ಬೆಂಗಳೂರು: ಕರ್ನಾಟಕ ರೆಡ್ಡಿ ಜನಸಂಘದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಅಡ್ಡಿಯಾಗಿರುವ ತಾಂತ್ರಿಕ ದೋಷ ಸರಿಪಡಿಸಿ, ಶೀಘ್ರ ಅನುಮತಿ ನೀಡುವಂತೆ ಸರ್ಕಾರದ ಮನವೊಲಿಸುವುದಾಗಿ ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಭರವಸೆ ನೀಡಿದ್ದಾರೆ.
ಕರ್ನಾಟಕ ರೆಡ್ಡಿಜನ ಸಂಘ ಕೋರಮಂಗಲದ ವೇಮನ ತಾಂತ್ರಿಕ ವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ರೆಡ್ಡಿ ಜನಸಂಘದ ನೂತನ ಕಟ್ಟಡ ಸಮುತ್ಛಯದ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೋರಮಂಗಲ ಕಸವನಹಳ್ಳಿಯಲ್ಲಿ ರೆಡ್ಡಿ ಜನಸಂಘ ನಿರ್ಮಿಸುತ್ತಿರುವ ವೈದ್ಯಕೀಯ ಕಾಲೇಜಿಗೆ ಕೆಲ ವರ್ಷಗಳ ಹಿಂದೆಯೇ ಸರ್ಕಾರ ಕಸವನಹಳ್ಳಿಯಲ್ಲಿ 20 ಎಕರೆ ಜಮೀನು ಮಂಜೂರು ಮಾಡಿತ್ತು.
ಕೆಲವು ತಾಂತ್ರಿದ ದೋಷದಿಂದ ಕಾಲೇಜಿನ ಅನುಮತಿ ಸ್ಥಗಿತಗೊಂಡಿತ್ತು. ಈ ಹಿಂದಿನ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿತ್ತು. ಆದರೆ ಕೆಲವು ತಾಂತ್ರಿಕ ದೋಷಗಳಿಂದ ಆದೇಶ ತಡವಾಗಿದೆಯಷ್ಟೇ. ಈ ಕುರಿತು ಅಧಿಕಾರಿಗಳಿಗೆ ದೋಷ ಗುರುತಿಸಿ ಶೀಘ್ರವೇ ಸರಿಪಡಿಸಿ ಸೂಚಿಸಲಾಗುವುದು. ಇದರ ಜತೆಗೆ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯ ಸವಲತ್ತುಗಳನ್ನು ಕಲ್ಪಿಸಲು ಸರ್ಕಾರದ ಮನವೊಲಿಸುವುದಾಗಿ ಆಶ್ವಾಸನೆ ನೀಡಿದರು.
ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಸಣ್ಣ ಸಂಘವಾಗಿ ಸ್ಥಾಪನೆಯಾದ ಕರ್ನಾಟಕ ರೆಡ್ಡಿ ಜನಸಂಘ ಇದೀಗ ಸುಮಾರು ಏಳುವರೆ ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದೆ. ಕೇವಲ ರೆಡ್ಡಿ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಇತರ ಜಾತಿ, ಜನಾಂಗಗಳ ಮಕ್ಕಳಿಗೂ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಒದಗಿಸಿದ್ದು, ಈ ಮೂಲಕ ಸಮಾಜಕ್ಕೆ ತನ್ನದೇಯಾದ ಕೊಡುಗೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಈ ಜನಸಂಘವು ಡೀಮ್ಡ್ ವಿಶ್ವವಿದ್ಯಾಲಯ ಸ್ಥಾಪಿಸುವ ಮಟ್ಟಕ್ಕೆ ಬೆಳೆಯಬೇಕಿದೆ.
ಇನ್ನು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಸಮುದಾಯ ಒಗ್ಗೂಡಬೇಕು ಎಂದು ಸಲಹೆ ನೀಡಿದರು. ಹರಿಹರ ತಾಲೂಕು ಎರೆಹೊಸಳ್ಳಿ ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಸೌಮ್ಯಾರೆಡ್ಡಿ, ಕರ್ನಾಟಕ ರೆಡ್ಡಿಜನ ಸಂಘದ ಅಧ್ಯಕ್ಷ ಎಚ್.ಎನ್.ವಿಜಯರಾಘವರೆಡ್ಡಿ, ಬೆಳಗಾವಿ ವಿಟಿಯು ಕುಲಸಚಿವ ಡಾ.ಎಚ್.ಎನ್.ಜಗನ್ನಾಥ ರೆಡ್ಡಿ ಉಪಸ್ಥಿತರಿದ್ದರು.