Advertisement
ದಿನ ಕಳೆದಂತೆ ಹೈಟೆಕ್ ಪಟ್ಟಣಗಳಿಗೆ ಸಮಾನವಾದ ವೇಗದಲ್ಲಿ ಬೆಳ್ಳಾರೆಯೂ ಬೆಳೆಯುತ್ತಿದೆ. ಪ್ರತಿಯೊಂದಕ್ಕೂ ಸುಳ್ಯದತ್ತ ಮುಖ ಮಾಡುತ್ತಿದ್ದ ಜನ ಹತ್ತಿರದಲ್ಲೇ ಪರ್ಯಾಯ ವ್ಯವಸ್ಥಗಳಿರುವುದರಿಂದ ಬೆಳ್ಳಾರೆ ಪೇಟೆಗೆ ಬರುತ್ತಿದ್ದಾರೆ. ಪ್ರಯಾಣಿಕರು, ಗ್ರಾಹಕರ ಸಂಖ್ಯೆ ಬೆಳೆದಂತೆ ವಾಹನ ದಟ್ಟಣೆಯೂ ಹೆಚ್ಚುತ್ತಿದೆ. ಪಟ್ಟಣದ ಯಾವ ಪ್ರದೇಶದಲ್ಲೂ ಸರಿಯಾದ ವಾಹನ ವ್ಯವಸ್ಥೆಯಿಲ್ಲದೆ ವಾಹನಗಳನ್ನು ರಸ್ತೆಯ ಮೇಲೆಯೇ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಇದರಿಂದಾಗಿ ಬೆಳ್ಳಾರೆ ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಬಹಳ ತೊಡಕಾಗುತ್ತಿದೆ. ಹಲವಾರು ಬಾರಿ ದೊಡ್ಡ ಪಟ್ಟಣಗಳಂತೆ ಇಲ್ಲಿಯೂ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಕೂಡ ಆಗುತ್ತಿರುತ್ತದೆ. ವಾಹನ ಸವಾರರಿಗೆ ಅಪಘಾತಗಳು ತಪ್ಪಿದ್ದಲ್ಲ. ಇವುಗಳನ್ನೆಲ್ಲ ಸಂಬಾಳಿಸುತ್ತಾ ದಿನದ ಅಂತ್ಯಕ್ಕೆ ಪೊಲೀಸರು ಬಸವಳಿದು ಹೋಗುತ್ತಾರೆ.
ಬೆಳ್ಳಾರೆ ಪಂಚಾಯತ್ ನ ನಿರ್ಲಕ್ಷ್ಯವೂ ಇಲ್ಲಿಯ ಕೆಳಪೇಟೆಯಲ್ಲಿ ಅವ್ಯವಸ್ಥೆಯಿಂದ ಕೂಡಿದ ಚರಂಡಿಯಿಂದ ಗೋಚರಕ್ಕೆ ಬರುತ್ತದೆ. ಇಲ್ಲಿ ಮಲಿನವಾದ ಚರಂಡಿಯ ನೀರು ರಭಸದ ಮಳೆ ಬಂದರೆ ರಸ್ತೆಯ ಮೇಲೆಯೇ ಹರಿಯುತ್ತದೆ. ಇದರಿಂದಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಬೆಳ್ಳಾರೆಯ ಜನತೆಯನ್ನು ಬಾಧಿಸುತ್ತಿದೆ. ಚರಂಡಿಯಿಂದ ಮುಖ್ಯರಸ್ತೆ ಸಾಕಷ್ಟು ಎತ್ತರದಲ್ಲಿದೆ. ಚರಂಡಿಗಳ ಬದಿಯಲ್ಲಿ ಕಲ್ಲುಗಳ ತಡೆಗೋಡೆ ಇಲ್ಲದೆ ಅದರೊಳಗೆ ಮಕ್ಕಳು, ದ್ವಿಚಕ್ರ ವಾಹನಗಳು ಜಾರಿ ಬೀಳುವ ಅಪಾಯವಿದೆ. ಸುಳ್ಯದಂತೆ ಬೆಳ್ಳಾರೆಯಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಗೆ ಕ್ರಮ ಕೈಗೊಳ್ಳಬೇಕಿದೆ. ರಸ್ತೆಯ ಇಕ್ಕೆಲಗಳಲ್ಲಿ ದಿನಕ್ಕೆ ಒಂದು ಬದಿಯಂತೆ ಮೇಲಿನ ಪೇಟೆಯಿಂದ ಕೆಳಗಿನ ಪೇಟೆಯ ವರೆಗೆ ವಾಹನಗಳನ್ನು ನಿಲ್ಲಿಸುವ ನಿಯಮ ರೂಪಿಸಬೇಕಿದೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಬೆಳ್ಳಾರೆ ಗ್ರಾ.ಪಂ. ಇದನ್ನು ಜಾರಿಗೆ ತರಬೇಕು. ಈ ಮೂಲಕ ಟ್ರಾಫಿಕ್ ಜಾಮ್ ನಿಯಂತ್ರಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Related Articles
ನಾವು ಹಲವು ಬಾರಿ ಸಭೆ ಕರೆದಿದ್ದು, ಸಮಸ್ಯೆ ನಿವಾರಣೆಗೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ವಾಹನ ಪಾರ್ಕಿಂಗ್ ಗೆ ಸ್ಥಳ ಗೊತ್ತು ಮಾಡಿದ್ದು, ದೊಡ್ಡ ವಾಹನಗಳನ್ನು ಅಲ್ಲಿಯೇ ನಿಲ್ಲಿಸುವಂತೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ದ್ವಿಚಕ್ರ-ನಾಲ್ಕು ಚಕ್ರದ ವಾಹಗಳನ್ನು ದಿನಕ್ಕೊಂದು ಬದಿಯಂತೆ ನಿಲ್ಲಿಸುವಂತೆ ಮಾಡಲಾಗುತ್ತದೆ. ಚರಂಡಿ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಸೂಚಿಸಲಾಗುತ್ತದೆ.
– ಶಕುಂತಳಾ ನಾಗರಾಜ್, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷರು
Advertisement
ದಂಡ, ಎಚ್ಚರಿಕೆಇರುವುದರಲ್ಲಿಯೇ ಹೊಂದಿಕೊಂಡು ನಮ್ಮ ಶಕ್ತಿ ಮೀರಿ ಸಂಚಾರ ಹಾಗೂ ವಾಹನ ದಟ್ಟಣೆಯನ್ನು ನಿಯಂತ್ರಿಸುತ್ತಿದ್ದೇವೆ. ಅಡ್ಡಾದಿಡ್ಡಿಯಾಗಿ ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸಿ, ಎಚ್ಚರಿಕೆ ನೀಡುವ ಮೂಲಕ ಇದೀಗ ತಕ್ಕಮಟ್ಟಿಗೆ ಹದ್ದುಬಸ್ತಿನಲ್ಲಿ ಇಡಲಾಗಿದೆ. ಇದಕ್ಕಾಗಿ ಹಲವಾರು ಯೋಜನೆಗಳು ರೂಪುಗೊಂಡಿದ್ದು ಜಾರಿಗೆ ಬಂದರೆ ಟ್ರಾಫಿಕ್ ಹತೋಟಿಗೆ ತರಬಹುದು.
– ಪೊಲೀಸ್ ಅಧಿಕಾರಿ, ಬೆಳ್ಳಾರೆ — ಬಾಲಚಂದ್ರ ಕೋಟೆ