Advertisement

Mangaluru: ನಗರದ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌

03:54 PM Dec 28, 2024 | Team Udayavani |

ಮಹಾನಗರ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ಪಾರ್ಕಿಂಗ್‌ ಸಮಸ್ಯೆಗೆ ತಕ್ಕ ಮಟ್ಟಿನ ಪರಿಹಾರವೆಂಬಂತೆ ಮಂಗಳೂರು ಮಹಾನಗರ ಪಾಲಿಕೆಯು ಲಭ್ಯವಿರುವ ಸ್ಥಳಗಳಲ್ಲಿ ‘ಪೇ ಪಾರ್ಕಿಂಗ್‌’ ವ್ಯವಸ್ಥೆ ಮಾಡಲು ಮುಂದಾಗಿದೆ. ಇದಕ್ಕಾಗಿ ಸುಮಾರು 18 ಸ್ಥಳಗಳನ್ನು ಗುರುತಿಸಲಾಗಿದೆ.

Advertisement

ಮೂರು ವರ್ಷಗಳ ಹಿಂದೊಮ್ಮೆ ಒಂದೆರಡು ಸ್ಥಳಗಳಲ್ಲಿ ಪೇ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಅನಂತರ ಅದು ಸ್ಥಗಿತಗೊಂಡಿತ್ತು. ಇದೀಗ ಈ ಹಿಂದೆ ಗುರುತಿಸಲಾಗಿರುವ ಸ್ಥಳಗಳು ಸೇರಿದಂತೆ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌ ಆರಂಭಿಸಲು ಚಿಂತನೆ ನಡೆಸಲಾಗಿದೆ. ಎರಡು ಕಡೆಗಳಲ್ಲಿ ಪೇ ಪಾರ್ಕಿಂಗ್‌ ಮತ್ತೆ ಕಾರ್ಯರೂಪಕ್ಕೆ ಬಂದಿದೆ.

ಉದ್ದೇಶವೇನು?
ನಗರದಲ್ಲಿ ಪಾರ್ಕಿಂಗ್‌ಗೆ ಸ್ಥಳಾವಕಾಶ ಕೊರತೆ ಹೆಚ್ಚುತ್ತಿದೆ. ಮಲ್ಟಿಲೆವೆಲ್‌ ಕಾರು ಪಾರ್ಕಿಂಗ್‌ ಯೋಜನೆ ಕೂಡ ಪೂರ್ಣಗೊಂಡಿಲ್ಲ. ನಗರದ ಕೆಲವೆಡೆ ರಸ್ತೆ ಬದಿಯಲ್ಲಿಯೂ ವಾಹನಗಳ ಪಾರ್ಕಿಂಗ್‌ಗೆ ಸ್ಥಳಾವಕಾಶವಿದೆ. ಆದರೆ ಈಗ ಅಂತಹ ಸ್ಥಳಗಳಲ್ಲಿ ಮನಸೋ ಇಚ್ಛೆ ಎಂಬಂತೆ ಪಾರ್ಕಿಂಗ್‌ ಮಾಡಲಾಗುತ್ತಿದೆ. ಇದು ಪಾರ್ಕಿಂಗ್‌ ಅವ್ಯವಸ್ಥೆಗೆ, ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ಇದಕ್ಕೆ ಪರಿಹಾರ ರೂಪವಾಗಿ ಪೇ ಪಾರ್ಕಿಂಗ್‌ ಜಾರಿಗೆ ತರಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಜತೆ ಪಾಲಿಕೆಗೆ ಆದಾಯವೂ ಸಂಗ್ರಹವಾಗುತ್ತದೆ ಎಂಬುದು ಲೆಕ್ಕಾಚಾರ.

ಸ್ವತ್ಛತೆಯ ಕೊರತೆ
ಬಾವುಟಗುಡ್ಡೆಯಲ್ಲಿ ಕಾಂಕ್ರೀಟ್‌ ರಸ್ತೆ ಪಕ್ಕ ಝಿಗ್‌ಝ್ಯಾಗ್‌ನ ನಡುವೆ ಪೇ ಪಾರ್ಕಿಂಗ್‌ ಇದೆ. ಇದು ಸಮತಟ್ಟಾಗಿದ್ದು ಸ್ವತ್ಛವೂ ಆಗಿದೆ. ಆದರೆ ಹಂಪನಕಟ್ಟೆಯ ಪಿರೇರಾ ಹೊಟೇಲ್‌ ಮುಂಭಾಗ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನಗೃಹದ ಎದುರು ಇರುವ ಪೇ ಪಾರ್ಕಿಂಗ್‌ ಜಾಗದಲ್ಲಿ ಸ್ವತ್ಛತೆಯ ಕೊರತೆ ಇದೆ. ಇಲ್ಲಿ ರಾಶಿಬಿದ್ದಿರುವ ತ್ಯಾಜ್ಯ ತೆಗೆದು ಇಂಟರ್‌ಲಾಕ್‌ ಅಳವಡಿಸಿದರೆ ವಾಹನ ಪಾರ್ಕಿಂಗ್‌ ವ್ಯವಸ್ಥಿತವಾಗಿ ಮಾಡಬಹುದಾಗಿದೆ.

ಎಷ್ಟು ಶುಲ್ಕ?
ಪೇ ಪಾರ್ಕಿಂಗ್‌ ವ್ಯವಸ್ಥೆಯಡಿ ದ್ವಿಚಕ್ರ ವಾಹನಕ್ಕೆ ಮೊದಲ ಒಂದು ತಾಸಿಗೆ (ಕನಿಷ್ಠ) 5 ರೂ., ಅನಂತರ ಪ್ರತಿ ಗಂಟೆಗೆ 3 ರೂ. ಶುಲ್ಕ ವಿಧಿಸಲಾಗುತ್ತದೆ. ಕಾರುಗಳಿಗೆ ಮೊದಲ ಒಂದು ತಾಸಿಗೆ 10 ರೂ., ಅನಂತರದ ಪ್ರತಿ ಗಂಟೆಗೆ 3 ರೂ. ಶುಲ್ಕವಿದೆ. ಸದ್ಯ ಎರಡು ಕಡೆ ಇದೇ ಶುಲ್ಕದಲ್ಲಿ ಪೇ ಪಾರ್ಕಿಂಗ್‌ ನಡೆಯುತ್ತಿದೆ.

Advertisement

ಎಲ್ಲೆಲ್ಲಿ ಪೇ ಪಾರ್ಕಿಂಗ್‌?
ಸದ್ಯ ಬಾವುಟಗುಡ್ಡೆ ಮತ್ತು ಹಂಪನಕಟ್ಟೆಯ ಒಂದು ಸ್ಥಳದಲ್ಲಿ ಪೇ ಪಾರ್ಕಿಂಗ್‌ ಇದೆ. ಲಾಲ್‌ಬಾಗ್‌ ಮತ್ತು ಕ್ಲಾಕ್‌ಟವರ್‌ ಬಳಿ ಶೀಘ್ರ ಆರಂಭಗೊಳ್ಳಲಿದೆ. ಉಳಿದಂತೆ ಆರ್‌ಟಿಒ ಕಚೇರಿ ಬಳಿ, ಸ್ಟೇಟ್‌ಬ್ಯಾಂಕ್‌, ಬೀಬಿ ಅಲಾಬಿ ರಸ್ತೆ, ಜ್ಯೋತಿ, ಬಲ್ಮಠ, ಹಂಪನಕಟ್ಟೆ ಮೊದಲಾದ ಪ್ರದೇಶಗಳಲ್ಲಿ ಪೇ ಪಾರ್ಕಿಂಗ್‌ಗೆ ಸ್ಥಳ ಗುರುತಿಸಲಾಗಿದ್ದು ಪಾಲಿಕೆಯ ಸಾಮಾನ್ಯಸಭೆಯಲ್ಲಿ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಸಹಕರಿಸಿದರೆ ಯಶಸ್ವಿ
ಪೇ ಪಾರ್ಕಿಂಗ್‌ನಿಂದ ಪಾರ್ಕಿಂಗ್‌ ಅವ್ಯವಸ್ಥೆ ಕಡಿಮೆಯಾಗುತ್ತದೆ. ಆದರೆ ಇದರ ನಿರ್ವಹಣೆ ಸವಾಲಿನ ಕೆಲಸ. ಸಿಬಂದಿಯ ಕೊರತೆಯೂ ಇದೆ. ಹೆಚ್ಚಿನ ಮಂದಿ ಚಾಲಕರು ಸ್ಪಂದಿಸುತ್ತಾರೆ. ಕೆಲವು ವಾಹನಗಳ ಚಾಲಕರು ಸರಿಯಾಗಿ ಸ್ಪಂದಿಸುತ್ತಿಲ್ಲ. ವಾಹನ ಚಾಲಕ, ಮಾಲಕರು ಸಹಕರಿಸಿದರೆ ಇದು ಯಶಸ್ವಿಯಾಗುತ್ತದೆ.
– ಶರತ್‌, ಪೇ ಪಾರ್ಕಿಂಗ್‌ ನಿರ್ವಾಹಕರು

ಇನ್ನಷ್ಟು ವಿಸ್ತರಣೆ
ಪೇ ಪಾರ್ಕಿಂಗ್‌ನ್ನು ನಗ ರದ ಸುಮಾರು 18 ಸ್ಥಳಗಳಿಗೆ ವಿಸ್ತರಿ ಸಲು ನಿರ್ಧರಿಸಿದ್ದೇವೆ. ಪಾಲಿಕೆ ಸಾಮಾನ್ಯಸಭೆಯಲ್ಲಿ ಅನುಮೋ ದನೆ ಪಡೆದುಕೊಂಡು ಮುಂದುವರಿ ಯುತ್ತೇವೆ. ಪೇ ಪಾರ್ಕಿಂಗ್‌ನಿಂದ ಪಾರ್ಕಿಂಗ್‌ಗೆ ಲಭ್ಯವಿರುವ ಸ್ಥಳವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಬಹುದು.
-ಆನಂದ್‌ ಸಿ.ಎಲ್‌., ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ

-ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next