Advertisement

ಯಾಮಾರಿಸುವ ಆಟ ಪರದಾಟ

11:19 AM Nov 11, 2018 | Team Udayavani |

ಜನರನ್ನು ಯಾಮಾರಿಸಿ ದುಡ್ಡು ಮಾಡೋದು ಹೇಗೆ ಎಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ. ಆ ವಿದ್ಯೆಯಲ್ಲಿ ಆತ ಪಂಟರ್‌. ಆತನ “ಮೆನು’ವಿನಲ್ಲಿ ನಾನಾ ಬಗೆಯಲ್ಲಿ ಯಾಮಾರಿಸುವುದು ಹೇಗೆ ಎಂಬ ಪಟ್ಟಿಯೇ ಇದೆ. ಅದನ್ನೇ ಮಾಡುತ್ತಾ, ಜೀವನ ನಡೆಸಿಕೊಂಡು ಬರುತ್ತಾನೆ ಕೂಡ. ನಾನಾ ವೇಷಗಳನ್ನು ಹಾಕುತ್ತಾ, ಭಾವನೆಗಳಿಗೆ ಬೆಲೆ ಕೊಡದೇ ದುಡ್ಡು ಒಂದೇ ಮುಖ್ಯ ಎಂದು ಬದುಕುವ ಆತನ ಜೀವನದಲ್ಲಿ ಘಟನೆಯೊಂದು ನಡೆಯುತ್ತದೆ.

Advertisement

ದುಡ್ಡು ಮುಖ್ಯವೋ, ಭಾವನೆ ಮುಖ್ಯವೋ ಎಂಬ ಪರಿಸ್ಥಿತಿಯದು. ಇಲ್ಲಿ ನಾಯಕ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬ ಕುತೂಹಲ ನಿಮಗಿದ್ದರೆ ನೀವು “ಜಗತ್‌ಕಿಲಾಡಿ’ ಚಿತ್ರ ನೋಡಬಹುದು. ಒಂದು ಕಮರ್ಷಿಯಲ್‌ ಸಿನಿಮಾಕ್ಕೆ ಹೇಳಿಮಾಡಿಸಿದ ಕಥೆ ಇಲ್ಲಿದೆ. ಆರಂಭದಿಂದ ಕೊನೆಯವರೆಗೂ ಮಜವಾಗಿ ಸಾಗುವ ಕಥಾವಸ್ತುವೇ ಈ ಸಿನಿಮಾದ ಹೈಲೈಟ್‌. ಅಂದಹಾಗೆ, ಇದು ತಮಿಳಿನ “ಸದುರಂಗವೆಟ್ಟೈ’ ಚಿತ್ರದ ರೀಮೇಕ್‌.

ನಿರ್ದೇಶಕರು, ಮೂಲ ಚಿತ್ರಕ್ಕೆ ಧಕ್ಕೆಯಾಗದಂತೆ ಇಲ್ಲಿ ಯಥಾವತ್‌ ಕಟ್ಟಿಕೊಟ್ಟಿದ್ದಾರೆ. ಆದರೆ, ಮೂಲ ಚಿತ್ರದಲ್ಲಿನ ರೋಚಕತೆ ಹಾಗೂ ಲವಲವಿಕೆ ಮಿಸ್‌ ಆಗಿದೆಯಷ್ಟೇ. ಅದು ಬಿಟ್ಟರೆ “ಕಿಲಾಡಿ’ಯಾಟ ಚೆನ್ನಾಗಿದೆ. ಸಿನಿಮಾ ಆರಂಭವಾಗುವುದೇ ಯಾಮಾರಿಸಿ ಕಾಸು ಮಾಡುವ ವಿವಿಧ ವಿದ್ಯೆಗಳಿಂದ. ಒಂದೊಂದೇ ಚಾಪ್ಟರ್‌ ತೆರೆದುಕೊಳ್ಳುತ್ತಾ, ನಾಯಕ ಹೇಗೆ ಜನರನ್ನು ಮೋಸ ಮಾಡುತ್ತಾನೆ,

ಜನ ಎಷ್ಟು ಸುಲಭವಾಗಿ ಮೋಸ ಹೋಗುತ್ತಾರೆ ಎನ್ನುವುದನ್ನು ತೋರಿಸುತ್ತಾ ಹೋಗುವ ಮೂಲಕ ಬಹುತೇಕ ಮೊದಲರ್ಧ ಮುಗಿದು ಹೋಗುತ್ತದೆ. ಹಾಗಾಗಿ, ಇಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸುವಂತಿಲ್ಲ. ಮೋಸದಾಟವನ್ನು ನೋಡಿ ಮಜಾ ತೆಗೆದುಕೊಳ್ಳುವುದಷ್ಟೇ ನಿಮ್ಮ ಕೆಲಸ. ಇಲ್ಲಿನ ನಿರೂಪಣೆ ಇನ್ನಷ್ಟು ಬಿಗಿಯಾಗಿ ಹಾಗೂ ವೇಗವಾಗಿ ಇರಬೇಕಿತ್ತೆಂದು ಅನಿಸದೇ ಇರದು. ಚಿತ್ರದ ತಿರುವುಗಳು ಹಾಗೂ ಕಥೆ ಬಿಚ್ಚಿಕೊಳ್ಳುವುದು ದ್ವಿತೀಯಾರ್ಧದಲ್ಲಿ.

ಇಲ್ಲಿ ಅನೇಕ ಅಂಶಗಳು ಬಂದು ಹೋಗುತ್ತವೆ. ಮುಖ್ಯವಾಗಿ ನಾಯಕ ಕನಸಲ್ಲೂ ಭಾವಿಸದಂತಹ ಸವಾಲು ಎದುರಾಗುತ್ತದೆ. ಇಕ್ಕಟ್ಟಿನಲ್ಲಿ ಸಿಕ್ಕ ಪರಿಸ್ಥಿತಿಯಲ್ಲಿರುವ ನಾಯಕ ಅದರಿಂದ ಹೇಗೆ ಪಾರಾಗುತ್ತಾನೆ ಎಂಬುದು ಕುತೂಹಲದ ಘಟ್ಟ. ಇವೆಲ್ಲವನ್ನು ಕಾಮಿಡಿ ಹಿನ್ನೆಲೆಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಆದರೆ, ಅದು ಹೆಚ್ಚು ವಕೌìಟ್‌ ಆಗಿಲ್ಲ. ಉಳಿದಂತೆ ಚಿತ್ರದಲ್ಲಿ ಹಲವು ಸನ್ನಿವೇಶಗಳು ಬಂದರೂ ಅದು ಹೆಚ್ಚೇನು ಗಮನ ಸೆಳೆಯೋದಿಲ್ಲ.

Advertisement

ಇಲ್ಲಿನ ಕೆಲವು ದೃಶ್ಯಗಳನ್ನು ಲಾಜಿಕ್‌ ಇಲ್ಲದೇ ನೀವು ನೋಡಬೇಕು. ಏಕೆಂದರೆ ಅವೆಲ್ಲವನ್ನು ಕಣ್ಣುಮುಚ್ಚಿ ಬಿಡುವುದರೊಳಗೆ ನಡೆದು ಹೋಗುತ್ತದೆ.  
ಹಾಗೆ ನೋಡಿದರೆ ಇಡೀ ಸಿನಿಮಾ ಸಾಗುವುದು ನಾಯಕನ ಸುತ್ತ. ಆತ ಹಲವು ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಾನೆ ಮತ್ತು ಇಡೀ ಸಿನಿಮಾವನ್ನು ಮುನ್ನಡೆಸುವ ಜವಾಬ್ದಾರಿ ಆತನ ಮೇಲಿರುತ್ತದೆ. ಇಲ್ಲಿ ನಾಯಕ ನಿರಂಜನ್‌ ಶೆಟ್ಟಿ ಪಾತ್ರಕ್ಕೆ ತಕ್ಕಮಟ್ಟಿಗೆ ನ್ಯಾಯ ಒದಗಿಸಿದರೂ,

ಅವರು ಇನ್ನಷ್ಟು ಆ್ಯಕ್ಟೀವ್‌ ಆಗಿದ್ದರೆ ಪಾತ್ರದ ಮಜ ಹೆಚ್ಚುತ್ತಿತ್ತು. ಆದರೆ, ನಿರಂಜನ್‌ ಎಂದಿನಂತೆ ಗಂಭೀರವಾಗಿಯೇ ನಟಿಸಿದ್ದಾರೆ. ನಾಯಕಿ ಅಮಿತಾ ಕುಲಾಲ್‌ಗೆ ಇಲ್ಲಿ ನಟನೆಗೆ ಹೆಚ್ಚಿನ ಅವಕಾಶವಿಲ್ಲ. ಆದರೆ, ಇದ್ದಷ್ಟು ಹೊತ್ತು ಇಷ್ಟವಾಗುತ್ತಾರೆ. ಉಳಿದಂತೆ ಮಂಗಳೂರು ಮೂಲದ ಡಾನ್‌ ಆಗಿ ಸುಚೇಂದ್ರ ಪ್ರಸಾದ್‌, ಇನ್ಸ್‌ಪೆಕ್ಟರ್‌ ಆಗಿ ಜೈಜಗದೀಶ್‌ ಇಷ್ಟವಾಗುತ್ತಾರೆ. ಚಿತ್ರದ ಹಾಡುಗಳು ಚಿತ್ರದ ಸಹಾಯಕ್ಕೆ ಬಂದಿಲ್ಲ.

ಚಿತ್ರ: ಜಗತ್‌ ಕಿಲಾಡಿ
ನಿರ್ಮಾಣ: ಲಯನ್‌ ಆರ್‌.ರಮೇಶ್‌ ಬಾಬು
ನಿರ್ದೇಶನ: ಆರವ್‌ ಧೀರೇಂದ್ರ
ತಾರಾಗಣ: ನಿರಂಜನ್‌ ಶೆಟ್ಟಿ, ಅಮಿತಾ ಕುಲಾಲ್‌, ಸುಚೇಂದ್ರ ಪ್ರಸಾದ್‌, ಜೈಜಗದೀಶ್‌, ರಂಗಾಯಣ ರಘು ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next