Advertisement

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

02:32 PM Jan 10, 2025 | Team Udayavani |

ಕುಂದಾಪುರ: ಅರಾಟೆಯ 58 ವರ್ಷ ಹಳೆಯ ಸೇತುವೆ ಸಂಚಾರಕ್ಕೆ ಯೋಗ್ಯವಲ್ಲದ ಕಾರಣಕ್ಕೆ ಜಿಲ್ಲಾಡಳಿತ ವಾಹನ ಸಂಚಾರ ನಿರ್ಬಂಧಿಸಿದೆ. ಇದರಿಂದ ಹೊಸ ಸೇತುವೆಯಲ್ಲಿಯೇ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸಿಗ್ನಲ್‌ ಲೈಟ್‌, ಮುನ್ನೆಚ್ಚರಿಕೆ ಫಲಕ ಸಹಿತ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಅಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದೆ.

Advertisement

ಸೌಪರ್ಣಿಕಾ ನದಿಗೆ ಅಡ್ಡಲಾಗಿ ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ-66ರ ಮುಳ್ಳಿಕಟ್ಟೆ ಸಮೀಪದ ಅರಾಟೆಯಲ್ಲಿ 1966ರಲ್ಲಿ ನಿರ್ಮಿಸಿರುವ ಹಳೆಯ ಸೇತುವೆಯಲ್ಲಿ ಕಳೆದ ವರ್ಷದ ನವೆಂಬರ್‌ ನಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಮುಂಜಾಗ್ರತಾ ಕ್ರಮಗಳಿಲ್ಲ
ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ರಾತ್ರಿ – ಹಗಲೆನ್ನದೇ ಬೈಕ್‌, ಕಾರು, ರಿಕ್ಷಾದಂತಹ ವಾಹನಗಳಿಂದ ಹಿಡಿದು, ಬಸ್‌ ಗಳು, ಸರಕು ಸಾಗಾಟದ ಘನ ವಾಹನಗಳು ಸೇರಿದಂತೆ ಪ್ರತಿ ದಿನ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಈಗ ಹೆದ್ದಾರಿಯ ಒಂದೇ ಮಾರ್ಗದಲ್ಲಿ ಎರಡೂ ಕಡೆಗಳ ವಾಹನಗಳನ್ನು ಬಿಡಲಾಗುತ್ತಿದ್ದು, ಆದರೆ ಇಲ್ಲಿ ಸರಿಯಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣ ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿದೆ. ಡೈವರ್ಶನ್‌ ತೆಗೆದುಕೊಳ್ಳುವಲ್ಲಿ ಸಿಗ್ನಲ್‌ ಲೈಟ್‌ ಅಳವಡಿಸಿದ್ದರೂ, ಅದು ಕೆಲ ದಿನಗಳಿಂದ ರಾತ್ರಿ ವೇಳೆ ಉರಿಯುತ್ತಿಲ್ಲ.

ಹೊಸ ಸೇತುವೆಯಲ್ಲಿ ಬೆಳಕಿನ ವ್ಯವಸ್ಥೆಯಿಲ್ಲ. ಡೈವರ್ಶನ್‌ ಇರುವ ಬಗ್ಗೆ 500 ಮೀ. ಆಚೆ ಹಾಗೂ 500 ಮೀ. ಈಚೆ ಮುನ್ನೆಚ್ಚರಿಕೆ ಫಲಕ ಸಹ ಅಳವಡಿಸಿಲ್ಲ. ಇದರಿಂದ ಡೈವರ್ಶನ್‌ ಪಡೆಯಬೇಕು ಅನ್ನುವುದು ಅಲ್ಲಿಗೆ ಬಂದಾಗಲೇ ತಿಳಿಯುತ್ತಿದೆ.

Advertisement

ಸಂಚಾರ ವ್ಯವಸ್ಥೆ ಬದಲಿಸಿದ 10 ದಿನದೊಳಗೆ ಟಾಟಾ ಏಸ್‌ ವಾಹನ ಬೈಕ್‌ಗೆ ಢಿಕ್ಕಿ ಹೊಡೆದು, ಬೈಕ್‌ ಸವಾರರೊಬ್ಬರು ಸಾವನ್ನಪ್ಪಿದ್ದರು. ಸಂಜೆಯಿಂದ ರಾತ್ರಿ 9-10 ಗಂಟೆಯವರೆಗೆ ಆದರೂ ನಿಧಾನವಾಗಿ ಸಂಚರಿಸುವಂತೆ ಕ್ರಮಕೈಗೊಳ್ಳಲು ಪೊಲೀಸ್‌ ಸಿಬಂದಿ ನೇಮಿಸಿ ಎಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಹಳೆಯದು ದುರಸ್ತಿಯೋ? ಹೊಸ ಸೇತುವೆಯೋ?
ಸಂಚಾರ ಯೋಗ್ಯವಲ್ಲ ಅನ್ನುವ ಕಾರಣಕ್ಕೆ ಹಳೆಯ ಸೇತುವೆಯಲ್ಲಿ ಸಂಚಾರವನ್ನು ನಿರ್ಬಂಧಿಸಿದೆ. ಹಾಗಂತ ಇಲ್ಲಿ ಇನ್ನೊಂದು ಹೊಸ ಸೇತುವೆ ನಿರ್ಮಾಣದ ಬಗ್ಗೆ ಎರಡು ತಿಂಗಳಾಗುತ್ತಿದ್ದರೂ, ಯಾವುದೇ ಬೆಳವಣಿಗೆ ನಡೆದಿಲ್ಲ. ಹಳೆಯ ಸೇತುವೆಯನ್ನು ದುರಸ್ತಿ ಮಾಡಿ, ಸಂಚಾರಕ್ಕೆ ಬಳಸುತ್ತಾರೆಯೇ? ಅಥವಾ ಈ ಸೇತುವೆ ತೆರವು ಮಾಡಿ, ಹೊಸ ಸೇತುವೆ ನಿರ್ಮಿಸುತ್ತಾರೆಯೇ ಅನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಅಪಘಾತ ಆಗದಂತೆ ಎಚ್ಚರ ವಹಿಸಿ
ಸರಿಯಾದ ಸಿಗ್ನಲ್‌ ಲೈಟ್‌ ವ್ಯವಸ್ಥೆಯಿಲ್ಲ. ಮುಂಜಾಗ್ರತಾ ಫಲಕಗಳಿಲ್ಲ. ವಿದ್ಯುತ್‌ ದೀಪ ಅಳವಡಿಸಿಲ್ಲ. ನಾನು ದಿನವೂ ಸಂಚರಿಸುವವನು. ನನಗೆ ಡೈವರ್ಶನ್‌ ಇರುವ ಬಗ್ಗೆ ಗೊತ್ತಿದೆ. ಆದರೆ ಹೊಸಬರಿಗೆ ಗೊತ್ತಿರಲ್ಲ. ಹೆಮ್ಮಾಡಿ, ಮುಳ್ಳಿಕಟ್ಟೆಯಲ್ಲಿಯೇ ಡೈವರ್ಶನ್‌ ಇರುವ ಬಗ್ಗೆ ನಿಧಾನವಾಗಿ ಸಂಚರಿಸಿ ಅನ್ನುವ ಮುನ್ನೆಚ್ಚರಿಕೆ ಫಲಕ ಹಾಕಲಿ.
– ಚೇತನ್‌ ಮೊಗವೀರ, ಹಕ್ಲಾಡಿ

ಎನ್‌ಐಟಿಕೆ ವರದಿಬರಬೇಕಿದೆ…
ಅರಾಟೆಯಲ್ಲಿ ಪರ್ಯಾಯ ಕ್ರಮಗಳ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಬರೆಯಲಾಗಿದೆ. ಅವರ ಅನುಮತಿ ಸಿಕ್ಕ ಬಳಿಕ ಸುರತ್ಕಲ್‌ನ ಎನ್‌ಐಟಿಕೆ ತಂಡ ಬಂದು ಅಧ್ಯಯನ ನಡೆಸಲಿದೆ. ಹಳೆಯ ಸೇತುವೆಯನ್ನು ದುರಸ್ತಿ ಮಾಡಿದರೆ ಎಷ್ಟು ವರ್ಷ ಸಂಚರಿಸಬಹುದು. ಇಲ್ಲದಿದ್ದರೆ ಅದನ್ನು ತೆರವು ಮಾಡಿ ಅಲ್ಲಿ ಹೊಸ ಸೇತುವೆ ನಿರ್ಮಿಸಬೇಕಾ ಅನ್ನುವ ಬಗ್ಗೆ ವರದಿ ನೀಡಲಿದೆ. ಸಂಚಾರ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಐಆರ್‌ಬಿಯವರೆಗೆ ಈಗಾಗಲೇ ಸೂಚನೆ ನೀಡಲಾಗಿದೆ.
– ದಯಾನಂದ್‌, ಎಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ರಾ.ಹೆ.66 ವಿಭಾಗ)

*ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next