Advertisement

ನಾಲ್ಕನೇ ಅಭ್ಯರ್ಥಿ ಆಟ; ಜೆಡಿಎಸ್‌ಗೆ ಕಾಂಗ್ರೆಸ್‌ ಶಾಕ್‌, 2ನೇ ಅಭ್ಯರ್ಥಿ ಕಣಕ್ಕೆ

12:45 AM May 31, 2022 | Team Udayavani |

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆಯೆಂಬಂತೆ ಕಾಂಗ್ರೆಸ್‌ ಜೈರಾಂ ರಮೇಶ್‌ ಜತೆ 2ನೇ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿ ಖಾನ್‌ ಅವರನ್ನೂ ಕಣಕ್ಕಿಳಿಸಿ ಜೆಡಿಎಸ್‌ಗೆ “ಶಾಕ್‌’ ನೀಡಿದೆ. ಹಾಗೆಯೇ ಬಿಜೆಪಿ ಕೂಡ ಲೆಹರ್‌ ಸಿಂಗ್‌ ಅವರಿಗೆ ಮೂರನೇ ಅಭ್ಯರ್ಥಿಯಾಗಿ ಟಿಕೆಟ್‌ ನೀಡಿದ್ದು, ಚುನಾವಣೆ ಈಗ ರಂಗು ಪಡೆದಿದೆ.

Advertisement

ಈ ಮಧ್ಯೆ ಸೋಮವಾರ ರಾತ್ರಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಪಕ್ಷದ ನಾಯಕರ ಸಭೆ ನಡೆಸಿ ಕಾಂಗ್ರೆಸ್‌ನ ನಡೆಗೆ ಪ್ರತಿತಂತ್ರ ರೂಪಿಸುವ ಬಗ್ಗೆ ಚರ್ಚಿಸಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್‌ನ 2ನೇ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದವರನ್ನೇ ಕಣಕ್ಕಿಳಿಸಿ ಜೆಡಿಎಸ್‌ ಬೆಂಬಲದ ನಿರೀಕ್ಷೆ ಮಾಡುವುದು; ಒಂದೊಮ್ಮೆ ಬಿಜೆಪಿ ಬೆಂಬಲ ಪಡೆಯಲು ಜೆಡಿಎಸ್‌ ಮುಂದಾದರೆ ಅದನ್ನೇ “ಅಸ್ತ್ರ’ವಾಗಿಸಿಕೊಳ್ಳಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರ್ಯತಂತ್ರ ರೂಪಿಸಿದ್ದಾರೆ.

ಈ ಹಿಂದೆ ದೇವೇಗೌಡರು ಅವಿರೋಧವಾಗಿ ಆಯ್ಕೆ ಯಾಗಲು ಕಾಂಗ್ರೆಸ್‌ ಸಹಕಾರ ನೀಡಿತ್ತು. ಆಗ, ಮುಂದಿನ ದಿನಗಳಲ್ಲಿ ಅಗತ್ಯಬಿದ್ದರೆ ಸಹಕಾರ ನೀಡುವುದಾಗಿ ದೇವೇ ಗೌಡರು ತಿಳಿಸಿದ್ದರು. ಈಗ ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸಿದ್ದು, ಜೆಡಿಎಸ್‌ ಬೆಂಬಲಿಸಲಿ ಎಂಬುದು ಕಾಂಗ್ರೆಸ್‌ ನಾಯಕರ ವಾದವಾಗಿದೆ.

ಕುದುರೆ ವ್ಯಾಪಾರದ ಆತಂಕ
ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ವಾಗಿದ್ದು, ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್‌, ನಟ ಜಗ್ಗೇಶ್‌ ಮತ್ತು ಲೆಹರ್‌ ಸಿಂಗ್‌ ನಾಮಪತ್ರ ಸಲ್ಲಿಸುವುದು ಖಚಿತ. ಇದಕ್ಕಾಗಿ ಬಿಜೆಪಿ ವರಿಷ್ಠರು ಸೋಮವಾರ ರಾತ್ರಿ ವೇಳೆಗೆ ಲೆಹರ್‌ ಸಿಂಗ್‌ಗೆ ಟಿಕೆಟ್‌ ನೀಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ 3ನೇ ಅಭ್ಯರ್ಥಿಯ ಕುತೂಹಲಕ್ಕೆ ತೆರೆ ಎಳೆದರು. ಬಿಜೆಪಿಯ ಮೂರನೇ ಅಭ್ಯರ್ಥಿಯ ಜತೆಗೆ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣಕ್ಕಿಳಿದರೆ ಅಥವಾ ಬೇರೊಬ್ಬರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದರೆ “ಅಡ್ಡ ಮತದಾನ’ ಕುದುರೆ ವ್ಯಾಪಾರ ನಡೆಯುವ  ಆತಂಕವೂ ಇದೆ. ಹೀಗಾಗಿ ಎಲ್ಲ ಪಕ್ಷಗಳು ಕಾದು ನೋಡುವ ತಂತ್ರ ಅನುಸರಿಸುತ್ತಿವೆ.

Advertisement

ಸಿದ್ದು ಕಾರ್ಯತಂತ್ರ
ದೇವೇಗೌಡರು ರಾಜ್ಯಸಭೆ ಚುನಾವಣೆ ಸಂಬಂಧ ಸೋನಿಯಾ ಗಾಂಧಿ ಜತೆ ಚರ್ಚಿಸಿದ್ದರು. ಆಗ ಸೋನಿಯಾ ಈ ಬಗ್ಗೆ ಕೆ.ಸಿ. ವೇಣುಗೋಪಾಲ್‌ ಮತ್ತು ರಣದೀಪ್‌ಸಿಂಗ್‌ ಸುಜೇìವಾಲಾ ಜತೆ ಮಾತನಾಡುವಂತೆ ಸೂಚಿಸಿದ್ದರು. ಇದರ ನಡುವೆ ಕುಪೇಂದ್ರ ರೆಡ್ಡಿ ಅವರು ಕಾಂಗ್ರೆಸ್‌ನ ಸಹಕಾರ ಬಯಸಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಮತ್ತು ಬಿ.ಕೆ. ಹರಿಪ್ರಸಾದ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.

ಆದರೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸೋಣ, ಜೆಡಿಎಸ್‌ನ ಅಧಿಕೃತ ಅಭ್ಯರ್ಥಿಗೆ ಬೆಂಬಲ ನೀಡುವುದು ಬೇಡ. ನಮ್ಮ ಮುಸ್ಲಿಂ ಅಭ್ಯರ್ಥಿಗೆ ಅವರೇ ಬೆಂಬಲ ಕೊಡಲಿ, ಇಲ್ಲವೇ ಬಿಜೆಪಿ ಬೆಂಬಲದೊಂದಿಗೆ ಕಣಕ್ಕಿಳಿಯಲಿ. ಇದರಿಂದ ಬೇರೆಯದೇ ಸಂದೇಶ ರವಾನೆಯಾಗುತ್ತದೆ. ರಾಜಕೀಯವಾಗಿ ಇದು ಅಗತ್ಯ ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೀಗಾಗಿ ಮುಸ್ಲಿಂ ಸಮುದಾಯದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ನಡುವೆ ಜೈರಾಂ ರಮೇಶ್‌ ಅವರನ್ನು ಅಭ್ಯರ್ಥಿಯಾಗಿಸಿದ ಬಗ್ಗೆ ಕಾಂಗ್ರೆಸ್‌ನಲ್ಲಿ ಯಾರಿಗೂ ಇಷ್ಟವಿಲ್ಲ, ಹೈಕಮಾಂಡ್‌ ಬಲವಂತಕ್ಕೆ ಒಪ್ಪಿದ್ದಾರೆ. ರಾಜ್ಯದಿಂದಲೇ ಒಬ್ಬರನ್ನು ಆಯ್ಕೆ ಮಾಡಬಹುದಿತ್ತು. ಈ ಬಗ್ಗೆ ರಾಜ್ಯ ನಾಯಕರಿಗೆ ಅಧಿಕಾರ ಕೊಡಬಹುದಿತ್ತು ಎಂಬ ಮಾತುಗಳಿವೆ. ಜೈರಾಂ ರಮೇಶ್‌ ಅವರ ನಾಮಪತ್ರ ಸಲ್ಲಿಕೆಗೆ ರಾಜ್ಯದ ನಾಯಕರು ಸೋಮವಾರ ಒಲ್ಲದ ಮನಸ್ಸಿನಿಂದಲೇ ಬಂದಿದ್ದರು ಎನ್ನಲಾಗಿದೆ.

ಈ ನಡುವೆ ಜೈರಾಂ ರಮೇಶ್‌ ಅವರ ಕೊಡುಗೆ ಏನು ಎಂದು ಸುದರ್ಶನ್‌ ಕೇಳಿರುವ ಬಗ್ಗೆ ಪ್ರತಿಕಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, “ಈ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಹೇಳುತ್ತೇನೆ’ ಎಂದಿದ್ದಾರೆ. ರಾಜ್ಯಸಭೆಗೆ ಎರಡನೇ ಅಭ್ಯರ್ಥಿ ಕಣಕ್ಕಿಳಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮದೂ ಕೆಲವು ಲೆಕ್ಕಾಚಾರಗಳಿವೆ. ಎಲ್ಲರಿಗೂ ಹೆಚ್ಚುವರಿ ಅಭ್ಯರ್ಥಿ ಗೆಲ್ಲಿಸಲು ಮತಗಳ ಕೊರತೆ ಇದೆ. ನಾವು ಕಳೆದ ಬಾರಿ ಬಹಳ ಗೌರವದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ನಾವು ಬೆಂಬಲ ಕೇಳುವ ವಿಚಾರವಾಗಿ ಏನನ್ನೂ ಹೇಳುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಬಿಜೆಪಿಯಲ್ಲೂ ಎರಡನೇ ಅಭ್ಯರ್ಥಿ ಜಗ್ಗೇಶ್‌ಗೆ ಟಿಕೆಟ್‌ ನೀಡಿರುವ ಬಗ್ಗೆ ಸ್ಥಳೀಯ ನಾಯಕರಲ್ಲಿ ಅಸಮಾಧಾನವಿದೆ ಎಂದು ತಿಳಿದುಬಂದಿದೆ. ಅವರು ಕಾಂಗ್ರೆಸ್‌ ಬಿಟ್ಟು ಬಂದ ಅನಂತರ ವಿಧಾನಪರಿಷತ್‌ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ, ಯಶವಂತಪುರ ಟಿಕೆಟ್‌ ಎಲ್ಲವನ್ನೂ ನೀಡಲಾಗಿತ್ತು. ಈಗ ಬೇರೆಯವರಿಗೆ ಅವಕಾಶ ಕೊಡಬಹುದಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

ಇಂದು ನಾಮಪತ್ರ
ಬಿಜೆಪಿಯ ನಿರ್ಮಲಾ ಸೀತಾರಾಮನ್‌ ಮಂಗಳವಾರ ಬೆಳಗ್ಗೆ 11ಕ್ಕೆ, ಜಗ್ಗೇಶ್‌ ಮಧ್ಯಾಹ್ನ 1ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಬೆಳಗ್ಗೆ 11ರೊಳಗೆ ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ.

ಜೈರಾಂಗೆ ಮುಜುಗರ
ರಾಜ್ಯಸಭೆ ಚುನಾವಣೆ ಅಭ್ಯರ್ಥಿಗೆ ಬಿ ಫಾರಂ ನೀಡಿ ನಾಮಪತ್ರ ಸಲ್ಲಿಕೆಗೆ ಸಜ್ಜುಗೊಳಿಸುವ ಸಂದರ್ಭ ಕಾಂಗ್ರೆಸ್‌ ಅಭ್ಯರ್ಥಿ ಜೈರಾಂ ರಮೇಶ್‌ ಅವರಿಗೆ ಮುಜುಗರ ಉಂಟಾದ ಪ್ರಸಂಗ ನಡೆಯಿತು. ಬಿ ಫಾರಂ ಪಡೆದ ಅನಂತರ ಜೈರಾಂ ರಮೇಶ್‌ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ನೀಡಿ, ಡಿ.ಕೆ. ಶಿವಕುಮಾರ್‌ ಅವರತ್ತ ಕೈ ಚಾಚಿದಾಗ ಡಿ.ಕೆ. ಶಿವಕುಮಾರ್‌ ಪ್ರತಿಸ್ಪಂದನೆ ನೀಡಲಿಲ್ಲ. ಬದಲಿಗೆ “ನಾನು ನಾಮಪತ್ರಗಳ ಸಜ್ಜುಗೊಳಿಸುವಿಕೆಯಲ್ಲಿ ತೊಡಗಿದ್ದೇನೆ, ಇರಿ’ ಎಂಬಂತೆ ಕೈ ಸನ್ನೆ ಮಾಡಿದರು. ಇದರಿಂದ ಮುಜುಗರಕ್ಕೆ ಒಳಗಾದ ಜೈರಾಂ ರಮೇಶ್‌ ತತ್‌ಕ್ಷಣವೇ ಸಾವರಿಸಿಕೊಂಡು, ಅಧ್ಯಕ್ಷರು ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಜೋಕ್‌ ಮಾಡಿ ನಕ್ಕು ಸುಮ್ಮನಾದರು.

ಜೆಡಿಎಸ್‌ಗೆ ಧರ್ಮಸಂಕಟ
ಕಾಂಗ್ರೆಸ್‌ 2ನೇ ಅಭ್ಯರ್ಥಿ ಹಾಕಿದ್ದರಿಂದ ಮತ್ತು 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿ ರುವುದರಿಂದ ಜೆಡಿಎಸ್‌ ಧರ್ಮ ಸಂಕಟಕ್ಕೆ ಸಿಲುಕಿದೆ. ಬಿಜೆಪಿ ಬೆಂಬಲ ಕೇಳಿದರೆ ಕೋಮುವಾದಿ ಪಟ್ಟದ ಜತೆಗೆ ಬಿಜೆಪಿಯ ಬಿ ಟೀಂ ಎಂಬ ಆಪಾದನೆ ಹೊರಬೇಕಾ ಗುತ್ತದೆ. ಇದೇ ವೇಳೆ ಜಾತ್ಯತೀತ ಎಂದು ಹೇಳಿಕೊಳ್ಳುವ ಜೆಡಿಎಸ್‌ ತನ್ನ ಮುಸ್ಲಿಂ ಅಭ್ಯರ್ಥಿಯನ್ನು ಬೆಂಬಲಿಸಿಲ್ಲ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತದೆ. ಈ ಸಂದಿಗ್ಧಗಳಿಂದ ಜೆಡಿಎಸ್‌ ಇಕ್ಕಟ್ಟಿಗೆ ಸಿಲುಕಿದೆ.

ಇಂದು ಜೆಡಿಎಸ್‌ ಸಭೆ
ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 10.30ಕ್ಕೆ ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ನಡೆಯಲಿದೆ.

ಮುಸ್ಲಿಂ ಸಮುದಾಯಕ್ಕೆ ಒಂದು ಸಂದೇಶ ನೀಡಲು ಕಾಂಗ್ರೆಸ್‌ ಮುಸ್ಲಿಂ ಅಭ್ಯರ್ಥಿ ಯನ್ನು ಕಣಕ್ಕಿಳಿಸಿದೆ. ಆದರೆ ಕಾಂಗ್ರೆಸ್‌ನ 2ನೇ ಅಭ್ಯರ್ಥಿ ನಾಮಪತ್ರ ವಾಪಸ್‌ ಪಡೆ ಯಲಿದ್ದಾರೆ. ಬಿಜೆಪಿ ಕೂಡ ಜೆಡಿಎಸ್‌ನ್ನು ಬೆಂಬಲಿಸಲು ಕಾಯುತ್ತಿದೆ. ಪರಿಸ್ಥಿತಿ ಹೇಗೆ ಬದ ಲಾಗುತ್ತದೆ ಎಂಬುದನ್ನು ಕಾದು ನೋಡಿ.
-ಟಿ.ಎ. ಶರವಣ, ವಿಧಾನಪರಿಷತ್‌ ಸದಸ್ಯ

ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಬೆಂಬಲ ನೀಡು ವು ದಿಲ್ಲ. 3ನೇ ಅಭ್ಯರ್ಥಿಯನ್ನು ಗೆಲ್ಲಿಸಿಯೇ ತೀರುತ್ತೇವೆ.
-ಆರ್‌. ಅಶೋಕ್‌,ಕಂದಾಯ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next