ಮಂಗಳೂರಿನಲ್ಲಿಯೂ ಬೆಂಗಳೂರು ಮಾದರಿಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆಯೇ ಎಂಬ ಪ್ರಶ್ನೆ ನಗರದ ಜನರಲ್ಲಿ ಮೂಡಿದೆ. ಇದಕ್ಕೆ ಕಾರಣ ಇತ್ತೀಚೆಗಿನ ದಿನಗಳಲ್ಲಿ ನಗರದಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಜಾಮ್, ಪಾರ್ಕಿಂಗ್ ಅವ್ಯವಸ್ಥೆ. ಈ ಸಮಸ್ಯೆ ನಗರ ಬೆಳೆಯುತ್ತ ಬಂದಂತೆ ಹೆಚ್ಚುತ್ತ ಹೋಗಿದ್ದು ಈಗ ಉಲ್ಬಣಾವಸ್ಥೆ ತಲುಪುತ್ತಿರುವಂತಿದೆ.
ಸಮಸ್ಯೆಯನ್ನು ಬಗೆಹರಿಸಬೇಕೆಂಬ ಉದ್ದೇಶದಿಂದ ಆಡಳಿತ ವರ್ಗ, ಜನಪ್ರತಿನಿಧಿಗಳು ನಡೆಸಿರುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಒಂದೆಡೆ ಪಾಲಿಕೆ, ಇನ್ನೊಂದೆಡೆ ಪೊಲೀಸರು ಆಗಿಂದಾಗ್ಗೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ ಅವು ಅನುಷ್ಠಾನಗೊಳ್ಳುವಲ್ಲಿ ವೈಫಲ್ಯ ಕಾಣುತ್ತಿವೆ. ರಸ್ತೆಗಳು ಅಗಲಗೊಂಡರೂ ಫುಟ್‌ಪಾತ್‌ಗಳ ನಿರ್ಮಾಣವಾದರೂ ಸಂಚಾರ ಸಮಸ್ಯೆ ಪರಿಹಾರ ಕಾಣುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ವಾಣಿಜ್ಯ ಕಟ್ಟಡಗಳು ತಮ್ಮದೇ ಆದ ಪಾರ್ಕಿಂಗ್ ವ್ಯವಸ್ಥೆ ಹೊಂದದೆ ಇರುವುದು. ತಳ ಅಂತಸ್ತನ್ನು ಪಾರ್ಕಿಂಗ್‌ಗಾಗಿ ಮೀಸಲಿಡಬೇಕೆಂಬ ನಿಯಮವನ್ನು ಬಹುತೇಕ ಕಟ್ಟಡಗಳು ಗಾಳಿಗೆ ತೂರಿವೆ.
ಇದರ ಜತೆಗೆ ರಸ್ತೆ, ಫುಟ್‌ಪಾತ್‌ಗಳಲ್ಲಿಯೇ ವ್ಯಾಪಾರ ಮತ್ತೆ ಮುಂದುವರಿದಿದೆ. ಬೀದಿ ಬದಿ ವ್ಯಾಪಾರಸ್ಥರನ್ನು ತೆರವು ಮಾಡಿದ ಅನಂತರ ಕೆಲವೆಡೆ ವಾಹನ ಸಂಚಾರಕ್ಕೆ ಅನುಕೂಲವಾಗಿದೆಯಾದರೂ ಅನೇಕ ಕಡೆ ಮತ್ತೆ ಅಂತಹ ವ್ಯಾಪಾರಸ್ಥರು ಹಿಂದಿನಂತೆಯೇ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇವೆಲ್ಲವುಗಳ ನಡುವೆ ಸಂಚಾರ ನಿಯಂತ್ರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಪೊಲೀಸರು ಮತ್ತು ಪಾಲಿಕೆಯ ನಡುವೆ ಸಮನ್ವಯದ ಕೊರತೆಯಿಂದಾಗಿ ಕೆಲವು ಕ್ರಮಗಳು ಫಲ ನೀಡುತ್ತಿಲ್ಲ. ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡದ ಕಟ್ಟಡಗಳ ಮಾಲಕರ ವಿರುದ್ಧ ಕ್ರಮ ಕೈಗೊಂಡು ಪಾರ್ಕಿಂಗ್‌ಗೆ ವ್ಯವಸ್ಥೆಯಾಗುವಂತೆ ನೋಡಿಕೊಳ್ಳಬೇಕು, ರಸ್ತೆ ಆಕ್ರಮಿಸಿಕೊಂಡಿರುವ ವ್ಯಾಪಾರಸ್ಥರನ್ನು ತೆರವುಗೊಳಿಸಬೇಕು.
ಟ್ರಾಫಿಕ್ ನಿರ್ವಹಣೆಗಾಗಿ ಪೊಲೀಸರು ಇತ್ತೀಚೆಗೆ ಕೈಗೊಂಡ ಕೆಲವು ಕ್ರಮಗಳನ್ನು ಒತ್ತಡಗಳ ಕಾರಣದಿಂದ ವಾಪಸ್ ಪಡೆದಿರುವುದು, ಬದಲಾವಣೆಗಳನ್ನು ಮಾಡಿರುವುದು ಕೂಡ ಇದೆ. ಇದು ಪೊಲೀಸರಿಗೆ ಅಡ್ಡಿಯಾಗುತ್ತಿದೆ. ಹಾಗಾಗಿ ಅವರು ಕೂಡ ಹೊಸ ಸುಧಾರಣ ಕ್ರಮಗಳನ್ನು ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ. ಸಮನ್ವಯ, ಸಾಕಷ್ಟು ಪೂರ್ವ ಯೋಜಿತ ಮತ್ತು ಶಾಶ್ವತ ಕ್ರಮಗಳಿಗೆ ಮುಂದಾಗಬೇಕಿದೆ.
ರಸ್ತೆ ಅಗೆತ, ದುರಸ್ತಿ ಕಾಮಗಾರಿಗಳು ತ್ವರಿತವಾಗಿ ಮುಗಿಸಬೇಕು ಎಂಬುದು ಪೊಲೀಸರ ಬೇಡಿಕೆ. ಆದರೆ ಇದಕ್ಕೆ ಪೂರಕ ಸ್ಪಂದನೆ ದೊರೆಯುತ್ತಿಲ್ಲ ಎಂಬುದು ಅವರ ಆರೋಪ. ಪೊಲೀಸರು, ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಆಗಾಗ್ಗೆ ಸಭೆ ಸೇರಿ ಸಂಚಾರ, ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಚರ್ಚಿಸದಿದ್ದರೆ, ಅಗತ್ಯ ಕ್ರಮ ಕೈಗೊಳ್ಳಲು ಜಂಟಿಯಾಗಿ ಕಠಿನ ನಿರ್ಧಾರಗಳನ್ನು ತೆಗೆದುಕೊಳ್ಳದೆ ಹೋದರೆ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ರಸ್ತೆ ಸುರಕ್ಷ ಸಮಿತಿ, ಸಾರ್ವಜನಿಕ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರನ್ನು ಸೇರಿಸಿಕೊಂಡು ದೂರದೃಷ್ಟಿಯಿಂದ ಯೋಜನೆ ರೂಪಿಸುವ ಆವಶ್ಯಕತೆ ಇದೆ.