Advertisement

ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ

03:12 PM Mar 31, 2018 | Team Udayavani |

ದೇವದುರ್ಗ: ಸ್ಥಳೀಯ ವಿಧಾನಸಭೆ ಮೀಸಲು ಕ್ಷೇತ್ರದ ಚುನಾವಣೆಗಾಗಿ ಸಕಲ ಸಿದ್ಧತೆ ಕಾರ್ಯಗಳನ್ನು ನಡೆಸಲಾಗುತ್ತಿದೆ. ಚುನಾವಣೆಯನ್ನು ಶಾಂತಿಯುತ ಮತ್ತು ಯಶಸ್ವಿಯಾಗಿಸಲು ಅಧಿಕಾರಿಗಳ ತಂಡ ಕಾರ್ಯೋನ್ಮುಖವಾಗಿದೆ ಎಂದು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಅಧಿಕಾರಿ ಹಾಗೂ ಚುನಾವಣಾಧಿಕಾರಿ ಮಹ್ಮದ್‌ ಇರ್ಫಾನ್‌ ತಿಳಿಸಿದರು.

Advertisement

ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಕಾರ್ಯ ಚಟುವಟಿಕೆಗಳ ಮಾಹಿತಿ ಪಡೆಯಲು ಮಿನಿ ವಿಧಾನಸೌಧದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಾರ್ವಜನಿಕರು ದೂ: 08531-260064, 08531-260028 ಸ್ಥಿರ ದೂರವಾಣಿಗೆ ಸಂಪರ್ಕಿಸಬಹುದಾಗಿದೆ. ಮೆಸೇಜ್‌ ಮತ್ತು ವಿಡಿಯೋ, ಫೋಟೋಗಳನ್ನು ಕಳುಹಿಸಲು ವ್ಯಾಟ್ಸಪ್‌ ಮೊ: 7349630024ಗೆ ಕಳುಹಿಸಬಹುದಾಗಿದೆ. ತಾಪಂ ಇಒ ಮಡಿವಾಳಪ್ಪ ಪಿ.ಎಸ್‌. ನೇತೃತ್ವದಲ್ಲಿ ಮಾದರಿ ನೀತಿ ಸಂಹಿತೆ ತಂಡ ರಚಿಸಲಾಗಿದೆ. 22 ಸೆಕ್ಟರ್‌ ಅಧಿಕಾರಿಗಳ ತಂಡ ನೇಮಿಸಲಾಗಿದೆ. 

ಆರು ಚೆಕ್‌ಪೋಸ್ಟ್‌: ಮೊದಲ ಹಂತದಲ್ಲಿ ತಿಂಥಣಿ ಬ್ರಿಜ್‌, ಹೂವಿನಹೆಡಗಿ ಬ್ರಿಜ್‌, ಜಹಿರುದ್ದೀನ್‌ ವೃತ್ತ, ಗೂಗಲ್‌ ಬ್ರಿಜ್‌, ಗಬ್ಬೂರ ಬಳಿಯ ತುಂಗಭದ್ರಾ ಕಾಲುವೆ ಹತ್ತಿರ ಹಾಗೂ ಆಕಳಕುಂಪಿ ಸೇರಿದಂತೆ 6 ಚೆಕ್‌ ಪೋಸ್ಟ್‌ಗಳನ್ನು ಪ್ರಾರಂಭಿಸಲಾಗಿದೆ. ಚೆಕ್‌ಪೋಸ್ಟ್‌ಗಳನ್ನು ಅವಶ್ಯಕತೆ ಅನುಗುಣವಾಗಿ ಹೆಚ್ಚಿಸುವುದು ಮತ್ತು ಸ್ಥಳಾಂತರಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 

254 ಮತಗಟ್ಟೆ: ದೇವದುರ್ಗ ಕ್ಷೇತ್ರದಲ್ಲಿ 254  ತಗಟ್ಟೆಗಳಿದ್ದು, ಹೆಚ್ಚುವರಿಯಾಗಿ 7 ಮತಗಟ್ಟೆ ಮಾಡಿಕೊಳ್ಳಲಾಗಿದೆ. 44 ಅತಿ ಸೂಕ್ಷ್ಮ, 80 ಸೂಕ್ಷ್ಮ ಹಾಗೂ 130 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ 1,08,587 ಪುರುಷರು, 1,10,224 ಮಹಿಳಾ ಮತದಾರರು ಇದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಕ್ಷೇತ್ರದ ವಿಶೇಷವಾಗಿದೆ. 

19 ಸರ್ವಿಸ್‌ ಮತದಾರರು: ಮತದಾರರ ಗುರುತಿನ ಚೀಟಿ ಪಡೆಯಲು ಏ.7ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ. ಹೊಸದಾಗಿ ಮತದಾರರ ಯಾದಿಗೆ ಸೇರ್ಪಡೆಗಾಗಿ 12,156 ಅರ್ಜಿ ಸಲ್ಲಿಕೆಯಾಗಿದ್ದು, ಈಗಾಗಲೇ 11,230 ಅರ್ಜಿಗಳನ್ನು ಸ್ವೀಕಾರಗೊಂಡಿವೆ. ಹೊಸ ಮತದಾರರನ್ನು ಮತದಾರರ ಯಾದಿಯಲ್ಲಿ ಸೇರ್ಪಡೆಗೊಳಿಸಲಾಗಿದೆ. ನಾನಾ ಕಾರಣಗಳಿಂದಾಗಿ 732 ಅರ್ಜಿಗಳನ್ನು ತಿರಸ್ಕೃತಗೊಳಿಸಲಾಗಿದೆ. 194 ಅರ್ಜಿಗಳನ್ನು ಕಾಯ್ದಿರಿಸಲಾಗಿದ್ದು, ಶೀಘ್ರದಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಹೇಳಿದರು.

Advertisement

ನೀತಿ ಸಂಹಿತೆ ಕಟ್ಟುನಿಟ್ಟು ಜಾರಿ: ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಡೆಬರಹ, ಬಾವುಟ ಹಚ್ಚುವುದು ಸೇರಿದಂತೆ ಆಯೋಗ ಸೂಚಿಸಿರುವ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು. ಪರವಾನಗಿ ಇಲ್ಲದೆ ಯಾರೂ ಬಾವುಟ ಹಚ್ಚಿಕೊಳ್ಳಬಾರದು. ಗೋಡೆ ಬರಹ ಬರೆಯಬಾರದು. ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆ ಕಚೇರಿಯಿಂದ, ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯತಿಯಿಂದ ಪರವಾನಿಗೆ ಪಡೆದು, ತಾಲೂಕು ಚುನಾವಣಾಧಿಕಾರಿಗಳಿಂದ ಆದೇಶ ಪಡೆಯಬೇಕು. ಕರಪತ್ರಗಳನ್ನು ಪ್ರಕಟಿಸುವುದು ಮತ್ತು ಹಂಚಿಕೆ ಮಾಡುವಾಗಲೂ ಚುನಾವಣಾಧಿಕಾರಿಯಿಂದ ಅಧಿಕೃತ ಆದೇಶ ಪಡೆಯಬೇಕು. ಈ ಕಾರಣದಿಂದ ತಾಲೂಕಿನಲ್ಲಿರುವ ಎಲ್ಲ ಪ್ರಿಂಟಿಂಗ್‌ ಪ್ರಸ್‌ ಮಾಲಿಕರ ಸಭೆ ಕರೆದು ಚರ್ಚಿಸಲಾಗುವುದು. ಈ ಕ್ಷೇತ್ರದಲ್ಲಿ ಶಾಂತಿಯುತ ಮತ್ತು ಯಶಸ್ವಿ ಚುನಾವಣೆ ನಡೆಯಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು. ತಹಶೀಲ್ದಾರ್‌ ಅಶೋಕ ಹೀರೊಳ್ಳಿ, ತಾಪಂ ಇಒ ಮಡಿವಾಳಪ್ಪ ಪಿ.ಎಸ್‌., ಸಿಪಿಐ ಸಂಜೀವಕುಮಾರ ಟಿ. ಪಿಎಸ್‌ಐ ಹೊಸಕೇರಪ್ಪ ಕೆ. ಹಾಗೂ ಅಬಕಾರಿ ಅಧಿಕಾರಿಗಳು ಇದ್ದರು. 

ಅತೀ ಸೂಕ್ಷ್ಮ ಕ್ಷೇತ್ರ
ರಾಜ್ಯದಲ್ಲಿ ದೇವದುರ್ಗವನ್ನು ಅತಿ ಸೂಕ್ಷ್ಮ ಕ್ಷೇತ್ರ ಎಂದು ಗುರುತಿಸಲಾಗಿದ್ದು, ಸಾಮಾನ್ಯವಾಗಿ ಪ್ರತಿ ಕ್ಷೇತ್ರದಲ್ಲಿ ಎಂಸಿಸಿ 6 ತಂಡಗಳನ್ನು ನೇಮಿಸಲಾಗುವುದು. ಆದರೆ ಅತೀ ಸೂಕ್ಷ್ಮ ಕ್ಷೇತ್ರವಾಗಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ 9 ಸಂಚಾರಿ ತಂಡಗಳನ್ನು (ಫ್ಲಾಯಿಂಗ್‌ ಸ್ಕ್ವಾಡ್ಸ್‌) ನಿಯೋಜಿಸಲಾಗಿದ್ದು, ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ. ಈ ತಂಡಗಳು 24 ಗಂಟೆ ಸೇವೆಗೆ ಲಭ್ಯವಿರುತ್ತದೆ ಎಂದು ಚುನಾವಣಾಧಿಕಾರಿ ಇರ್ಫಾನ್‌ ಹೇಳಿದರು.

ನೀರು ಪೂರೈಕೆಗಿಲ್ಲ ಅಡ್ಡಿ
ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜಿಗೆ ಯಾವುದೇ ಅಡ್ಡಿ ಇಲ್ಲ. ಆದರೆ ನೀರಿನ ಟ್ಯಾಂಕ್‌ ಮೇಲೆ ರಾಜಕೀಯ ನಾಯಕರ ಭಾವಚಿತ್ರವಾಗಲಿ, ಪಕ್ಷದ ಚಿಹ್ನೆಯಾಗಲಿ ಇರಬಾರದು. ಈಗಾಗಲೇ ಅರಕೇರಾದಲ್ಲಿ ಪಕ್ಷದ ಚಿಹ್ನೆ ಇರುವ ನೀರಿನ ಟ್ಯಾಂಕ್‌ ಜಪ್ತಿ ಮಾಡಲಾಗಿದೆ. ಅಕ್ರಮ ಮದ್ಯ ಮಾರಾಟದ 6 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಮಹ್ಮದ್‌ ಇರ್ಫಾನ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next