Advertisement

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

06:50 PM Jan 04, 2025 | Vishnudas Patil |

ವಿಜಯಪುರ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಪ್ರಕರಣದಲ್ಲಿ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಚಿನ್ ಕುಮಾರ್ ಪಾಟೀಲ್ ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

Advertisement

ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ನೀಡಿರುವ ದೂರಿನ ಮೇರೆಗೆ ಆರೋಪಿ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಕಳೆದ ಜುಲೈನಲ್ಲಿ ಈ ಕೃತ್ಯ ನಡೆದಿದೆ. ಇದೀಗ ಜನವರಿ 2ರಂದು ವಿದ್ಯಾರ್ಥಿನಿಯರು ಮನಗೂಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಪ್ರಾಂಶುಪಾಲ ವಿದ್ಯಾರ್ಥಿನಿಯರ ಮೈ-ಕೈ ಮುಟ್ಟುವುದು ಹಾಗೂ ಅಪ್ಪಿಕೊಳ್ಳುತ್ತಿದ್ದ. ಪ್ರತಿರೋಧಿಸಿದರೆ, ಪರೀಕ್ಷೆಯಲ್ಲಿ ಫೇಲ್ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಂಶುಪಾಲನ ಕಿರುಕುಳದಿಂದಾಗಿ ವಿದ್ಯಾರ್ಥಿನಿಯೊಬ್ಬಳು ಒಮ್ಮೆ ಅರ್ಧಕ್ಕೆ ಕಾಲೇಜು ಬಿಟ್ಟು ಬಂದಿದ್ದಳು. ಅಲ್ಲದೇ, ಮೊದಲ ಸೆಮಿಸ್ಟರ್ ಪರೀಕ್ಷೆಯಲ್ಲಿ ಉದ್ದೇಶಪೂರ್ವಕವಾಗಿ ಒಂದು ವಿಷಯದಲ್ಲಿ ಫೇಲ್ ಮಾಡಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಸಹಕರಿಸಿದರೆ, ಕಾಲೇಜಿಗೆ ಟಾಪರ್ ಮಾಡುತ್ತೇನೆ. ಮುಂದೆ ಉದ್ಯೋಗ ಪಡೆಯಲು ನೆರವಾಗುವುದಾಗಿ ಹೇಳುತ್ತಿದ್ದ. ಜತೆಗೆ ಈ ವಿದ್ಯಾರ್ಥಿನಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಸಹ ಮಾಡುತ್ತಿದ್ದ. ಮತ್ತೊಬ್ಬ ವಿದ್ಯಾರ್ಥಿನಿಗೆ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಹೋದಾಗಲೂ ಕಿರುಕುಳ ನೀಡಲಾಗಿತ್ತು ಎಂದು ದೂರಲಾಗಿದೆ. ಈ ದೂರಿನ ಆಧಾರದಡಿ ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next