Advertisement

Yakshagana;ತೆಂಕು-ಬಡಗು ತಿಟ್ಟುಗಳ ನಡುವೆ ಸೌಹಾರ್ದ ಸಂಬಂಧವಿದೆ:ಗಾವಳಿ ಬಾಬು ಕುಲಾಲ್‌

10:55 AM Dec 08, 2024 | Team Udayavani |

ಬಡಗು ಪ್ರಾಂತದ ಕಲಾವಿದರು ತೆಂಕಿನಲ್ಲಿ, ತೆಂಕಿನವರು ಬಡಗಿನಲ್ಲಿ ಯಶಸ್ವಿಯಾಗುವುದು ಸ್ವಲ್ಪ ಅಪರೂಪ. ಅದರಲ್ಲೂ ಎರಡೂ ತಿಟ್ಟುಗಳಲ್ಲಿ ದುಡಿದು ಹೆಸರು ಗಳಿಸುವುದು ಇನ್ನೂ ಅಪರೂಪ. ಆದರೆ ಬಾಬು (ಬಸವ) ಕುಲಾಲ್‌ ಅವರು ಬಡಗಿನಲ್ಲಿ18 ವರ್ಷ ಹಾಗೂ ತೆಂಕಿನಲ್ಲಿ 35 ವರ್ಷ ಸೇವೆ ಸಲ್ಲಿಸಿ ಐದು ದಶಕ (53 ವರ್ಷಗಳ )ಗಳಿಗೂ ಅಧಿಕ ಕಾಲ ತೆಂಕು-ಬಡಗು ಉಭಯತಿಟ್ಟುಗಳ ಸವ್ಯಸಾಚಿ ಕಲಾವಿದರಾಗಿ ದುಡಿದ ಅಪರೂಪದ ಕಲಾರತ್ನ.

Advertisement

ಕುಂದಾಪುರ ತಾಲೂಕಿನ ಹರ್ಕಾಡಿ ಗ್ರಾಮದ ಗಾವಳಿಯಲ್ಲಿ ವೆಂಕಟ ಕುಲಾಲ್‌ ಮತ್ತು ಸೂರಮ್ಮ ದಂಪತಿಯ ಪುತ್ರನಾಗಿ 1951 ಫೆ.8ರಂದು ಜನಿಸಿದ ಇವರು ಕಲಿತದ್ದು 5ನೇ ತರಗತಿ. ಅನಂತರ ವಂಡಾರು ಬಸವಣ್ಣ ಅವರು ಇವರ ಚುರುಕು ಗಮನಿಸಿ ಹೂವಿನ ಕೋಲಿಗೆ ಕರೆದೊಯ್ದು ಅಮೃತೇಶ್ವರೀ ಮೇಳಕ್ಕೆ ಸೇರ್ಪಡೆಗೊಳಿಸಿದರು. ಅಮೃತೇಶ್ವರೀ ಮೇಳ ಬಯಲಾಟದಲ್ಲಿ 5 ವರ್ಷ, ಡೇರೆಯಲ್ಲಿ ಎರಡು ವರ್ಷ ಒಟ್ಟು 7 ವರ್ಷಗಳ ತಿರುಗಾಟ ನಡೆಸಿ ಹಂತ-ಹಂತವಾಗಿ ಬೆಳೆದರು. ಅನಂತರ ಮಂದಾರ್ತಿ, ಮಾರಣಕಟ್ಟೆ, ಕಮಲಶಿಲೆ, ಹಾಲಾಡಿ, ಸೌಕೂರು ಮೇಳದಲ್ಲಿ ತಲಾ ಎರಡೆರಡು ವರ್ಷ ಮತ್ತು ಸಾಲಿಗ್ರಾಮ ಮೇಳದಲ್ಲಿ 1 ವರ್ಷ ಸೇರಿದಂತೆ ಒಟ್ಟು 18 ವರ್ಷ ಬಡಗುತಿಟ್ಟಿನಲ್ಲಿ ತಿರುಗಾಟ ನಡೆಸಿ ಅನಂತರ ತೆಂಕುತಿಟ್ಟಿನ ಕಟೀಲು ಮೇಳಕ್ಕೆ ಸೇರ್ಪಡೆಯಾಗಿ ನಿರಂತರ 35 ವರ್ಷ ಅಲ್ಲಿ ತಿರುಗಾಟ ನಡೆಸಿದರು. ಜತೆಗೆ ಹವ್ಯಾಸಿ ಸಂಘಗಳಲ್ಲಿ ಗುರುಗಳಾಗಿ ಕೂಡ ಸಾಕಷ್ಟು ಕಲಾವಿದರನ್ನು ತಯಾರು ಮಾಡಿದ್ದಾರೆ.
ಸ್ತ್ರೀ ಪಾತ್ರಧಾರಿಯಾಗಿ ಗುರುತಿಸಿಕೊಂಡ ಇವರು ಪುರುಷ ಪಾತ್ರ, ಅಗತ್ಯ ಬಿದ್ದರೆ ಎಲ್ಲ ರೀತಿಯ ಪಾತ್ರಗಳನ್ನೂ ಮಾಡಬಲ್ಲ ಸವ್ಯಸಾಚಿ. ಇವರ ಕುವಲೆ, ಸುಗಭೆì, ಮಾಯಾ ಪೂತನಿ, ಯಶೋದೆ, ಮಾಯಾ ಶೂರ್ಪನಖೀ, ಮಾಯಾ ಹಿಡಿಂಬೆ, ಪ್ರಭಾವತಿ, ಮೀನಾಕ್ಷಿ, ಸುದೇಷ್ಣೆ, ಶಚಿ, ದಿತಿ, ಧರ್ಮರಾಯ, ಈಶ್ವರ, ಬ್ರಹ್ಮ ಮೊದಲಾದ ಪಾತ್ರಗಳು ಜನಮೆಚ್ಚುಗೆ ಗಳಿಸಿವೆ. ಪ್ರಸ್ತುತ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಗಾವಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ಯಕ್ಷಗಾನದೊಂದಿಗೆ ಸಂಬಂಧ; ಮೇಳದ ತಿರುಗಾಟ ಹೇಗೆ ಆರಂಭವಾಯಿತು ?
ಬಾಲ್ಯದಿಂದಲೂ ಆಟ ನೋಡುವ, ನೋಡಿದ ಮೇಲೆ ದನ ಮೇಯಿಸುವಾಗ ಗೆಳೆಯರೆಲ್ಲ ಸೇರಿ ಯಕ್ಷಗಾನ ಆಟ ಆಡುವ ಹವ್ಯಾಸ ಇತ್ತು. ಅಲ್ಲಿ ಭಸ್ಮಾಸುರ ಮೋಹಿನಿಯಾದರೆ ನಂದೇ ಭಸ್ಮಾಸುರ. ಅನಂತರ ಬಡತನದಿಂದಾಗಿ ಬೇಗ ಶಾಲೆ ಬಿಟ್ಟೆ. ಆ ಕಾಲದ ಪ್ರಸಿದ್ಧ ಪುರುಷ ವೇಷಧಾರಿ ವಂಡಾರು ಬಸವಣ್ಣ ಅವರು “ಹೂವಿನ ಕೋಲು’ ಆಟಕ್ಕೆ ಕರೆದೊಯ್ದರು. ಅವರೇ ಅಮೃತೇಶ್ವರೀ ಮೇಳಕ್ಕೆ ಸೇರಿಸಿದರು. ಬಾಲಗೋಪಾಲ ವೇಷದಿಂದ ಯಕ್ಷಪಯಣ ಆರಂಭವಾಯಿತು. ಭಾಗವತ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರು ತಿಮ್ಮಪ್ಪ ಮದ್ದಳೆಗಾರರು, ಚೆಂಡೆ ಕೆಮ್ಮಣ್ಣು ಆನಂದ, ಮಾರ್ಗೋಳಿ ಗೋವಿಂದ ಸೇರಿಗಾರ್‌, ಪೆರ್ಡೂರು ರಾಮಣ್ಣ, ನಾವುಂದ ಮಹಾಬಲ ಗಾಣಿಗ ಮೊದಲಾದ ಕಲಾವಿದರ ಒಡನಾಟವಾಯಿತು. ಎರಡು ವರ್ಷಗಳ ತಿರುಗಾಟದ ಅನಂತರ ನಾರ್ಣಪ್ಪ ಉಪ್ಪೂರರ ಮನೆಗೆ ತೆರಳಿ ಅವರ ಪುತ್ರ ದಾಮೋದರ ಉಪ್ಪೂರರಿಂದ ಶಾಸ್ತ್ರೀಯವಾದ ನಾಟ್ಯ ಕಲಿತೆ. ನನ್ನ ಯಕ್ಷಜೀವನಕ್ಕೆ ಅಮೃತೇಶ್ವರೀ, ಕಟೀಲು ಮೇಳದ ಕೊಡುಗೆ ದೊಡ್ಡದು.

ಆ ಕಾಲದ ತಿರುಗಾಟದಲ್ಲಿ ನೆನಪಿನಲ್ಲಿ ಉಳಿದ ವಿಚಾರಗಳಾವುವು?
ಆ ಕಾಲದ ಕಲಾವಿದರನ್ನು, ಅವರ ಒಡನಾಟ ಮರೆಯಲು ಅಸಾಧ್ಯ. ಅಂದಿನ ಜೋಡಾಟಗಳನ್ನು ಮರೆಯುವುದಕ್ಕೆ ಅಸಾಧ್ಯ. ನಾನು ಅಮೃತೇಶ್ವರೀ ಮೇಳದಲ್ಲಿದ್ದಾಗ ಒಂದೇ ವರ್ಷ 18-20 ಜೋಡಾಟವಾಗಿತ್ತು. ಉಪ್ಪೂರರು-ಶೀನ ದಾಸರ ಪೈಪೋಟಿಯ ಪದ್ಯಗಳು. ನೆಲದಲ್ಲಿ ಕುಳಿತ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದುದು, ನಾವೆಲ್ಲ ಮೈಚಳಿ ಬಿಟ್ಟು ಕೆಲಸ ಮಾಡುತ್ತಿದ್ದುದು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಬಡಗಿನ ನೀವು ತೆಂಕಿಗೆ ಯಾಕೆ ಹೋದಿರಿ ?
ಹಾಲಾಡಿ ಮೇಳದಲ್ಲಿದ್ದಾಗ ಅನಿವಾರ್ಯ ಕಾರಣದಿಂದ ಮೇಳ ಬಿಡುವ ಪ್ರಸಂಗ ಬಂತು. ಆಗ ಕಟೀಲು ಮೂರನೇ ಮೇಳ ಆರಂಭವಾಗುವುದರಲ್ಲಿತ್ತು. ಕೋಡಿ ಕೃಷ್ಣ ಗಾಣಿಗರ ಸಹಾಯದಿಂದ ನಾವು ಬಡಗಿನ ಒಂಬತ್ತು ಮಂದಿ ಕಲಾವಿದರು ಕಟೀಲಿಗೆ ಸೇರ್ಪಡೆಗೊಂಡೆವು. ಅನಂತರ ಮೂರೂವರೆ ದಶಕ ಅಲ್ಲೇ ಕೆಲಸ ಮಾಡಿದೆ.

Advertisement

ಬಡಗಿನವರಿಗೆ ತೆಂಕು ಕಷ್ಟ ಆಗಲಿಲ್ವಾ ?
ಕಲಿಯುವ ಆಸಕ್ತಿ ಇದ್ದರೆ ಯಕ್ಷಗಾನದಲ್ಲಿ ಯಾವುದೂ ಅಸಾಧ್ಯ ಇಲ್ಲ. ಅಲ್ಲಿನ ಕುಣಿತದಲ್ಲಿ ತುಂಬಾ ಕಷ್ಟ ಅನಿಸಲಿಲ್ಲ; ಮಾತುಗಾರಿಕೆ ಎರಡೂ ಕಡೆ ಒಂದೆ. ಆದರೂ ಬಡಗಿನ ಪ್ರಭಾವ ನನ್ನಲ್ಲಿ ಸ್ವಲ್ಪ ಇತ್ತು. ಪಟ್ಲ ಭಾಗವತರ ಜತೆ ಕೆಲಸ ಮಾಡುವಾಗ ನನ್ನ ಬಡಗಿನ ಪ್ರಭಾವವನ್ನು ಕಂಡು ಒಮ್ಮೊಮ್ಮೆ ಬಡಗಿನ ಶೈಲಿಯಲ್ಲೇ ಕುಣಿಸಿದ್ದು ಉಂಟು. ಅವರೊಂದಿಗೆ ಒಡನಾಟ ತುಂಬಾ ಖುಷಿ ಕೊಟ್ಟಿದೆ. ಜತೆಗೆ ಕಟೀಲು ಮೇಳದ ಯಜಮಾನರು ಅಂದಿನಿಂದ ಇಂದಿನ ವರೆಗೆ ನನ್ನನ್ನು ತುಂಬಾ ಪ್ರೀತಿಯಿಂದ ನೋಡಿದ್ದಾರೆ, ಅವಕಾಶಗಳನ್ನು ಕೊಟ್ಟಿದ್ದಾರೆ. ಅಭಿಮಾನಿಗಳು ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಈ ಕಾರಣದಿಂದ ಯಶಸ್ವಿಯಾಗಿ ತೆಂಕಿನ ತಿರುಗಾಟ ಮಾಡಿದೆ.

ಎರಡು ತಿಟ್ಟುಗಳಲ್ಲಿ ಕೆಲಸ ಮಾಡಿದ್ದೀರಿ; ಎರಡರಲ್ಲಿನ ಭಿನ್ನತೆ ಎನು ?
ತುಂಬಾ ವ್ಯತ್ಯಾಸಗಳು ಕಂಡು ಬಂದಿಲ್ಲ. ರಂಗ ನಡೆ, ಭಾಗವತಿಕೆ, ವೇಷಭೂಷಣ, ಪ್ರಸಂಗ ಪ್ರಸ್ತುತಿಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ತೆಂಕಿನ ಹಿಮ್ಮೇಳಗಳು ಅಬ್ಬರಕ್ಕೆ ಪೂರಕವಾಗಿರುವುದರಿಂದ ವೀರ ರಸಗಳು ಅದ್ಬುತವಾಗಿ ಪ್ರಸ್ತುತಗೊಳ್ಳುತ್ತದೆ. ಬಡಗಿನಲ್ಲಿ ಕರುಣಾ ರಸ, ಶೃಂಗಾರಗಳು ಚೆನ್ನಾಗಿ ಮೂಡಿಬರುತ್ತದೆ.

ತೆಂಕು-ಬಡಗಿನಲ್ಲಿ ನೀವು ಗಮನಿಸಿದ ಉತ್ತಮ ಅಂಶಗಳೇನು ?
ಬಡಗಿನ ವೇಷಭೂಷಣ, ಕುಣಿತ ಭಿನ್ನವಾಗಿರುತ್ತದೆ. ಕಲಾವಿದರಿಗೆ ಉತ್ತಮ ಅವಕಾಶ, ಪ್ರಚಾರ ಇದೆ. ಆದರೆ ತೆಂಕಿನಲ್ಲಿ ಪ್ರಸಂಗದ ಬಗ್ಗೆ ಕಲಾವಿದರ ನಡುವೆ ಚೌಕಿಯಲ್ಲಿ ಪರಸ್ಪರ ಉತ್ತಮ ಚರ್ಚೆ ನಡೆಸಿಕೊಳ್ಳಲಾಗುತ್ತದೆ. ಭಾಗವತ ಪ್ರಧಾನ ವ್ಯವಸ್ಥೆ ಇಂದಿಗೂ ಇದೆ. ಹಿರಿಯ ಕಲಾವಿದರನ್ನು ತುಂಬಾ ಆತ್ಮೀಯತೆಯಿಂದ ನೋಡಿಕೊಳ್ಳುವ ಗುಣ ಇದೆ ಎನ್ನುವುದಕ್ಕೆ ಸಾಕ್ಷಿ ನಾನು ನಿವೃತ್ತಿಯಾದ ಅನಂತರವೂ ಕಟೀಲು ಆಟಕ್ಕೆ ಹೋದಾಗ ಕಿರಿಯ ಕಲಾವಿದರು ಅವರ ಸಾಲಿನ ವೇಷವನ್ನು ಪ್ರೀತಿಯಿಂದ ಬಾಬಣ್ಣ ನೀವು ಮಾಡಿ ಎನ್ನುತ್ತಿದ್ದರು.

ಎರಡೂ ತಿಟ್ಟುಗಳಲ್ಲಿ ಅಂದು-ಇಂದಿನ ಆಟದಲ್ಲಿ ವ್ಯತ್ಯಾಸವಾಗಿದೆಯೇ ?
ಸಾಗರದಷ್ಟು ವ್ಯತ್ಯಾಸಗಳಾಗಿದೆ. ತಂತ್ರಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾದರೂ ಅಂದಿನ ಆಟ, ಆ ಪಾತ್ರ ಪೋಷಣೆ, ಕಲಾವಿದರ ಶ್ರಮಗಳನ್ನು ನೋಡಿ ಈಗಿನ ಆಟ ನೋಡುವಾಗ ಸಾಕಷ್ಟು ಅಬ್ಬರದ ನಡುವೆಯೂ ಆಟ ಸಪ್ಪೆ ಎನಿಸುತ್ತದೆ. ಆದರೆ ಈಗ ಕಲಾವಿದರಿಗೆ ಒಳ್ಳೆಯ ಬೇಡಿಕೆ ಬಂದಿದೆ. ಉತ್ತಮ ಸಂಪಾದನೆ ಸಿಗುತ್ತಿರುವುದೇ ಖುಷಿಯ ವಿಚಾರ.

ಯಕ್ಷಗಾನ ಕಲಿಯುವವರಿಗೆ; ಕಲಿಸುವವರಿಗೆ ಎನು ಹೇಳುತ್ತೀರಿ ?
ಕಲಿಯುವಾಗ ಹಿಂದಿನ ಸಂಪ್ರದಾಯಗಳನ್ನು ಹೇಳಿ ಕೊಡುವ ಗುರುಗಳನ್ನು ಆಯ್ಕೆ ಮಾಡಿಕೊಂಡು ಕಲಿಯಿರಿ. ರಂಗದಲ್ಲೂ ಸಾಧ್ಯವಾದಷ್ಟು ನೈಜ ಸತ್ವದ ಉಳಿವಿಗೆ ಪ್ರಯತ್ನಿಸಿ. ಪ್ರಬುದ್ಧ ಕಲಾವಿದರಾದವರು ಮೇಳದಲ್ಲಿರುವಾಗ ತಮ್ಮಲ್ಲಿನ ವಿದ್ಯೆಯನ್ನು ಆಸಕ್ತಿ ಇರುವವರಿಗೆ ಹೇಳಿಕೊಟ್ಟರೆ ನಿವೃತ್ತಿ ಕಾಲದಲ್ಲಿ ನಾನು ಇಂತಹ ಒಬ್ಬ ಉತ್ತಮ ಕಲಾವಿದನನ್ನು ತಯಾರು ಮಾಡಿದ್ದೇನೆ ಎನ್ನುವ ತೃಪ್ತಿಯಾದರೂ ಇರುತ್ತದೆ.

ತುಂಬಾ ಖುಷಿಯಾಗಿದೆ
ತೆಂಕು-ಬಡಗಿನಲ್ಲಿ 53 ವರ್ಷ ಸೇವೆ ಸಲ್ಲಿಸಿದರೂ ನಮ್ಮಂತವರನ್ನು ಗುರುತಿಸುವವರು, ಮಾತನಾಡಿಸುವವರು ಯಾರೂ ಇಲ್ಲ ಎನ್ನುವ ಬೇಸರ ಒಂದು ಕಡೆ ಇದ್ದೇ ಇದೆ. ಉದಯವಾಣಿ ಪತ್ರಿಕೆಯನ್ನು ಆರಂಭದಿಂದ ನಾನು ಓದುತ್ತಿದ್ದು ಯಕ್ಷಗಾನ ಕಲೆ, ಕಲಾವಿದರಿಗೆ ಸಾಕಷ್ಟು ಮಹತ್ವ ನೀಡಿದೆ. ಈಗ ನಮ್ಮಂಥ ಅಜ್ಞಾತ ಕಲಾವಿದರನ್ನು ಗುರುತಿಸಿ, ಮಾತನಾಡಿಸುತ್ತಿರುವುದು ತುಂಬಾ ಖುಷಿ ತಂದಿದೆ.

ತೆಂಕು-ಬಡಗುತಿಟ್ಟು ಪ್ರತ್ಯೇಕ ಕಲಾಪ್ರಕಾರವಲ್ಲ
ಕೆಲವು ಮಂದಿ ಅಂಧ ಅಭಿಮಾನಿಗಳು ಹಾಗೂ ಪರಿಪೂರ್ಣ ಜ್ಞಾನವಿಲ್ಲದೆ ವಿಮರ್ಶೆ ಮಾಡುವವರು ತೆಂಕು-ಬಡಗುತಿಟ್ಟುಗಳು ಬೇರೆ-ಬೇರೆ ಎನ್ನುವ ರೀತಿಯ ಕಂದಕವನ್ನು ಸೃಷ್ಟಿಸಿದ್ದಾರೆ. ಆದರೆ ನೈಜವಾಗಿ ಉಭಯ ತಿಟ್ಟುಗಳ ನಡುವೆ ಸೌಹಾರ್ದ ಸಂಬಂಧ, ಸಾಮೀಪ್ಯವಿದೆ. ಹೀಗಾಗಿ ಇವೆರಡನ್ನು ಪ್ರತ್ಯೇಕವಾದ ಕಲಾಪ್ರಕಾರದಂತೆ, ಪ್ರಭೇದದಂತೆ ಗುರುತಿಸುವುದು ಸರಿಯಲ್ಲ.

 ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next