Advertisement

Road Mishap; ಅರ್ಕುಳ: ರಸ್ತೆ ಅಪಘಾತದಲ್ಲಿ ಯುವ ಯಕ್ಷಗಾನ ಕಲಾವಿದ ಸಾವು

11:56 PM Dec 31, 2024 | Team Udayavani |

ಮಂಗಳೂರು: ನಗರ ಹೊರವಲಯದ ಅರ್ಕುಳ ಜಂಕ್ಷನ್‌ ಬಳಿ ಮಂಗಳವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿ, ಯಕ್ಷಗಾನ ಕಲಾವಿದ ಮೃತಪಟ್ಟಿದ್ದಾರೆ.

Advertisement

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಯಾಗಿದ್ದು, ಸಸಿಹಿತ್ಲು ಭಗವತೀ ಯಕ್ಷಗಾನ ಮೇಳದ ಕಲಾವಿದ ಪ್ರವೀತ್‌ ಕುಮಾರ್‌ (22) ಮೃತಪಟ್ಟವರು. ಮೇಳದಲ್ಲಿ ಸ್ತ್ರೀವೇಷಧಾರಿಯಾಗಿದ್ದ ಪ್ರವೀತ್‌ ಮಂಗಳವಾರ ಬಜಪೆ ಕಂದಾವರ ಬೈಲಿನಲ್ಲಿ ನಿಗದಿಯಾಗಿದ್ದ ಮೇಳದ ಯಕ್ಷಗಾನಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಅರ್ಕುಳ ಜಂಕ್ಷನ್‌ ಬಳಿ ಬೈಕ್‌ ಸ್ಕಿಡ್‌ ಆಗಿ ರಸ್ತೆಗೆ ಬಿದ್ದಿದ್ದು, ಈ ವೇಳೆ ಐಸ್‌ಕ್ರೀಂ ಸಾಗಿಸುತ್ತಿದ್ದ ವಾಹನ ಪ್ರವೀತ್‌ ಮೇಲೆ ಹರಿದಿದೆ. ಇದರ ಪರಿಣಾಮ ಪ್ರವೀತ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಗಳೂರು ನಗರ ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಸಿಹಿತ್ಲು ಮೇಳದ ಈ ಬಾರಿಯ ಪ್ರಮುಖ ಪ್ರಸಂಗ “ಕತೆಗಾರ್ತಿ ಕಲ್ಪನಾ’ದಲ್ಲಿ ಅವರು ಪ್ರಮುಖ ಪಾತ್ರವಾದ “ಕಲ್ಪನಾ’ ಪಾತ್ರ ಮಾಡುತ್ತಿದ್ದರು.

ಬೆಳ್ತಂಗಡಿ ಬದ್ಯಾರು ಮೂಲ
ಪ್ರವೀತ್‌ ಬೆಳ್ತಂಗಡಿ ತಾಲೂಕು ಬದ್ಯಾರು ಮುಂಡೂರು ಮೂಲದವರಾಗಿದ್ದು, ಶೇಖರ ಎಂಬವರ ಮೂವರು ಪುತ್ರರಲ್ಲಿ ಎರಡನೆಯವರಾಗಿದ್ದರು. ಅಣ್ಣ ಕೆಲಸ ಮಾಡಿಕೊಂಡಿದ್ದು, ತಮ್ಮ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಎಂಎಸ್‌ಡಬ್ಲ್ಯು ಕಲಿಯಲು ಆಸಕ್ತಿ ಹೊಂದಿದ್ದ ಅವರಿಗೆ ವಿಟ್ಲ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಶಿಕ್ಷಣದ ಕಾರಣಕ್ಕಾಗಿ ಅವರು ಮಂಗಳೂರಿನ ಚಿಕ್ಕಮ್ಮನ ಮನೆಯಲ್ಲಿ ನೆಲೆಸಿದ್ದರು. ಮಂಗಳೂರಿನಿಂದಲೇ ಪ್ರತಿನಿತ್ಯ ಬೈಕ್‌ನಲ್ಲಿ ಬಿಸಿರೋಡ್‌ ವರೆಗೆ ತೆರಳಿ ಅಲ್ಲಿಂದ ಬಸ್ಸಿನಲ್ಲಿ ವಿಟ್ಲಕ್ಕೆ ಕಾಲೇಜಿಗೆ ತೆರಳುತ್ತಿದ್ದರು. ಅದರಂತೆ ಮಂಗಳವಾರವೂ ಕಾಲೇಜಿಗೆ ತೆರಳಿದ್ದು, ಬಿ.ಸಿ.ರೋಡ್‌ನಿಂದ ಬೈಕ್‌ನಲ್ಲಿ ವಾಪಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ.

Advertisement

ಮೂರನೇ ವರ್ಷದ ತಿರುಗಾಟ
ಸಸಿಹಿತ್ಲು ಮೇಳದಲ್ಲಿ ಈ ಬಾರಿ ಮೂರನೇ ವರ್ಷದ ತಿರುಗಾಟ ನಡೆಸುತ್ತಿದ್ದರು. ಸಸಿಹಿತ್ಲು ಭಗವತಿ ಕ್ಷೇತ್ರ ಮಹಾತೆ¾ಯಲ್ಲಿ ದೇವಿಯ ಪಾತ್ರವನ್ನೂ ಮಾಡುತ್ತಿದ್ದರು. ಆರಂಭದಲ್ಲಿ ವಿವಿಧ ಸ್ತ್ರೀ ಹಾಗೂ ಇತರ ವೇಷಗಳನ್ನು ಮಾಡುತ್ತಿದ್ದ ಅವರು ಯಕ್ಷಗಾನದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಸುಂಕದಕಟ್ಟೆ ಕಾಲೇಜಿನಲ್ಲಿ ಕಲಿಯುತ್ತಿದ್ದ ವೇಳೆ ಸುಂಕದಕಟ್ಟೆ ಮೇಳದಲ್ಲಿಯೂ ಒಂದು ವರ್ಷ ಪಾತ್ರ ಮಾಡಿದ್ದರು. ಕಾಲೇಜು ಮುಗಿಸಿ ಯಕ್ಷಗಾನದಲ್ಲಿ ಪಾತ್ರ ಮಾಡುವ ಮೂಲಕ ಶಿಕ್ಷಣದ ಜತೆಗೆ ಮನೆಗೂ ನೆರವಾಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next