ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯ್ತಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಮೇಲುಗೈ ಸಾಧಿಸಿದೆ. ಮತ್ತೊಂದೆಡೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವ ಭಾರತೀಯ ಜನತಾ ಪಕ್ಷದ ಕನಸು ನುಚ್ಚು ನೂರಾಗಿದೆ.
ಸತತ ಮೂರು ದಶಕಗಳಿಂದ ಗಂಗೊಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಈ ಬಾರಿ ಪರಾಜಯಗೊಂಡಿದ್ದಾರೆ.
ಡಿಸೆಂಬರ್ 8ರಂದು ಗಂಗೊಳ್ಳಿ ಗ್ರಾಮ ಪಂಚಾಯ್ತಿಯ 33 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ನಿಗದಿಯಂತೆ ಡಿ.11ರಂದು ಫಲಿತಾಂಶ ಪ್ರಕಟಗೊಳ್ಳಬೇಕಿತ್ತು. ಆದರೆ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ನಿಧನದಿಂದ ಫಲಿತಾಂಶ ಎಣಿಕೆ ಮುಂದೂಡಿಕೆಯಾಗಿತ್ತು. ಡಿಸೆಂಬರ್ 12ರಂದು ತಡರಾತ್ರಿ ಫಲಿತಾಂಶ ಘೋಷಣೆಯಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಗಳು ನೇರವಾಗಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ಕೂಡಾ, ಆಯಾ ಪಕ್ಷಗಳ ಬೆಂಬಲದೊಂದಿಗೆ ಅಖಾಡಕ್ಕಿಳಿಯುವುದು ರೂಢಿಯಾಗಿದೆ.
ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಎಸ್ ಡಿಪಿಐ ನಡುವೆ ಮೈತ್ರಿ ಮಾತುಕತೆ ನಡೆದಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಗಂಗೊಳ್ಳಿ ಗ್ರಾ.ಪಂ. ಗದ್ದುಗೆ ಏರಲು ಬಹುಮತದ 17 ಸದಸ್ಯರ ಬೆಂಬಲದ ಅಗತ್ಯವಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 13 ಸ್ಥಾನಗಳಲ್ಲಿ ಹಾಗೂ ಎಸ್ ಡಿಪಿಐ ಬೆಂಬಲಿತ ಅಭ್ಯರ್ಥಿಗಳು 6 ಸ್ಥಾನಗಳಲ್ಲಿ ಜಯಗಳಿಸಿದೆ. ಭಾರತೀಯ ಜನತಾ ಪಕ್ಷ ಬೆಂಬಲಿತ 12 ಅಭ್ಯರ್ಥಿಗಳು ಮತ್ತು ಇಬ್ಬರು ಪಕ್ಷೇತರರು ಜಯ ಗಳಿಸಿದ್ದಾರೆ.