ಕಾಸರಗೋಡು: ನಗರದ ಜನರಲ್ ಆಸ್ಪತ್ರೆ ಮೆಡಿಕಲ್ ಕಾಲೇಜು ಆಗಿ ಭಡ್ತಿಗೊಳ್ಳಲಿದೆ. ಈಗಿರುವ ಹೆಸರನ್ನು ವೈದ್ಯಕೀಯ ಕಾಲೇಜು ಆಗಿ ಪರಿವರ್ತಿಸುವ ಅಧಿಕೃತ ಅಧಿಸೂಚನೆಯನ್ನು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈಗಾಗಲೇ ಹೊರಡಿಸಿದ್ದಾರೆ.
ಜನರಲ್ ಆಸ್ಪತ್ರೆಯಲ್ಲಿ ಈಗಿರುವ ಎಲ್ಲ ಸೌಕರ್ಯಗಳನ್ನು ಸರಕಾರಿ ವೈದ್ಯಕೀಯ ಕಾಲೇಜಿನ ಭಾಗವನ್ನಾ ಗಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜನರಲ್ ಆಸ್ಪತ್ರೆಯ ಹೆಲ್ತ್ ಸರ್ವಿಸಸ್ ಡೈರೆಕ್ಟರ್‌ರಿಂದ ಆರಂಭಗೊಂಡು ಎಲ್ಲ ವೈದ್ಯರು ಇನ್ನು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದು ವರಿಯುವರು.
ಕಾಸರಗೋಡಿಗೆ ಮಂಜೂರು ಮಾಡಲಾಗಿರುವ ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಅಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸಲು, ಅಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಲು 220 ಹಾಸಿಗೆ ಸೌಕರ್ಯ ಹೊಂದಿರುವ ಆಸ್ಪತ್ರೆಯ ಅಗತ್ಯವಿದೆ. ಮಾತ್ರವಲ್ಲ ಆಸ್ಪತ್ರೆ ಆರಂಭಗೊಂಡ ಬಳಿಕ ಮೂರು ವರ್ಷಗಳ ಸೇವಾ ಅನುಭವ ಹೊಂದಿರಬೇಕೆಂಬ ಮಾನದಂಡಗಳೂ ಪಾಲಿಸಿದಲ್ಲಿ ಮಾತ್ರವೇ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸಾಧ್ಯ. ಆದ್ದರಿಂದ ಉಕ್ಕಿನಡ್ಕದ ಕಾಲೇಜು ಕಟ್ಟಡ ಕೆಲಸ ಪೂರ್ಣಗೊಂಡು ಅಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆಗೆ ಅಗತ್ಯವಿರುವಷ್ಟು ಹಾಸಿಗೆ ಸೌಕರ್ಯ ಏರ್ಪಡಿಸಿ ಅದರಂತೆ ಚಿಕಿತ್ಸೆ ಆರಂಭಗೊಂಡು ಮೂರು ವರ್ಷ ಪೂರೈಸಿದ ಬಳಿಕವಷ್ಟೇ ಉಕ್ಕಿನಡ್ಕದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಸಾಧ್ಯವಾಗಲಿದೆ. ಸದ್ಯ ಉಕ್ಕಿನಡ್ಕದಲ್ಲಿ ಅಂತಹ ಸೌಕರ್ಯಗಳಿಲ್ಲ. ಆದ್ದರಿಂದ ವೈದ್ಯಕೀಯ ಕಾಲೇಜನ್ನು ಈಗ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ.
2025-26ನೇ ವರ್ಷದ ಎಂಬಿಬಿಎಸ್ ಕೋರ್ಸ್ ಮುಂದಿನ ವರ್ಷ ಜನರಲ್ ಆಸ್ಪತ್ರೆಯಲ್ಲಿ ಆರಂಭಿಸುವ ಸಾಧ್ಯತೆಯಿದೆ. ಪ್ರಥಮ ವರ್ಷ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶ ನೀಡಲಾಗುವುದು. ವೈದ್ಯಕೀಯ ಆಯೋಗದ ಪರಿಶೀಲನೆಯ ಬಳಿಕವಷ್ಟೇ ಈ ವಿಷಯದಲ್ಲಿ ಅಂತಿಮ ತೀರ್ಮಾನವಾಗಲಿದೆ.