Advertisement

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

10:21 AM Dec 31, 2024 | Team Udayavani |

ಬೆಂಗಳೂರು: ಮದ್ಯ ರಾತ್ರಿ ಬೈಕ್‌ ಕಳವು ಮಾಡಲು ಬಂದಿದ್ದ ಕಳ್ಳನನ್ನು ಮಾಲೀಕರೇ ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಜೆ.ಪಿ.ನಗರದಲ್ಲಿ ನಡೆದಿದೆ.

Advertisement

ಯಶವಂತ್‌ ಎಂಬಾತನ್ನು ಬಂಧಿಸಲಾಗಿದೆ. ಈತನ ಸಹಚರ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ಜಲಮಂಡಳಿ ಅಧಿಕಾರಿ ರಾಕೇಶ್‌ ಯಾದವ್‌ ಎಂಬುವರು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಶನಿವಾರ ತಡರಾತ್ರಿ 12.30ರ ಸುಮಾರಿಗೆ ಯಶವಂತ್‌ ತನ್ನ ಸಹಚರರ ಜತೆ ಬೈಕ್‌ ಕಳವು ಮಾಡಲು ಜೆ.ಪಿ.ನಗರದ 1ನೇ ಹಂತದ 34ನೇ ಮುಖ್ಯರಸ್ತೆಗೆ ಬಂದಿದ್ದು, ಯಮಹಾ ಬೈಕ್‌ ಕಳವು ಮಾಡಲು ಯತ್ನಿಸಿದ್ದಾರೆ. ಆಗ ದೂರುದಾರ ರಾಕೇಶ್‌ ಯಾದವ್‌ ಪತ್ನಿ ಕಿಟಕಿ ಮೂಲಕ ನೋಡಿ, ಪತಿ ರಾಕೇಶ್‌ಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚರಗೊಂಡ ರಾಕೇಶ್‌, ಕಳ್ಳ ಕಳ್ಳ ಎಂದು ಕೂಗಿಕೊಂಡು ಮನೆಯಿಂದ ಹೊರಗಡೆ ಬಂದಿದ್ದಾರೆ. ಆದರೂ  ಆರೋಪಿಗಳು ಬೈಕ್‌ ಸ್ಟಾರ್ಟ್‌ ಮಾಡಿಕೊಂಡು ಮುಂದೆ ಸಾಗಿದ್ದರು. ಬಳಿಕ ಬೈಕ್‌ನಲ್ಲಿ ಸುಮಾರು ಒಂದು ಕಿಲೋ ಮೀಟರ್‌ವರೆಗೂ ಆರೋಪಿಗಳ ಹಿಂಬಾಲಿಸಿದ ರಾಕೇಶ್‌, ಸ್ಥಳೀಯರ ನೆರವಿನೊಂದಿಗೆ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಆತನನ್ನು ಮರಕ್ಕೆ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಜೆ.ಪಿ.ನಗರ ಠಾಣೆಯ ಹೊಯ್ಸಳ ಪೊಲೀಸರು ಆರೋಪಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ಬೈಕ್‌ ಅನ್ನು ರಾಕೇಶ್‌ ಅವರಿಗೆ ತಾಯಿ ಗಿಫ್ಟ್ ಆಗಿ ನೀಡಿದ್ದರು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next