ಕರಾವಳಿಯಿಂದ ಗಾಂಧಿನಗರದಕ್ಕೆ ಸಿನಿಮಾ ಮಾಡಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಸಾಲಿಗೆ ಹೊಸ ಸೇರ್ಪಡೆ “ಕುಡ್ಲ ನಮ್ದು ಊರು’ ತಂಡ. ಹೀಗೊಂದು ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಹಾಗೂ ಹಾಡು ಬಿಡುಗಡೆಯಾಯಿತು.
ಕೃತಾರ್ಥ ಪ್ರೊಡಕ್ಷನ್ಸ್ನಡಿ ನಿರ್ಮಾಣವಾಗಿ ರುವ ಕುಡ್ಲ ನಮ್ದು ಊರು ಸಿನೆಮಾವನ್ನು ಯುವ ಪ್ರತಿಭೆ ದುರ್ಗಾಪ್ರಸಾದ್ ಮತ್ತು ಆರ್ಯ ಡಿ. ಕೆ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಯುವನಟ ದುರ್ಗಾಪ್ರಸಾದ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಉಳಿದಂತೆ ರಮೇಶ್, ಪ್ರಕಾಶ್ ತುಮ್ಮಿನಾಡು, ಸ್ವರಾಜ್ ಶೆಟ್ಟಿ, ಶ್ರೇಯಾ ಶೆಟ್ಟಿ, ಅನಿಕಾ ಶೆಟ್ಟಿ, ನಯನ ಸಾಲಿಯಾನ್, ನಿರೀûಾ ಶೆಟ್ಟಿ, ದಿಲೀಪ್ ಕಾರ್ಕಳ, ಪ್ರಜ್ವಲ್ ಮೊದಲಾದವರು ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ದುರ್ಗಾಪ್ರಸಾದ್, ಸಿನೆಮಾದ ಟೈಟಲ್ ಹೇಳುವಂತೆ, ಇದೊಂದು ಅಪ್ಪಟ ದಕ್ಷಿಣ ಕನ್ನಡದ ಕರಾವಳಿ ಸೊಗಡಿನ ಸಿನೆಮಾ. ಇಡೀ ಸಿನೆಮಾವನ್ನು ಕರಾವಳಿ ಮತ್ತು ಅಲ್ಲಿನ ಜನ-ಜೀವನವನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ತೆರೆಗೆ ತರಲಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ಒಂದಷ್ಟು ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಸಿನೆಮಾ ರೂಪದಲ್ಲಿ ತೆರೆಗೆ ತರುತ್ತಿದ್ದೇವೆ. 1990ರ ದಶಕದ ಹುಡುಗರ ಬಾಲ್ಯ, ಅವರ ಅನುಭವವನ್ನು ಈ ಸಿನೆಮಾ ನೆನಪಿಸುತ್ತದೆ. ಬಹುತೇಕ ಕರಾವಳಿ ಭಾಗದ ಸ್ಥಳೀಯ ಕಲಾವಿದರೇ ಈ ಸಿನೆಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಕರಾವಳಿಯ ಕಥೆಯಾದರೂ, ಕರ್ನಾಟಕದ ಎಲ್ಲಾ ಭಾಗದ ಜನರಿಗೂ ತಲುಪುವಂತಿದೆ. ಹಾಗಾಗಿ ಈ ಸಿನೆಮಾವನ್ನು ತುಳು ಭಾಷೆಯ ಬದಿಗೆ ಕನ್ನಡ ಭಾಷೆಯಲ್ಲೇ ನಿರ್ಮಿಸಿದ್ದೇವೆ. ಪ್ರೀತಿ, ಸ್ನೇಹ, ಆಕ್ಷನ್, ಕಾಮಿಡಿ ಹೀಗೆ ಎಲ್ಲಾ ಥರದ ಮನರಂಜನಾತ್ಮಕ ಅಂಶಗಳೂ ಈ ಸಿನೆಮಾದಲ್ಲಿದೆ’ ಎನ್ನುತ್ತಾರೆ.
ಕುಡ್ಲ ನಮ್ದು ಊರು ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ನಟಿ ಶ್ರೇಯಾ ಶೆಟ್ಟಿ ಮಾತನಾಡಿ, ನಾನು ಈ ಸಿನೆಮಾದಲ್ಲಿ ನಾಯಕಿಯ ಸೋದರಿಯ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಸಾಕಷ್ಟು ಎಮೋಶನ್ಸ್ ಇರುವಂಥ ಪಾತ್ರವಿದು. ಸಿನೆಮಾ ಕೂಡ ತುಂಬ ಸೊಗಸಾಗಿ ಮೂಡಿಬಂದಿದೆ. ಈ ಸಿನೆಮಾದಿಂದ ಸಾಕಷ್ಟು ಕಲಿತಿದ್ದೇನೆ. ಸಿನೆಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯಿದ್ದು, ಸಿನೆಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದೇನೆ ಎಂದರು.
ಸಿನೆಮಾದಲ್ಲಿ ಮೂರು ಹಾಡುಗಳಿದ್ದು, ಈ ಹಾಡುಗಳಿಗೆ ನಿತಿನ್ ಶಿವರಾಮ್ ಸಂಗೀತ ಸಂಯೋಜಿಸಿದ್ದಾರೆ. ಸಿನೆಮಾಕ್ಕೆ ಶ್ರೀಶಾಸ್ತ ಹಿನ್ನೆಲೆ ಸಂಗೀತ, ಮಯೂರ್ ಛಾಯಾಗ್ರಹಣ, ನಿಶಿತ್ ಪೂಜಾರಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರಕ್ಕೆ ರಕ್ಷಿತ್ ಎಸ್. ಜೋಗಿ ನೃತ್ಯ ಮತ್ತು ಚಂದ್ರು ಬಂಡೆ ಸಾಹಸ ಸಂಯೋಜಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಸಿನೆಮಾದ ಚಿತ್ರೀಕರಣ ನಡೆಸಲಾಗಿದೆ.