ಅಹಮದಾಬಾದ್: ಅತ್ಯಂತ ರೋಮಾಂಚನಕಾರಿಯಾಗಿ ನಡೆದ ವಿಜಯ್ ಹಜಾರೆ ಟ್ರೋಫಿಯ ಪಂಜಾಬ್ ವಿರುದ್ದ ಪಂದ್ಯದಲ್ಲಿ ಕರ್ನಾಟಕ ತಂಡವು ಒಂದು ವಿಕೆಟ್ ಅಂತರದ ಗೆಲುವು ಸಾಧಿಸಿದೆ. ಮೊದಲ ಪಂದ್ಯವಾಡಿದ ವೇಗಿ ಅಭಿಲಾಶ್ ಶೆಟ್ಟಿ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಸಾಹಸದಿಂದ ಕೂಟದ ಮೂರನೇ ಗೆಲುವು ಕರ್ನಾಟಕ ಪಾಲಿಗೆ ಒಲಿಯಿತು.
ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ಬಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 49.2 ಓವರ್ ಗಳಲ್ಲಿ 247 ರನ್ ಮಾಡಿದರೆ, ಕರ್ನಾಟಕವು 47.3 ಓವರ್ ಗಳಲ್ಲಿ ಒಂಬತ್ತು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.
ಟಾಸ್ ಗೆದ್ದ ಕರ್ನಾಟಕ ತಂಡವು ಮೊದಲು ಬೌಲಿಂಗ್ ನಡೆಸಲು ತೀರ್ಮಾನಿಸಿತು. ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ನಿರ್ಧಾರವನ್ನು ಬೌಲರ್ ಗಳಾದ ಅಭಿಲಾಶ್ ಶೆಟ್ಟಿ, ವಿ ಕೌಶಿಕ್ ಸಮರ್ಥಿಸಿಕೊಂಡರು. ಪಂಜಾಬ್ ಪರ ಕೆಲವು ಬ್ಯಾಟರ್ ಗಳು ಆರಂಭ ಪಡೆದರಾದರೂ ದೊಡ್ಡ ಇನ್ನಿಂಗ್ಸ್ ಕಟ್ಟಲಾಗಲಿಲ್ಲ. ಅನ್ಮೋಲ್ ಪ್ರೀತ್ ಸಿಂಗ್ 51 ರನ್, ಅನ್ಮೋಲ್ ಮಲ್ಹೋತ್ರಾ 42 ರನ್, ನೇಹಾಲ್ ವಧೇರಾ 37 ರನ್ ಮತ್ತು ಸನ್ವೀರ್ ಸಿಂಗ್ 35 ರನ್ ಮಾಡಿದರು.
ವಿಜಯ್ ಹಜಾರೆ ಟ್ರೋಫಿ ಪದಾರ್ಪಣೆ ಮಾಡಿದ ಎಡಗೈ ವೇಗಿ ಅಭಿಲಾಶ್ ಶೆಟ್ಟಿ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಮಿಂಚಿದರು. 10 ಓವರ್ ಎಸೆದ ಅಭಿಲಾಶ್ 44 ರನ್ ನೀಡಿ ಐದು ವಿಕೆಟ್ ಗೊಂಚಲು ಪಡೆದರು. ಕೌಶಿಕ್ ಮತ್ತು ನಿಕಿನ್ ಜೋಸ್ ತಲಾ ಎರಡು ವಿಕೆಟ್ ಕಿತ್ತರು. ಒಂದು ವಿಕೆಟ್ ಶ್ರೇಯಸ್ ಗೋಪಾಲ್ ಪಾಲಾಯಿತು.
248 ರನ್ ಗಳ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ನಾಯಕ ಮಯಾಂಕ್ ಅಗರ್ವಾಲ್ ಅವರು ಆಸರೆಯಾಗಿ ನಿಂತರು. ಆದರೆ ಉಳಿದ್ಯಾವ ಬ್ಯಾಟರ್ ಗಳು ನಾಯಕನಿಗೆ ಸಾಥ್ ನೀಡಿ ಇನ್ನಿಂಗ್ಸ್ ಕಟ್ಟುವ ಪ್ರಯತ್ನ ಮಾಡಲಿಲ್ಲ. ನಾಯಕನ ಆಟವಾಡಿದ ಮಯಾಂಕ್ 127 ಎಸೆತಗಳಲ್ಲಿ ಅಜೇಯ 139 ರನ್ ಮಾಡಿದರು. ಉಳಿದಂತೆ 29 ರನ್ ಗಳಿಸಿದ ಶ್ರೇಯಸ್ ಗೋಪಾಲ್ ಅವರದ್ದೇ ಹೆಚ್ಚಿನ ಗಳಿಕೆ.
ಕೊನೆಯಲ್ಲಿ ಡ್ರಾಮಾ
ಒಂದು ಹಂತದಲ್ಲಿ ಕರ್ನಾಟಕ ಸುಲಭ ಗೆಲುವು ಸಾಧಿಸಬಹುದು ಎಂಬ ಸ್ಥಿತಿಯಲ್ಲಿತ್ತು. ಆದರೆ 200 ರನ್ ಗೆ ಆರು ವಿಕೆಟ್ ಹಂತದಲ್ಲಿದ್ದ ತಂಡವು 203ಕ್ಕೆ 9 ವಿಕೆಟ್ ಕಳೆದುಕೊಂಡಿತು. ಆದರೆ ಕೊನೆಯ ವಿಕೆಟ್ ಗೆ ವಿ ಕೌಶಿಕ್ ಜೊತೆಗೆ ನಿಂತ ಮಯಾಂಕ್ 48 ರನ್ ಗಳ ಜೊತೆಯಾಟವಾಡಿದರು. ದಿಟ್ಟ ಹೋರಾಟ ನಡೆಸಿದ ಮಯಾಂಕ್ ಕರ್ನಾಟಕಕ್ಕೆ ಮೂರನೇ ಗೆಲುವು ತಂದಿತ್ತರು.
ಪಂಜಾಬ್ ಪರವಾಗಿ ನಾಯಕ ಅಭಿಷೇಕ್ ಶರ್ಮಾ ನಾಲ್ಕು ವಿಕೆಟ್ ಪಡೆದರೆ, ಅರ್ಶದೀಪ್ ಮತ್ತು ಸನ್ವೀರ್ ಸಿಂಗ್ ಎರಡು ಪಡೆದರು.