ನವದೆಹಲಿ: ದೇಶ ಸ್ವಾತಂತ್ರ್ಯ ಗಳಿಸಿದ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ಪ್ರತೀಕವಾಗಿ ನೀಡಿದ ಸೆಂಗೋಲ್ ಅನ್ನು ನ್ಯಾಯದ ಸಂಕೇತವೆಂದು ಗೌರವಿಸುವ ಬದಲು ನೆಹರೂ ಅವರ ವಾಕಿಂಗ್‌ಸ್ಟಿಕ್‌ನಂತೆ ಪರಿಗಣಿಸಲಾಗಿತ್ತು. ಆದರೆ, ಮೋದಿ ಸರ್ಕಾರವು ನೂತನ ಸಂಸತ್ ಕಟ್ಟಡದಲ್ಲಿ ಸೆಂಗೋಲ್ ಸ್ಥಾಪಿಸುವ ಮೂಲಕ ನಾಗರಿಕ ಮೌಲ್ಯವನ್ನು ತಂದುಕೊಟ್ಟಿತು’. ಹೀಗೆಂದು ಬಿಜೆಪಿ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ಇದು ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷದ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಸಂವಿಧಾನ ಕುರಿತ ಚರ್ಚೆಯಲ್ಲಿ ಯಾದವ್ ಈ ಹೇಳಿಕೆ ನೀಡಿದ್ದು, ಇದಕ್ಕೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಆಕ್ಷೇಪಿಸಿ, “ಸೆಂಗೋಲ್ ಅನ್ನು ಅಧಿಕಾರ ಹಸ್ತಾಂತರ ಪ್ರತೀಕವಾಗಿ ಔಪಚಾರಿಕವಾಗಿ ಯಾರಿಗೂ ನೀಡಲಾಗಿಲ್ಲ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೆಲವರು ಸೆಂಗೋಲ್ ತಂದುಕೊಟ್ಟಿದ್ದರು ಅಷ್ಟೇ. ಬಿಜೆಪಿ ಅದರ ಬಗ್ಗೆ ಕಥೆ ಕಟ್ಟಿದೆ. ಇದು ನೈಜ ಇತಿಹಾಸ ಅಲ್ಲ’ ಎಂದರು.
ಇತಿಹಾಸ ಬಿಚ್ಚಿಟ್ಟ ನಡ್ಡಾ:
ತಕ್ಷಣ ಮಧ್ಯಪ್ರವೇಶಿಸಿದ್ದ ಸಚಿವ ಜೆ.ಪಿ.ನಡ್ಡಾ, “ಅಧಿಕಾರ ಹಸ್ತಾಂತರಕ್ಕೆ ಯಾವುದಾದರೂ ನಿರ್ದಿಷ್ಟ ಸಂಪ್ರದಾಯ ಇದೆಯೇ ಎಂದು ಮೌಂಟ್‌ಬ್ಯಾಟೆನ್ ನೆಹರೂ ಅವರನ್ನು ಕೇಳಿದರು. ಆದರೆ, ನೆಹರು ತಮಗೆ ತಿಳಿದಿಲ್ಲ ಎಂದರು. ಈ ವೇಳೆ ರಾಜಗೋಪಾಲಾಚಾರಿ ಅವರು ಚೋಳ ರಾಜಮನೆತನ ಸೆಂಗೋಲ್ ಮೂಲಕ ಅಧಿಕಾರ ಹಸ್ತಾಂತರ ಮಾಡುವ ಸಂಪ್ರದಾಯದ ಬಗ್ಗೆ ತಿಳಿಸಿದರು. ಬಳಿಕ ಮದ್ರಾಸ್‌ನಿಂದ ಸೆಂಗೋಲ್ ತರಿಸಿ, 1947ರ ಆ.14ರಂದು ನೆಹರೂಗೆ ಅವರ ನಿವಾಸದಲ್ಲೇ ಸೆಂಗೋಲ್ ಹಸ್ತಾಂತರಿಸಲಾಯಿತು. ಬಳಿಕ ಅದನ್ನು ಆನಂದ ಭವನ್‌ಗೆ ಕಳುಹಿಸಿ, ವಸ್ತು ಸಂಗ್ರಹಾಲಯದಲ್ಲಿ ನೆಹರೂ ಅವರ ವಾಕಿಂಗ್ ಸ್ಟಿಕ್ ಎಂದು ಪ್ರದರ್ಶಿಸಲಾಯ್ತು’ ಎಂದಿದ್ದಾರೆ.