇಮ್ಮಡಿಗೊಳಿಸಿತು.

ಚರ್ಚ್‌ಗಳಲ್ಲಿ ಪೂಜಾ ಕೈಂಕರ್ಯ: ನಗರದ ಚರ್ಚ್‌ ಗಳಲ್ಲಿ ಬುಧವಾರ ಬೆಳಗ್ಗಿನಿಂದಲೇ ಆರಾಧನಾ ವಿಧಿಗಳು ಆರಂಭವಾದವು. ಕ್ರಿಸ್‌ಮ ಸ್‌ ಈವ್‌ ಆಚರಣೆ ಭಾಗವಾಗಿ ರಾತ್ರಿ ಚರ್ಚ್‌ಗಳಲ್ಲಿ ಗೋದಲಿ ಪೂಜೆ, ಕ್ಯಾರಲ್ಸ್‌, ಬೈಬಲ್‌ ಪಠಣ ಮಾಡಲಾಯಿತು. ರಾತ್ರಿ 12 ಗಂಟೆಗೆ ಸಾಮೂಹಿಕ ಪ್ರಾರ್ಥನೆ ನಡೆದವು. ಕ್ರೆ„ಸ್ತ ಸಮುದಾಯವು ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸುತ್ತಿದ್ದರೆ, ಬೈಬಲ್‌ನ 2ನೇ ಅಧ್ಯಾಯ ಲೂಕನ ಬರೆದಿರುವ ಶುಭ ಸಂದೇಶಗಳನ್ನು ಮಕ್ಕಳು ಸಾರ್ವಜನಿಕವಾಗಿ ಪಠಿಸಿದರು. ಏಸುಕ್ರಿಸ್ತನ ಜನನ, ಮಹತ್ವವನ್ನು ಸ್ಮರಿಸಿದರು. ತಡರಾತ್ರಿ ಚರ್ಚ್‌ಗಳಲ್ಲಿ ಆರ್ಚ್‌ ಬಿಷಪ್‌ ವಿಶೇಷ ಪ್ರಾರ್ಥನೆಯನ್ನು ಬೋಧಿ ಸಿದರು. ಮಹಿಳೆಯರು ಹಾಗೂ ಮಕ್ಕಳಿಂದ ಜೀಸಸ್‌ ಅವರ ಜೀವನ ಕುರಿತ ನಾಟಕ ಪ್ರದರ್ಶನ, ಸಂಗೀತ ಕಾರ್ಯಕ್ರಮ ನಡೆದರೆ, ಈ ಸಮುದಾಯದ ಕೆಲವರು ಹಬ್ಬದ ಅಂಗವಾಗಿ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಆಹಾರ ಸೇರಿದಂತೆ ಇತರೆ ಸೇವೆ ಕಾರ್ಯ ನಡೆಸಿದರು.

ಪ್ರಮುಖ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ: ಚಾಮರಾಜಪೇಟೆಯ ಸೆಂಟ್‌ ಲ್ಯೂಕ್ಸ್‌ ಚರ್ಚ್‌ ಸೇರಿದಂತೆ ನಗರದ ಬಹುತೇಕ ಚರ್ಚ್‌ಗಳಲ್ಲಿ ಪ್ರಾರ್ಥನೆ ಮಾಡಲು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಪರಸ್ಪರ ಶುಭ ಕೋರಿದರು. ಅಶೋಕ ನಗರದ ಸೇಕ್ರೆಡ್‌ ಹಾರ್ಟ್ಸ್ ಚರ್ಚ್‌, ಪ್ರಿಮ್‌ರೋಸ್‌ ರಸ್ತೆಯ ಮಾಥೋìಮಾ ಚರ್ಚ್‌, ಹೋಲಿ ಟ್ರಿನಿಟಿ ಚರ್ಚ್‌, ಬ್ರಿಗೇಡ್‌ ರಸ್ತೆಯ ಸೆಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಹಡ್ಸನ್‌ ವೃತ್ತದ ಹಡ್ಸನ್‌ ಮೆಮೊರಿಯಲ್‌ ಚರ್ಚ್‌, ಶಿವಾಜಿನಗರ ಸೆಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಎಂ.ಜಿ. ರಸ್ತೆಯ ಸೆಂಟ್‌ ಮಾರ್ಕಸ್‌ ಕ್ಯಾಥೆಡ್ರಲ್‌ ಚರ್ಚ್‌, ಕ್ಲೇವ್‌ ಲ್ಯಾಂಡ್‌ ಟೌನ್‌ನಲ್ಲಿನ ಸೆಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥಡ್ರಲ್‌, ಸೆಂಟ್‌ ಜಾನ್ಸ್‌ ಚರ್ಚ್‌, ವಿವೇಕ ನಗರದ ಇನ್‌ ಫಂಟ್‌ ಜೀಸಸ್‌ ಚರ್ಚ್‌, ಟಾಸ್ಕ ರ್‌ಟೌನ್‌ ಸೆಂಟ್‌ ಆ್ಯಂಡ್ರೂಸ್‌ ಚರ್ಚ್‌, ಹೊಸೂರು ರಸ್ತೆಯ ಆಲ್‌ ಸೈಂಟ್ಸ್‌ ಚರ್ಚ್‌, ಹೆಬ್ಟಾಳದ ಬೆಥೆಲ್‌ ಅಸೆಂಬ್ಲಿ ಆಫ್‌ ಗಾಡ್‌, ಎಂ.ಜಿ. ರಸ್ತೆಯ ಈಸ್ಟ್‌ ಪರೇಡ್‌, ಸರ್ಜಾಪುರ ರಸ್ತೆಯ ಮೌಂಟ್‌ ಕಾರ್ಮೆಲ್‌ ಚರ್ಚ್‌, ಹೋಲಿ ಗೋಸ್ಟ್‌ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪ್ರಾರ್ಥನೆ ಜರುಗಿದವು.

ಕೇಸ್‌ ಸವಿದು ಸಂಭ್ರಮ: ಕ್ರಿಸ್‌ಮಸ್‌ಗಾಗಿ ವಿಶೇಷವಾಗಿ ತಯಾರಿಸಿರುವ ಬಾಯಲ್ಲಿ ನೀರೂರುವ ವಿವಿಧ ಸುವಾಸನೆ ಭರಿತ ಕೇಕ್‌ಗಳ ಮಾರಾಟ ಹಾಗೂ ಖರೀದಿ ಭರಾಟೆ ಜೋರಾಗಿತ್ತು. ವೈವಿಧ್ಯಮಯ ಕೇಕ್‌, ಚಾಕ್ಲೆ ಟ್‌ಗಳನ್ನು ಸವಿದು ಬೆಂಗಳೂರಿಗರು ಕ್ರಿಸ್‌ಮಸ್‌ ಖುಷಿ  ಹಂಚಿಕೊಂಡರು. ವಿವಿಧ ಮಾದರಿಯ ಹಣ್ಣು, ಫ್ಲಮ್ ಕೇಕ್‌, ಬೃಹತ್‌ ಆಕಾರದ ಕೇಕ್‌ಗಳನ್ನು ಪರಸ್ಪರ ಹಂಚುತ್ತಿರುವುದು ಕಂಡು ಬಂತು. ನಗರದ ಹೋಟೆಲ್‌, ರೆಸ್ಟೋರೆಂಟ್‌ಗಳು ಕ್ರಿಸ್‌ ಮಸ್‌ ಆಹಾರ ಉತ್ಸವದಲ್ಲಿ ವಿಶೇಷ ಮೆನು ಸಿದ್ಧಪಡಿಸಿದ್ದು, ರಜಾ ದಿನವಾಗಿದ್ದ ಹಿನ್ನೆಲೆಯಲ್ಲಿ ಇಲ್ಲಿ ನಾ ಮುಂದು, ತಾ ಮುಂದು ಎಂಬಂತೆ ಕಿಕ್ಕಿರಿದ ಗ್ರಾಹಕರು ದಂಡೇ ಬಗೆ ಬಗೆಯ ಆಹಾರಗಳ ರುಚಿ ಸವಿದರು.

Advertisement

ಅಲಂಕಾರಗೊಂಡ ನಗರದ ರಸ್ತೆಗಳು:

ಕೇಕ್‌ಹೌಸ್‌ಗಳು, ಹೋಟೆಲ್‌ಗ‌ಳು, ಬ್ರಿಗೇಡ್‌ ರಸ್ತೆ, ಎಂ.ಜಿ.ರಸ್ತೆ, ಚರ್ಚ್‌ಸ್ಟ್ರೀಟ್‌, ಕೋರ ಮಂಗಲ ಸೇರಿ ನಗರದ ಪ್ರಮುಖ ರಸ್ತೆಯುದ್ದಕ್ಕೂ ವಿವಿಧ ಬಗೆಯ ಆಕರ್ಷಕ ದೀಪಾಲಂಕಾರ ದೊಂದಿಗೆ ಕಂಗೊಳಿಸುತ್ತಿರುವ ದೃಶ್ಯ ಕಣ್ಮನಸೂರೆಗೊಂಡಿತು. ಒರಾಯನ್‌, ಗೋಪಾಲನ್‌, ಸೆಂಟ್ರಲ್‌ ಮಾಲ್‌, ಮಂತ್ರಿಮಾಲ್‌, ಗರುಡ ಮಾಲ್‌ ಸೇರಿದಂತೆ ನಗರದ ಬಹುತೇಕ ಮಾಲ್‌ಗ‌ಳು ಕ್ರಿಸ್‌ಮಸ್‌ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತ್ತಿದ್ದವು. ಆಭರಣ ಮಳಿಗೆಗಳು , ಪ್ರಸಿದ್ಧ ವಸ್ತ್ರದ ಮಳಿಗೆಗಳ ಪ್ರವೇಶದ್ವಾರದಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್‌ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಗಂಟೆಗಳು ಹಾಗೂ ಸಾಂತಾ ಕ್ಲಾಸ್‌ನ ಪ್ರತಿರೂಪಗಳು ಕ್ರಿಸ್‌ಮಸ್‌ ಮೆರುಗನ್ನು ಹೆಚ್ಚಿಸಿತು. ಮಾರುಕಟ್ಟೆಗಳಲ್ಲಿ ಕ್ರಿಸ್‌ಮಸ್‌ಗಾಗಿ ಉಡುಗೊರೆ ಹಾಗೂ ಅಲಂಕಾರಿಕ ವಸ್ತುಗಳ ವಹಿವಾಟು ಹೆಚ್ಚಾಗಿ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿತು.

ಕ್ರಿಸ್‌ಮಸ್‌ ಟ್ರೀ ಮುಂದೆ ಸೆಲ್ಫಿ ಸಂಭ್ರಮ

ಆಸ್ಟಿನ್‌ಟೌನ್‌, ಕಾಕ್ಸ್‌ಟೌನ್‌ ಸೇರಿದಂತೆ ಕ್ರಿಶ್ಚಿಯನ್‌ ಸಮುದಾಯ ಗಳು ಹೆಚ್ಚಾಗಿ ನೆಲೆಸಿರುವ ಕೆಲ ಪ್ರದೇಶಗಳ ಗಲ್ಲಿ-ಗಲ್ಲಿಗಳಲ್ಲೂ ಕ್ರಿಸ್‌ಮಸ್‌ ಟ್ರೀ, ವೈವಿಧ್ಯಮಯ ಕೇಕ್‌, ಮಕ್ಕಳೊಂದಿಗೆ ಆಟವಾಡಲು ಸಾಂತಾ ಕ್ಲಾಸ್‌, ಜಗಮಗಿಸುವ ಲೈಟಿಂಗ್‌, ಆಕಾಶದಿಂದ ಧರೆಗಿಳಿದಂತೆ ಕಾಣುವ ಹ್ಯಾಗಿಂಗ್‌ ನಕ್ಷತ್ರಗಳು ಪ್ರಮುಖ ಆಕರ್ಷಣೆಯಾಗಿತ್ತು. ಇಲ್ಲಿ ಕ್ರಿಸ್‌ಮಸ್‌ ಟ್ರೀ ಮುಂದೆ ಯುವತಿಯರು ಪೈಪೋಟಿಯಲ್ಲಿ ಸೆಲ್ಫಿà ಕ್ಲಿಕ್ಕಿಸಿಕೊಂಡರೆ, ಸ್ನೇಹಿತರು, ಕುಟುಂಬಸ್ಥರ ಜೊತೆಗಿನ ಹಬ್ಬದ ಸಂಭ್ರದ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next