Advertisement
ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದ ನಾಯಕ ಜೆ.ಪಿ.ನಡ್ಡಾ ಮಾತನಾಡಿ, ಪತ್ರಿಕಾಗೋಷ್ಠಿಯಲ್ಲಿ ಸಭಾಪತಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸದನ ಹಾಗೂ ಸಭಾಪತಿ ಇಬ್ಬರಿಗೂ ಅವಮಾನ ಮಾಡಿದ್ದಾರೆ. ಖುದ್ದು ಸಭಾಪತಿಗಳೇ ಪತ್ರ ಬರೆದು ಚರ್ಚೆಯಲ್ಲಿ ಭಾಗವಹಿಸಲು ಕೋರಿದರೂ ಬರದೇ ತಮಗೆ ಅವಕಾಶ ನೀಡಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಸೊರೊಸ್ ಮತ್ತು ಸೋನಿಯಾ ನಡುವಿನ ನಂಟು ಏನು ಎಂದು ಇಡೀ ದೇಶ ಪ್ರಶ್ನಿಸುತ್ತಿದೆ ಹೀಗಾಗಿ ವಿಷಯಾಂತರಿಸಲು ಈ ಪತ್ರಿಕಾಗೋಷ್ಠಿ ನಡೆಸಲಾಗಿದೆ ಎಂದು ನಡ್ಡಾ ಆರೋಪಿಸಿದರು. ಇದು ಆಡಳಿತ ಹಾಗೂ ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿ ಕಲಾಪ ಮುಂದೂಡಲ್ಪಟ್ಟಿದೆ.
ರಾಜ್ಯಸಭೆಯಲ್ಲಿ ಪ್ರಜಾಪ್ರಭುತ್ವ ತುಳಿಯುವ ಪ್ರವೃತ್ತಿ ಮಾಮೂಲಿ ಆಗಿಬಿಟ್ಟಿದೆ. ವಿಪಕ್ಷಗಳು ಸಾರ್ವಜನಿಕ ಸಮಸ್ಯೆಗಳನ್ನು ಚರ್ಚೆಗೆಂದು ತಂದರೆ ಅವುಗಳನ್ನು ನಿರಾಕರಿಸುವುದು, ಅನಗತ್ಯ ಮಧ್ಯಪ್ರವೇಶಿಸಿ ಅನುಚಿತ ಹೇಳಿಕೆ ನೀಡುತ್ತಾ ವಿಪಕ್ಷಗಳ ವಾಕ್ ಸ್ವಾತಂತ್ರ್ಯವನ್ನು ರಾಜ್ಯಸಭಾ ಸಭಾಪತಿ ಹತ್ತಿಕ್ಕುತ್ತಿದ್ದಾರೆ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ. ಜತೆಗೆ ಸಭಾಪತಿ ಧನ್‌ಕರ್ ಅಧಿಕಾರದ ದುರುಪಯೋಗ ಮಾಡುತ್ತಿದ್ದು, ಕಲಾಪ ಪ್ರಸಾರ ಮಾಡುವ ಸಂಸದ್ ಟಿವಿಯಲ್ಲೂ ಪಕ್ಷಪಾತ ಮಾಡಲಾಗುತ್ತಿದೆ ಎಂದೂ ಆರೋಪಿಸಿದ್ದಾರೆ.