ಉಡುಪಿ: ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹೊಸದಿಲ್ಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ವಿಕಸಿತ ಭಾರತ ‘ಯಂಗ್ ಲೀಡರ್ ಡೈಲಾಗ್’ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ “ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ರಾಷ್ಟ್ರ ಮಟ್ಟದ ಯುವ ಪ್ರತಿಭೆಗಳ 2 ದಿನಗಳ ಅಧಿವೇಶನ ದಿಲ್ಲಿಯಲ್ಲಿ ಜ.11, 12 ರಂದು ನಡೆಯಲಿದೆ. ಭಾರತಾದ್ಯಂತದ 3 ಸಾವಿರ ಯುವಕ, ಯುವತಿಯರು ಇದರಲ್ಲಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತ ಯೂತ್ ಐಕಾನ್ಗಳು ವಿದ್ಯಾರ್ಥಿಗಳ ತಂಡದಲ್ಲಿ ಲೀಡರ್ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಗೆದ್ದು ರಾಷ್ಟ್ರಮಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 300 ವಿದ್ಯಾರ್ಥಿಗಳಂತೆ 3000 ವಿದ್ಯಾರ್ಥಿಗಳ 10 ತಂಡ ರಚನೆಯಾಗಲಿದ್ದು, ಆತ ತಂಡಗಳಿಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ.
ತಂಡದ ಸ್ಪರ್ಧಾಳುಗಳಿಗೆ ಮಾರ್ಗದರ್ಶಕರಾಗಿ ವಿಶೇಷ ಆಹ್ವಾನಿತ ಯುತ್ ಐಕಾನ್ಗಳು ಕಾರ್ಯನಿರ್ವಹಿಸಲಿದ್ದಾರೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದ ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಕೇಂದ್ರದ ವಿವಿಧ ಇಲಾಖೆಯ ಮಂತ್ರಿಗಳು, ಅಧಿ ಕಾರಿಗಳು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪರಿಣಿತರೊಂದಿಗೆ ಸಂವಾದ ನಡೆಯಲಿದೆ.
ಮನು ಶೆಟ್ಟಿಯವರು ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪ್ರಥಮ ಬಿ.ಎ. ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದಾರೆ. ಅಂತಾರಾಷ್ಟ್ರೀಯ ಸಂಸ್ಥೆ ಜೆಸಿಐ ಪಡುಬಿದ್ರಿಯ ಸದಸ್ಯೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ದಂಪತಿ ಪುತ್ರಿ.
”ವಿಕಸಿತ ಭಾರತ’ ಯಂಗ್ ಲೀಡರ್ ಡೈಲಾಗ್’ ಅಧಿ ವೇಶನದಲ್ಲಿ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಆದರೆ ನಮ್ಮನ್ನು ವಿಶೇಷ ಯುತ್ ಐಕಾನ್ ಆಗಿ ಆಹ್ವಾನಿಸಿದ್ದಾರೆ. ಎಬಿವಿಪಿಯಿಂದ ಹಲವರ ಪಟ್ಟಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಗೆ ಕಳುಹಿಸಲಾಗಿತ್ತು. ಕರ್ನಾಟಕದಿಂದ ನಾನು ಮತ್ತು ಬೆಂಗಳೂರಿನ ಗಗನ್ ಎಂಬುವರು ಆಯ್ಕೆಯಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುವ ಈ ಕಾರ್ಯಕ್ರಮದಲ್ಲಿ ಯೂತ್ ಐಕಾನ್ ಆಗಿ ಭಾಗವಹಿಸಲು ಅವಕಾಶ ಸಿಕ್ಕಿರುವುದಕ್ಕೆ ತುಂಬ ಖುಷಿಯಿದೆ.”
-ಮನು ಶೆಟ್ಟಿ.